ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು: ಶಿವನಾಮ ಸ್ಮರಣೆಗೆ ಸಜ್ಜಾಗಿವೆ ಶಿವ ದೇವಾಲಯಗಳು

Published 8 ಮಾರ್ಚ್ 2024, 7:21 IST
Last Updated 8 ಮಾರ್ಚ್ 2024, 7:21 IST
ಅಕ್ಷರ ಗಾತ್ರ

ನಾಪೋಕ್ಲು: ಶಿವರಾತ್ರಿಉತ್ಸವಕ್ಕೆ ಇಲ್ಲಿನ ದೇವಾಲಯಗಳಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಭಾಗಮಂಡಲದ ಭಗಂಡೇಶ್ವರ ದೇವಾಲಯ, ಪೇರೂರಿನ ಇಗ್ಗುತ್ತಪ್ಪ ದೇವಾಲಯ, ಪಾಲೂರಿನ ಮಹಾಲಿಂಗೇಶ್ವರ ದೇವಾಲಯ, ಈಸ್ಟ್ ಕೊಳಕೇರಿಯ ಮಹಾದೇವ ಕೋಟ ಸೇರಿದಂತೆ ವಿವಿಧ ಶಿವ ದೇವಾಲಯಗಳು ಭಕ್ತರನ್ನು ಸೆಳೆಯುತ್ತಿವೆ.

ಭಾಗಮಂಡಲವು ಕನ್ನಿಕೆ, ಕಾವೇರಿ, ಸುಜ್ಯೋತಿಗಳ ಸಂಗಮ ತ್ರಿವೇಣಿ ಸಂಗಮದಿಂದ ಪ್ರಸಿದ್ಧವಾಗಿದೆ. ಕಾವೇರಿಯ ಉಗಮ ಸ್ಥಾನ ತಲಕಾವೇರಿಯ ಸನಿಹದ ಭಾಗಮಂಡಲವು ಭಗಂಡೇಶ್ವರ, ಸುಬ್ರಹ್ಮಣ್ಯ ಹಾಗೂ ಮಹಾವಿಷ್ಣು ದೇಗುಲ ಸಂಕೀರ್ಣಗಳಿಂದ ಕೂಡಿವೆ. 3 ದೇಗುಲಗಳ ಸಂಕೀರ್ಣಗಳಿಂದ ಕೂಡಿರುವ ಭಗಂಡ ಕ್ಷೇತ್ರ ಮೊದಲ ಅಂಕಣದಲ್ಲಿ ಮಹಾಗಣಪತಿ ದೇವಾಲಯವಿದೆ. ಭಗಂಡೇಶ್ವರ ದೇಗುಲ ಕೇರಳದ ವಾಸ್ತುಶಿಲ್ಪದ ಹಾಗೆ ಕಟ್ಟಿರುವ ಗುಡಿ, ಅಗಲವಾದ ಮೆಟ್ಟಿಲುಗಳನ್ನೇರಿ ಹೆಬ್ಬಾಗಿಲನ್ನು ಹಾದು ಒಳಗೆ ಹೋದರೆ ದೊಡ್ಡ ಅಂಗಳ. ಅದರೆ, ನಡುವಿನಲ್ಲಿ ನಾಲ್ಕು ದಿಕ್ಕುಗಳಿಗೂ ಅಗ್ರಸಾಲೆಗಳಿರುವ ಭಗಂಡೇಶ್ವರ ದೇವಾಲಯ ಇದೆ.ಇಲ್ಲಿ ಶಿವರಾತ್ರಿ ಉತ್ಸವ ವಿಜೃಂಭಣೆಯಿಂದ ಜರುಗುತ್ತದೆ.

ಕೊಡಗಿನ ಮಾತೆಯಾಗಿ ಕಾವೇರಿ ಖ್ಯಾತಿ ಪಡೆದಿದ್ದರೆ ಆರಾಧ್ಯದೈವವಾಗಿ ಇಗ್ಗುತ್ತಪ್ಪ ಕೊಡಗಿನ ಜನತೆಯ ಮನಮಂದಿರದಲ್ಲಿ ನೆಲೆಸಿದ್ದಾರೆ. ಮಡಿಕೇರಿ ತಾಲ್ಲೂಕಿನಲ್ಲಿ 3 ಇಗ್ಗುತ್ತಪ್ಪ ದೇವಾಲಯಗಳಿವೆ. ಕಕ್ಕಬ್ಬೆ, ನೆಲಜಿ ಮತ್ತು ಪೇರೂರು ಗ್ರಾಮಗಳಲ್ಲಿನ ಇಗ್ಗುತ್ತಪ್ಪ ದೇವಾಲಯಗಳು ಭಕ್ತಜನರ ನಂಬಿಕೆಯ ತಾಣಗಳಾಗಿವೆ. ಪೇರೂರು ಗ್ರಾಮದಲ್ಲಿರುವ ಬಲ್ಲತ್ತನಾಡು ಪೆರ್ಮೆ ಈಶ್ವರ ಇಗ್ಗುತ್ತಪ್ಪ ದೇವಾಲಯದಲ್ಲಿ ಪ್ರತಿವರ್ಷ ಶಿವರಾತ್ರಿಯ ದಿನದಂದು ವಾರ್ಷಿಕ ಉತ್ಸವ ಜರುಗುತ್ತವೆ.

ಜಿಲ್ಲೆಯ ದೇವಾಲಯಗಳ ಪೈಕಿ ವೈಶಿಷ್ಟ್ಯಪೂರ್ಣವಾಗಿ ಗಮನ ಸೆಳೆಯುವ ಪಾಲೂರು ಮಹಾಲಿಂಗೇಶ್ವರ ದೇವಾಲಯವು ಕಾವೇರಿ ನದಿ ತಟದಲ್ಲಿದ್ದು ಅತ್ಯಂತ ಪ್ರಾಚೀನವಾದ ದೇವಾಲಯವಾಗಿದೆ. ಈ ದೇವಾಲಯವನ್ನು 11ನೇ ಶತಮಾನಕ್ಕೂ ಹಿಂದೆಯೇ ನಿರ್ಮಿಸಲಾಗಿದ್ದು ಇದಕ್ಕೆ ಪೂರಕವಾಗಿ ಈ ದೇವಾಲಯದಲ್ಲಿ 11ನೇ ಶತಮಾನದ ಶಿಲಾಶಾಸನವಿದೆ. ಅದರಲ್ಲಿ ಪಾಲಯೂರು ಎಂದು ಬರೆಯಲಾಗಿದೆ. ಈ ದೇವಾಲಯದ ಆದಿದೈವ ಪಾಲೂರಪ್ಪ. ಈ ದೇವಾಲಯದಲ್ಲಿ ಶಿವರಾತ್ರಿ ಅಚರಣೆ ಸಂಭ್ರಮದಿಂದ ಜರುಗುತ್ತದೆ.

ಈಸ್ಟ್ ಕೊಳಕೇರಿ ಗ್ರಾಮದ ಬಿದ್ದಾಟoಡ ವಾಡೆ ಸಮೀಪದಲ್ಲಿರುವ ಶ್ರೀ ಮಹಾದೇವ ಕೋಟ ದೇವಾಲಯದಲ್ಲಿ ಪ್ರತೀವರ್ಷ ಮಹಾಶಿವರಾತ್ರಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ನಾಲ್ಕುನಾಡು ವ್ಯಾಪ್ತಿಯ ಇನ್ನೂ ಹಲವು ದೇವಾಲಯಗಳು ಶಿವರಾತ್ರಿ ಉತ್ಸವಕ್ಕೆ ಸಜ್ಜಾಗುತ್ತಿವೆ.

ಭಗಂಡೇಶ್ವರ ಸುಬ್ರಹ್ಮಣ್ಯ ಹಾಗೂ ಮಹಾವಿಷ್ಣು ದೇಗುಲ ಸಂಕೀರ್ಣಗಳ ಭಾಗಮಂಡಲ
ಭಗಂಡೇಶ್ವರ ಸುಬ್ರಹ್ಮಣ್ಯ ಹಾಗೂ ಮಹಾವಿಷ್ಣು ದೇಗುಲ ಸಂಕೀರ್ಣಗಳ ಭಾಗಮಂಡಲ
ನಾಪೋಕ್ಲು ಸಮಿಪದ ಪಾಲೂರು ಗ್ರಾಮದ ಮಹಾಲಿಂಗೇಶ್ವರ ದೇವಾಲಯ
ನಾಪೋಕ್ಲು ಸಮಿಪದ ಪಾಲೂರು ಗ್ರಾಮದ ಮಹಾಲಿಂಗೇಶ್ವರ ದೇವಾಲಯ
ಪೇರೂರು ಗ್ರಾಮದ ಇಗ್ಗುತ್ತಪ್ಪ ದೇವಾಲಯ.
ಪೇರೂರು ಗ್ರಾಮದ ಇಗ್ಗುತ್ತಪ್ಪ ದೇವಾಲಯ.

ಈಸ್ಟ್ ಮಹಾದೇವ ಕೋಟ ದೇವಾಲಯದಲ್ಲಿ ವಿಶೇಷ ಪೂಜೆ ಇಂದು

ಕೊಳಕೇರಿ ಗ್ರಾಮದ ಬಿದ್ದಾಟoಡ ವಾಡೆ ಸಮೀಪದಲ್ಲಿರುವ ಶ್ರೀ ಮಹಾದೇವ ಕೋಟ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿದೆ. ದೇವಾಲಯದಲ್ಲಿ ಮಾರ್ಚ್ 8ರಂದು ಬೆಳಿಗ್ಗೆ 9 ರಿಂದ 11 ಗಂಟೆಯವರೆಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾಕಾರ್ಯಗಳು ನಡೆಯಲಿವೆ. ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಲಿದೆ. ಸಮೀಪದ ಪೇರೂರು ಗ್ರಾಮದ ಶ್ರೀ ಈಶ್ವರ ಇಗ್ಗುತಪ್ಪ ದೇವಾಲಯದಲ್ಲಿ ಮಹಾಶಿವರಾತ್ರಿ ದಿನದಂದು ವಾರ್ಷಿಕೋತ್ಸವ ನಡೆಯಲಿದೆ. ಅಂದು ದೇವಾಲಯದಲ್ಲಿ ತುಲಾಭಾರ ಮಹಾಪೂಜೆ ಅನ್ನದಾನ ದೇವರ ನೃತ್ಯಬಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT