ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದಾಪುರ | ನರ್ಸರಿ ಬದುಕಿನ ಆದಾಯದ ಮೂಲ

ರೆಜಿತ್ ಕುಮಾರ್ ಗುಹ್ಯ
Published 28 ಜನವರಿ 2024, 7:31 IST
Last Updated 28 ಜನವರಿ 2024, 7:31 IST
ಅಕ್ಷರ ಗಾತ್ರ

ಸಿದ್ದಾಪುರ: ಈ ಊರಿನಲ್ಲಿ ಮನೆ ಮನೆಗಳಲ್ಲಿ ಕೃಷಿ ಗಿಡಗಳ ಸಸ್ಯಾಗಾರಗಳು (ನರ್ಸರಿ), ಸ್ವಯಂ ಉದ್ಯೋಗ ಕಂಡುಕೊಂಡ ಗ್ರಾಮಸ್ಥರು, ಒಂದೇ ಗ್ರಾಮದಲ್ಲಿ 40ಕ್ಕೂ ಮನೆಗಳಲ್ಲಿ ನಳನಳಿಸುತ್ತಿರುವ ಸಸ್ಯಗಳು. ಇದು ನೆಲ್ಯಹುದಿಕೇರಿಯಲ್ಲಿ ಕಂಡು ಬರುವ ದೃಶ್ಯ.

 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 80ಕ್ಕೂ ಹೆಚ್ಚು ಸಸ್ಯಾಗಾರ ಗಳಿದ್ದು, ಗ್ರಾಮದ ಮಹಿಳೆ ಯರು ಸೇರಿ ಸ್ಥಳೀಯರು ಸ್ವಯಂ ಉದ್ಯೋಗ ಕಂಡು ಕೊಂಡು, ಉತ್ತಮ ಆದಾಯ ಪಡೆದುಕೊಳ್ಳುತ್ತಿದ್ದಾರೆ. ಬರಡಿ, ನಲ್ವತ್ತೇಕ್ರೆ, ನೆಲ್ಯಹುದಿಕೇರಿ, ಬೆಟ್ಟದಕಾಡು ಭಾಗದಲ್ಲಿ ಹೆಚ್ಚು ಸಸ್ಯಾಗಾರಗಳಿದ್ದು, ಜಿಲ್ಲೆಯ ವಿವಿಧ ಭಾಗಕ್ಕೆ ಇಲ್ಲಿಂದಲೇ ಗಿಡಗಳನ್ನು ಪೂರೈಕೆ ಮಾಡಲಾಗುತ್ತಿದೆ.

ನಲ್ಯತ್ತೇಕ್ರೆ ಹಾಗೂ ಬರಡಿ ಗ್ರಾಮದಲ್ಲಿ ಸುಮಾರು 40 ಸಸ್ಯಾಗಾರಗಳಿದ್ದು, ಬಹುತೇಕ ಮನೆಗಳಲ್ಲಿ ತಮ್ಮ ಕಸುಬಿನೊಂದಿಗೆ ಉಪವೃತ್ತಿಯಾಗಿ ಇದನ್ನೇ ಅವಲಂಬಿಸಿದ್ದಾರೆ.

ಬೆಟ್ಟದಕಾಡು, ಕುಂಬಾರಗುಂಡಿ ವ್ಯಾಪ್ತಿಯಲ್ಲೂ ಹೆಚ್ಚು ನರ್ಸರಿಗಳಿವೆ. ಮನೆಯ ಸುತ್ತಲೂ ಇರುವ ಕೊಂಚ ಜಾಗದಲ್ಲಿ ಶೆಡ್ ನಿರ್ಮಿಸಿ, ವಿವಿಧ ತಳಿಯ ಗಿಡಗಳನ್ನು ಬೆಳೆಸುತ್ತಿದ್ದು, 6ರಿಂದ8 ತಿಂಗಳಿನಲ್ಲಿ ಗಿಡಗಳ ಮಾರಾಟ ಮಾಡಲಾಗುತ್ತಿದೆ. ಮನೆಯ ಬಳಿಯಲ್ಲೇ ಮಾಡುವುದರಿಂದ ಬಾಡಿಗೆ ನೀಡುವ ಅಗತ್ಯವಿಲ್ಲ ಹಾಗೂ ತಮ್ಮ ಕೆಲಸದ ಬಳಿಕ ಗಿಡಗಳ ಆರೈಕೆ ಮಾಡುತ್ತಾರೆ.

ನೆಲ್ಯಹುದಿಕೇರಿ ಗ್ರಾಮದ ನರ್ಸರಿ ಗಳಲ್ಲಿ ಕಾಫಿ, ಅಡಿಕೆ, ಕರಿಮೆಣಸು ಸೇರಿದಂತೆ ವಿವಿಧ ಗಿಡಗಳಿದ್ದು, ಗಿಡಗಳಿಗೆ ಹೆಚ್ಚು ಬೇಡಿಕೆಯಿದೆ. ರೊಬಸ್ಟಾ ಕಾಫಿಯಲ್ಲಿ ಡಾರ್ಫ್, ಪೆರಿಡೆನಿಯಾ, ಸೆಲೆಕ್ಷನ್ 724, ಅರೆಬಿಕಾ ಕಾಫಿಯಲ್ಲಿ ಕಾವೇರಿ, ಸೆಲೆಕ್ಷನ್ 795, ಕ್ಯಾಟುವಾಯ್, ಚಂದ್ರಗಿರಿ, ಅಡಿಕೆ ಗಿಡದಲ್ಲಿ ನಾಟಿ ಹಾಗೂ ತೀರ್ಥಹಳ್ಳಿ ತಳಿಗಳು ಹೆಚ್ಚು ಮಾರಾಟವಾಗುತ್ತಿವೆ.

ಕರಿಮೆಣಸಿನಲ್ಲಿ ಪನ್ನೀರ್1 ಹಾಗೂ 2, ಕರಿಮುಂಡ ಪ್ರಮುಖ ತಳಿಗಳು. ಬೆಣ್ಣೆಹಣ್ಣು, ಕಿತ್ತಳೆ, ಸಿಲ್ವರ್, ಏಲಕ್ಕಿ ಸೇರಿದಂತೆ ವಿವಿಧ ಗಿಡಗಳು ನೆಲ್ಯಹುದಿಕೇರಿ ಭಾಗದ ನರ್ಸರಿಗಳಲ್ಲಿ ಹೆಚ್ಚು ಮಾರಾಟವಾಗುತ್ತಿವೆ.

ಜನವರಿ ಆರಂಭದಲ್ಲಿ ಗಿಡಗಳನ್ನು ನೆಡುವ ಕೆಲಸ ಆರಂಭವಾಗುತ್ತಿದ್ದು, ಮೇ ವೇಳೆಗೆ ಗಿಡಗಳನ್ನು ಮಾರಾಟ ಮಾಡಬಹುದು. ಸೆಪ್ಟೆಂಬರ್ ತಿಂಗಳವರೆಗೂ ಗಿಡಗಳು ಮಾರಾಟ ವಾಗುತ್ತದೆ. ಮಳೆ, ಹವಾಗುಣಕ್ಕೆ ಅನುಸಾರವಾಗಿ ಬೆಳೆಗಾರರು ನರ್ಸರಿಗಳಿಂದ ವಿವಿಧ ಬಗೆಯ ಗಿಡಗಳನ್ನು ಕೊಂಡುಕೊಳ್ಳುತ್ತಾರೆ. ಪ್ರಸಕ್ತ ವರ್ಷ ಮಾರಾಟವಾಗದೇ ಉಳಿದ ಗಿಡಗಳನ್ನು ಎರಡನೇ ವರ್ಷ ಮಾರಾಟ ಮಾಡುತ್ತಾರೆ. ಇದಕ್ಕೆ ಬೆಲೆಯೂ ಹೆಚ್ಚಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT