ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ದುರಸ್ತಿ ಕಾಣದ ಅಂತರರಾಜ್ಯ ರಸ್ತೆ

Published 23 ನವೆಂಬರ್ 2023, 5:53 IST
Last Updated 23 ನವೆಂಬರ್ 2023, 5:53 IST
ಅಕ್ಷರ ಗಾತ್ರ

ಸಿದ್ದಾಪುರ: ಇಲ್ಲಿನ ಸಿದ್ದಾಪುರ- ಕುಶಾಲನಗರ ರಸ್ತೆಯಲ್ಲಿ ಬಹುಭಾಗ ಗುಂಡಿಗಳೇ ಇದ್ದು, ಪ್ರಯಾಣಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಕೊಣನೂರು- ಮಾಕುಟ್ಟ ರಾಜ್ಯ ಹೆದ್ದಾರಿಗೆ ಒಳಪಡುವ ಈ ರಸ್ತೆಯ ವಾಲ್ನೂರು, ರಂಗಸಮುದ್ರ, ತ್ಯಾಗತ್ತೂರು ಹಾಗೂ ಒಂಟಿಯಂಗಡಿ ವ್ಯಾಪ್ತಿಯಲ್ಲಿ ಸಂಪೂರ್ಣ ಹದಗೆಟ್ಟಿದೆ. ಭಾರಿ ಗಾತ್ರದ ಗುಂಡಿಗಳಿಂದ ಕೂಡಿದೆ. ಹೊಂಡಮಯವಾದ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆಯಾಗಿದೆ.

ಇದು ಅಂತರರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಪ್ರತಿ ದಿನವೂ ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತಿವೆ. ಜಿಲ್ಲೆಯ ಪ್ರಖ್ಯಾತ ಪ್ರವಾಸಿತಾಣ ದುಬಾರೆಯು ಕೂಡ ಇದೇ ರಸ್ತೆಯ ಸಮೀಪದಲ್ಲೇ ಇದೆ. ಹೀಗಿದ್ದರೂ, ರಸ್ತೆಯ ಅಭಿವೃದ್ಧಿ ಕಡೆಗೆ ಯಾರೊಬ್ಬರೂ ಗಮನ ಹರಿಸಿಲ್ಲ.

ಈ ರಸ್ತೆಯ ಇನ್ನೂ ಕೆಲವು ಭಾಗವು ಹಲವು ವರ್ಷಗಳಿಂದ ಡಾಂಬರನ್ನೇ ಕಂಡಿಲ್ಲ. ವಾಲ್ನೂರು ಪಟ್ಟಣದ ವ್ಯಾಪ್ತಿಯಲ್ಲಿ ರಸ್ತೆಯಂತೂ ಸಂಪೂರ್ಣ ಹದಗೆಟ್ಟಿದೆ. ನಂಜರಾಯಪಟ್ಟಣದಿಂದ ರಂಗಸಮುದ್ರದವರೆಗೂ ಡಾಂಬರೀಕರಣ ಆಗಿದೆ. ಆದರೆ, ಮುಂದೆ ರಸೂಲ್‌ಪುರದವರೆಗೆ ಹೊಂಡಗಳೇ ತುಂಬಿವೆ. ಕೆಲವು ಭಾಗದಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿದ್ದು, ಸವಾರರು ಗುಂಡಿಯಿಂದ ತಪ್ಪಿಸಲು ಯತ್ನಿಸುವ ವೇಳೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ದುರಂತ ಸಂಭವಿಸುವ ಮೊದಲೇ ರಸ್ತೆಯನ್ನು ದುರಸ್ತಿ ಮಾಡಬೇಕಿದೆ.

ಈ ರಸ್ತೆಯ ಬಹುತೇಕ ಭಾಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಹಾಗಾಗಿ, ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಲ್ಲುತ್ತಿದೆ ಹಾಗೂ ರಸ್ತೆ ಶೀಘ್ರದಲ್ಲೇ ಹದಗೆಡುತ್ತಿದೆ. ಮಳೆಗಾಲದಲ್ಲಿ ನೀರು ರಸ್ತೆಯ ಮೇಲೆಯೇ ಹರಿಯುತ್ತಿರುವುದರಿಂದ ಅಪಘಾತಗಳು ಕೂಡ ಹೆಚ್ಚುತ್ತಿವೆ.

ವಾಲ್ನೂರು ಪಟ್ಟಣದಲ್ಲಿ ರಸ್ತೆ ವಿಪರೀತ ಹಾನಿಯಾಗಿದ್ದು, ಈ ಭಾಗದಲ್ಲಿ ಹಲವು ವರ್ಷಗಳಿಂದ ಡಾಂಬರೀಕರಣ ಮಾಡಿಲ್ಲ ಎಂದು ಸ್ಥಳೀಯರು ದೂರುತ್ತಾರೆ. ವಾಲ್ನೂರಿನಿಂದ ಒಂಟಿಯಂಗಡಿವರೆಗೂ ರಸ್ತೆ ಹೊಂಡಗಳಿಂದ ಕೂಡಿದೆ.

ಬೆಂಗಳೂರಿನಿಂದ ಬಂದಿದ್ದ ಪ್ರವಾಸಿ ಸೂರಜ್ ಗೌಡ ‍ಪ್ರತಿಕ್ರಿಯಿಸಿ,‘ದುಬಾರೆಗೆ ತೆರಳುತ್ತಿದ್ದೇವೆ. ಆದರೆ, ಮಾರ್ಗ ಮಧ್ಯೆ ಹಲವು ಭಾಗದಲ್ಲಿ ರಸ್ತೆಗಳು ಗುಂಡಿಗಳಿಂದ ಕೂಡಿದೆ. ಜಿಲ್ಲಾಡಳಿತ ರಸ್ತೆಯನ್ನು ದುರಸ್ತಿಗೊಳಿಸಿದರೆ ಮತ್ತಷ್ಟು ಪ್ರವಾಸಿಗರು ಆಗಮಿಸುತ್ತಾರೆ’ ಎಂದು ಹೇಳಿದರು.

ಹಾಸನದಿಂದ ಕೇರಳಕ್ಕೆ ಇದು ಸಂಪರ್ಕ ರಸ್ತೆಯಾಗಿದ್ದು ಪ್ರತಿದಿನ ನೂರಾರು ವಾಹನಗಳು ಇದೇ ರಸ್ತೆಯಲ್ಲಿ ಓಡಾಡುತ್ತಿದೆ. ಕೂಡಲೇ ದುರಸ್ತಿ ಮಾಡಬೇಕು
ಸಮದ್, ಸಾಮಾಜಿಕ ಕಾರ್ಯಕರ್ತ, ಸಿದ್ದಾಪುರ
ನಿತ್ಯ ಬಸ್‌ ಮೂಲಕ ಕುಶಾಲನಗರದ ಕಾಲೇಜಿಗೆ ತೆರಳುತ್ತಿದ್ದೇನೆ. ವಾನ್ಲೂರು ರಂಗಸಮುದ್ರ ಮುಂತಾದೆಡೆ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ಅಕ್ಷತಾ, ವಿದ್ಯಾರ್ಥಿನಿ, ವಾಲ್ನೂರು
ವಾಲ್ನೂರು ಭಾಗದಲ್ಲಿ ಮುಖ್ಯ ರಸ್ತೆಯ ಸ್ಥಿತಿ
ವಾಲ್ನೂರು ಭಾಗದಲ್ಲಿ ಮುಖ್ಯ ರಸ್ತೆಯ ಸ್ಥಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT