ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಮ್ಮ ಜನ ನಮ್ಮ ಧ್ವನಿ: ಹಾವಿಗಿಂತ ನಿರ್ಲಕ್ಷ್ಯವೇ ವಿಷ...!

Published 4 ಮಾರ್ಚ್ 2024, 6:14 IST
Last Updated 4 ಮಾರ್ಚ್ 2024, 6:14 IST
ಅಕ್ಷರ ಗಾತ್ರ

ಮಡಿಕೇರಿ: ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಹಾವುಗಳು ಹೆಚ್ಚು, ಹಾವು ಕಡಿತವೂ ಹೆಚ್ಚು. ಆದರೆ, ಇಲ್ಲಿನ ಜನರು ಬೇರೆ ಜಿಲ್ಲೆಗಳ ಜನರಿಗಿಂತ ಹೆಚ್ಚು ಧೈರ್ಯವಂತರಾಗಿರುವುದರಿಂದ ಆಘಾತಕ್ಕೆ ಒಳಗಾಗುವುದಿಲ್ಲ. ಬದಲಿಗೆ ನಿರ್ಲಕ್ಷ್ಯ ವಹಿಸುವುದರಿಂದ ಸಾವುಗಳು ಸಂಭವಿಸುತ್ತಿವೆ.

ಕಳೆದ ವಾರ ಕುಶಾಲನಗರದ ವಿದ್ಯಾರ್ಥಿಯೊಬ್ಬ ಹಾವು ಕಡಿತಕ್ಕೆ ಮೃತಪಟ್ಟಿದ್ದು, ಸುತ್ತಮುತ್ತಲ ವ್ಯಾಪ್ತಿಯಲ್ಲಿ ಆತಂಕ ಮೂಡಿಸಿದೆ.

ಜನವರಿ ಮೊದಲ ವಾರದ ನಂತರದಿಂದ ಹಿಡಿದು ಇಲ್ಲಿಯವರೆಗೆ ಸರಿಸುಮಾರು ಎರಡು ತಿಂಗಳ ಕಾಲ ಒಂದು ಹನಿ ಮಳೆಯೂ ಬೀಳದೇ ಇರುವುದರಿಂದ ಎಲ್ಲೆಡೆ ಧಗೆ ಹೆಚ್ಚುತ್ತಿದೆ. ಬಿಸಿಲಿನ ಬೇಗೆ ತಾಳಲಾರದೇ ಹಾವುಗಳು ಬಿಲಗಳಿಂದ, ಹುತ್ತಗಳಿಂದ ಹೊರಬಂದು ತಂಪಾಗಿರುವ ಕಡೆ ವಾಸಿಸುವಂತಾಗಿದೆ. ಈ ವೇಳೆಯೇ ಹೆಚ್ಚು ಹಾವುಗಳು ಮನೆಯೊಳಗೆ ಬರುವ ಸಾಧ್ಯತೆಗಳಿದ್ದು, ಎಚ್ಚರದಿಂದಿರುವಂತೆ ವೈದ್ಯರು ಹೇಳುತ್ತಾರೆ.

ಹಾಗೆ ನೋಡಿದರೆ, ಕೊಡಗು ಜಿಲ್ಲೆಯಲ್ಲಿರುವ ಎಲ್ಲ ಪ್ರಾಥಮಿಕ ಆರೋಗ್ಯಗಳಲ್ಲೂ ಹಾವು ಕಡಿತಕ್ಕೆ ನೀಡಲಾಗುವ ಔಷಧಿ ಲಭ್ಯವಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್ ಹೇಳುತ್ತಾರೆ. ಈ ವಿಷಯ ಗೊತ್ತಿರದ ಬಹಳಷ್ಟು ಮಂದಿ ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಇದರಿಂದ ಸಮಯ ವ್ಯರ್ಥವಾಗಿ ಹಾವು ಕಡಿತಕ್ಕೆ ಒಳಗಾದವರು ಗಂಭೀರ ಸ್ಥಿತಿಗೆ ಮುಟ್ಟಿರುತ್ತಾರೆ.

ಸಮೀಪದಲ್ಲೇ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದರೆ ಅಲ್ಲಿನ ಸಿಬ್ಬಂದಿ ಒಂದು ಡೋಸೆಜ್ ಆ್ಯಂಟಿ ಸ್ನೇಕ್ ವಿನಮ್ ನೀಡಿ, ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸುತ್ತಾರೆ. ಬಹಳಷ್ಟು ಬಾರಿ ಇಷ್ಟು ಚಿಕಿತ್ಸೆಯಿಂದಲೇ ವ್ಯಕ್ತಿ ಗುಣಮುಖರಾಗುವ ಸಾಧ್ಯತೆ ಇರುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ಮತ್ತೊಮ್ಮೆ ರಕ್ತಪರೀಕ್ಷಿಸಿ ಅದರ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ.

ಇಷ್ಟೆಲ್ಲ ಅರಿವು ಇಲ್ಲದ ಜನರು ಮೊದಲಿಗೆ ಹಾವು ಕಡಿದ ತಕ್ಷಣ ತಾವೇ ಸ್ವಯಂಚಿಕಿತ್ಸೆ ಮಾಡಿಕೊಳ್ಳುತ್ತಿರುವುದು ಸಾವಿಗೆ ಕಾರಣ ಎಂದು ತಜ್ಞರು ಹೇಳುತ್ತಾರೆ. ಇದರ ಜೊತೆಗೆ, ನಾಟಿ ಔಷಧ ತೆಗೆದುಕೊಳ್ಳಲು ದೂರದ ಊರುಗಳಿಗೆ ಹೋಗುತ್ತಾರೆ. ಸಾಮಾನ್ಯವಾಗಿ ಶೇ 90ರಷ್ಟು ಹಾವುಗಳು ವಿಷಕಾರಿ ಅಲ್ಲದೇ ಇರುವುದರಿಂದ ಇಂತಹ ಹಾವು ಕಡಿತಕ್ಕೆ ಒಳಗಾದವರಿಗೆ ನಾಟಿ ಔಷಧ ಸಿದ್ಧಿಸುತ್ತದೆ. ಒಂದು ವೇಳೆ ಅವರು ಈ ಔಷಧ ತೆಗೆದುಕೊಳ್ಳದೇ ಇದ್ದರೂ ಒಂದೆರಡು ದಿನಗಳಲ್ಲಿ ಸ್ವಯಂ ಚೇತರಿಸಿಕೊಳ್ಳುವ ಅವಕಾಶವು ಇರುತ್ತದೆ. ಆಗ ನಾಟಿ ಔಷಧ ಪರಿಣಾಮಕಾರಿ ಎಂದು ಭಾವಿಸಿ ಬಹುತೇಕ ಎಲ್ಲರೂ ಮೊದಲು ನಾಟಿಔಷಧ ತೆಗೆದುಕೊಳ್ಳುತ್ತಾರೆ. ಕಚ್ಚಿರುವ ಹಾವು ವಿಷಕಾರಿಯಾಗಿದ್ದಾಗ ಈ ಔಷಧ ಕೆಲಸ ಮಾಡದೇ ಇದ್ದಾಗ ವ್ಯಕ್ತಿ ಪ್ರಜ್ಞೆ ತಪ್ಪುತ್ತದೆ. ಆಗ ಅಂತಿಮ ಹಂತದಲ್ಲಿ ಜಿಲ್ಲಾಸ್ಪತ್ರೆಗೆ ಬರುತ್ತಾರೆ ಎಂದು ಹಾವು ಕಡಿತಕ್ಕೆ ಚಿಕಿತ್ಸೆ ನೀಡುವ ವೈದ್ಯರೊಬ್ಬರು ಹೇಳಿದರು.

ಪ್ರಥಮ ಚಿಕಿತ್ಸೆ ನೆಪದಲ್ಲಿ ಸಮಯಪೋಲು!

ಕೊಡಗಿನಲ್ಲಿ ಕಂಡು ಬರುವ ಮತ್ತೊಂದು ನಿರ್ಲಕ್ಷ್ಯ ಎಂದರೆ ಪ್ರಥಮ ಚಿಕಿತ್ಸೆಯ ನೆವದಲ್ಲಿ ಸಮಯಪೋಲು ಮಾಡುವುದು. ಹಾವು ಕಚ್ಚಿದ ಕೂಡಲೇ ನೀಡಬೇಕಿರುವ ಪ್ರಥಮ ಚಿಕಿತ್ಸೆ ನೀಡದೇ ಅವೈಜ್ಞಾನಿಕವಾಗಿ ಗಾಯವನ್ನು ಬ್ಲೇಡಿನಿಂದ ಕತ್ತರಿಸಿ ಗಾಯ ದೊಡ್ಡದು ಮಾಡುವುದು. ಗಾಯದ ಮೇಲ್ಭಾಗ ಮತ್ತು ಕೆಳಭಾಗದ ಅತಿ ಬಿಗಿಯಾಗಿ ದಾರದಿಂದ, ಬಟ್ಟೆಯಿಂದ ಕಟ್ಟಿ ರಕ್ತಸಂಚಾರ ಮುಂದಿನ ಅಂಗಗಳಿಗೆ ಸಿಗದಂತೆ ಮಾಡುವುದು, ಕಚ್ಚಿರುವ ಗಾಯದಿಂದ ಬಾಯಿಯಿಂದ ವಿಷ ಹೀರುವುದು ಮೊದಲಾದ ಅವೈಜ್ಞಾನಿಕ ಕ್ರಮಗಳನ್ನು ಮಾಡುತ್ತಲೇ ಸಮಯಪೋಲು ಮಾಡುತ್ತಿರುವುದು ಸಹ ಸಾವಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ವೈದ್ಯಶಾಸ್ತ್ರ ವಿಭಾಗದ ತಜ್ಞರು ಹೇಳುತ್ತಾರೆ.

ಪ್ರಥಮ ಚಿಕಿತ್ಸೆ ನೀಡಬೇಕು ನಿಜ. ಆದರೆ, ಅದು ವೈಜ್ಞಾನಿಕವಾದ ಸರಿಯಾದ ಚಿಕಿತ್ಸೆಯಾಗಿರಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದರೆ ಅಲ್ಲಿನ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಾರೆ. ಹಾಗಾಗಿ, ಕಡಿತಕ್ಕೆ ಒಳಗಾದ ತಕ್ಷಣವೇ ಸಮೀಪದ ಆಸ್ಪತ್ರೆಗೆ ಹೋಗಲೇಬೇಕು ಎಂದು ಅವರು ಹೇಳುತ್ತಾರೆ.

ಕನಿಷ್ಠ ಪಕ್ಷ ಕಚ್ಚಿದ್ದ ಅಂಗಾಂಗವನ್ನು ಹೆಚ್ಚು ಚಾಲನೆ ಮಾಡದೇ ನೇರ ಆಸ್ಪತ್ರೆಗೆ ಹೋದರೆ ಸಾಕು ಎಂದು ಅವರು ತಿಳಿಸುತ್ತಾರೆ.

ಸರ್ಕಾರದಿಂದಲೇ ಗಂಭೀರ ಪರಿಗಣನೆ

ಭಾರತದಲ್ಲಿ ಉಂಟಾಗುವ ಹಾವು ಕಡಿತವನ್ನು ಇದೀಗ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಆರೋಗ್ಯ ಇಲಾಖೆಗಳೂ ಗಂಭೀರವಾಗಿ ಪರಿಗಣಿಸಿವೆ. ಭಾರತದಲ್ಲಿ ಉಂಟಾಗುವ ಹಾವು ಕಡಿತವನ್ನು ವಿಶ್ವ ಆರೋಗ್ಯ ಸಂಸ್ಥೆಯು ‘ಉಷ್ಣವಲಯದ ನಿರ್ಲಕ್ಷಿತ ರೋಗಗಳು’ ಎಂದು ವರ್ಗೀಕರಿಸಿದೆ. ಇದಕ್ಕೆ ಪೂರಕವಾಗಿ ಆರೋಗ್ಯ ಇಲಾಖೆಯು ಘೋಷಿತ ಕಾಯಿಲೆಗಳ ಪಟ್ಟಿಗೆ ಹಾವು ಕಡಿತವನ್ನೂ ಸೇರ್ಪಡೆ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕದಲ್ಲಿ 2023–24ರ ಸಾಲಿನಲ್ಲಿ ಹಾವು ಕಡಿತ ತಡೆಗಟ್ಟುವ ಕಾರ್ಯಕ್ರಮವನ್ನೂ ಆರಂಭಿಸಲಾಗಿದೆ.

ಹಾವು ಕಡಿತ ಚಿಕಿತ್ಸೆಗೆ ಒಳರೋಗಿ, ಹೊರರೋಗಿಯಾಗಿ ದಾಖಲಾದವರು, ಮರಣ ಉಂಟಾದ ಪ್ರಕರಣಗಳು ಸಹಿತ ಎಲ್ಲ ಮಾಹಿತಿಗಳನ್ನು ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಕಡ್ಡಾಯವಾಗಿ ಭಾರತ ಸರ್ಕಾರದ ಸಮಗ್ರ ಆರೋಗ್ಯ ಮಾಹಿತಿ ವೇದಿಕೆ (ಇಂಟೀಗ್ರೇಟಡ್ ಹೆಲ್ತ್ ಇನ್‌ಫಾರ್ಮೇಷನ್ ಪ್ಲಾಟ್‌ಫಾರಂ) ನಲ್ಲಿ  ದಾಖಲಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ನೀಡಿದೆ.

‘ಹಾವು ಕಡಿತ ಪ್ರಕರಣ ಮತ್ತು ಮರಣವನ್ನು ಅಧಿಸೂಚಿತ ರೋಗವೆಂದು ಸರ್ಕಾರ ಮೊನ್ನೆಯಷ್ಟೇ ಘೋಷಿಸಿದೆ. ಹಾವು ಕಡಿತ ಪ್ರಕರಣಗಳು ಕಂಡುಬಂದಲ್ಲಿ ಆಶಾ ಕಾರ್ಯಕರ್ತೆಯರು ತಕ್ಷಣ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ತಾಲ್ಲೂಕು ಅಥವಾ ಜಿಲ್ಲಾ ಆಸ್ಪತ್ರೆಗೆ ಉಚಿತವಾಗಿ ಆಂಬುಲೆನ್ಸ್‌ನಲ್ಲಿ ರವಾನಿಸಬೇಕು. ‘ಆ್ಯಂಟಿ ಸ್ನೇಕ್ ವೆನಮ್’ ಪಡೆದ ವ್ಯಕ್ತಿಯಲ್ಲಿ ವ್ಯತಿರಿಕ್ತ ಪ್ರತಿಕ್ರಿಯೆ ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆ ಒದಗಿಸಬೇಕು. ಹಾವು ಕಡಿತದ ಪ್ರಕರಣ ಹಾಗೂ ಮರಣವನ್ನು ಐಎಚ್‌ಐಪಿ ಪೋರ್ಟಲ್‌ನಲ್ಲಿ ವರದಿ ಮಾಡಬೇಕು’ ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.

‘ಹಾವು ಸಂರಕ್ಷಿಸುವವರಿಗೆ ನೆರವಿಲ್ಲ’

ಸೋಮವಾರಪೇಟೆ: ವಿಷಪೂರಿತ ಹಾವುಗಳನ್ನು ಹಿಡಿದು ಅವುಗಳನ್ನು  ಕಾಡಿಗೆ ಬಿಟ್ಟು ಸಂರಕ್ಷಿಸುವ ಕೆಲಸ ಮಾಡುವವರಿಗೆ ಯಾವುದೇ ನೆರವು ಇಲ್ಲ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸೋಮವಾರಪೇಟೆ ಸ್ನೇಕ್ ರಘು ‘ಹಾವು ಹಿಡಿದು ಅವುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದೇವೆ. ಆದರೆ ನಮ್ಮ ಜೀವಕ್ಕೆ ಭದ್ರತೆ ಇಲ್ಲ. ಕಳೆದ 17 ವರ್ಷಗಳಿಂದ ಸಾವಿರಾರು ಹಾವುಗಳನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಡುತ್ತಿದ್ದೇವೆ. ಇಲ್ಲಿಯವರೆಗೆ ನಮಗೆ ಸರ್ಕಾರ ಸಂಘ ಸಂಸ್ಥೆಗಳಿಂದ ಯಾವುದೇ ನೆರವಿಲ್ಲ. ಅಕಸ್ಮಾತ್ ನಮಗೆ ಹಾವು ಕಡಿದಲ್ಲಿ ನಮ್ಮ ಸ್ವಂತ ಹಣದಿಂದಲೇ ಚಿಕಿತ್ಸಾ ವೆಚ್ಚವನ್ನು ಭರಿಸಬೇಕಿದೆ. ನಮಗೂ ಸಂಸಾರ ಇದ್ದು ಸರ್ಕಾರ ನಮ್ಮ ಜೀವನಕ್ಕೂ ಭದ್ರತೆಯ ವ್ಯವಸ್ಥೆ ಕಲ್ಪಿಸಬೇಕು’ ಎಂದು ಹೇಳಿದರು.

ಮನೆ ಅಥವಾ ಕೃಷಿ ಜಮೀನಿನ ಬಳಿ ಹಾವುಗಳು ಕಂಡುಬಂದಾಗ ಅವುಗಳ ಚಲನದ ವಲನಗಳನ್ನು ನೋಡಿ ಹಾವು ಹಿಡಿಯುವವರಿಗೆ ಅಥವಾ ಸರ್ಕಾರದ 1926 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಆಗ ತಕ್ಷಣ ಅರಣ್ಯ ಇಲಾಖೆಯಿಂದ ಬಂದು ಹಾವನ್ನು ಹಿಡಿಯುವ ಕೆಲಸವಾಗುತ್ತದೆ. ಒಂದು ವೇಳೆ ಕಚ್ಚಿದರೆ ಯಾವುದೇ ಬಗೆಯ ಕೈ ಔಷಧಿ ಮಾಡದೇ ತಕ್ಷಣಕ್ಕೆ ಕೂಡಲೇ ಸಿಗುವ ವಾಹನದಲ್ಲಿ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ಅವರು ಮನವಿ ಮಾಡಿದರು.

ಯಾರು ಏನಂತಾರೆ?

ಹಾವು ಸಂಚಾರ ನಿರ್ಲಕ್ಷ್ಯ ಬೇಡ ಬೇಸಿಗೆ ಅವಧಿಯಲ್ಲಿ ಹಾವುಗಳ ಸಂಚಾರ ಹೆಚ್ಚಾಗಿರುತ್ತದೆ. ಮನೆಗಳ ಅಕ್ಕಪಕ್ಕ ಹಾವು ಕಂಡಾಗ ಅವುಗಳ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಅವುಗಳನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುವಂತೆ ಮಾಹಿತಿ ನೀಡಿದರೆ ನಾವೇ ಹೋಗಿ ಹಾವು ಹಿಡಿದು ಅರಣ್ಯಕ್ಕೆ‌ ಬಿಡುತ್ತೇವೆ. ಒಂದು ಪಕ್ಷ ಹಾವು ಕಚ್ಚಿದರೂ ಹೆದರದೆ ಗಾಬರಿ ಪಡೆದೆ ಸಮೀಪದ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು – ಸ್ನೇಕ್ ಅಬ್ದುಲ್ ಗರ್ಫೂರ್ ಕೂಡುಮಂಗಳೂರು

ಸೆಖೆ ತಡೆದುಕೊಳ್ಳಲಾರದೇ ಹಾವುಗಳು ಹೆಚ್ಚು ಓಡಾಡುವುದು ಮನೆಯೊಳಗೆ ಬರುವುದು ಹೆಚ್ಚಾಗಿದೆ. ಪಾಲಿಬೆಟ್ಟದ ವ್ಯಾಪ್ತಿಯಲ್ಲಂತೂ ಇತ್ತೀಚಿನ ದಿನಗಳಲ್ಲಿ ಹಾವು ಸಂಚಾರ ಹೆಚ್ಚಾಗಿದೆ. ಹಾವು ಕಂಡ ಕೂಡಲೇ ಅವುಗಳನ್ನು ಕೊಲ್ಲಬಾರದು ಹಾವು ಕಚ್ಚಿದ ಕೂಡಲೇ ಆಸ್ಪತ್ರೆ ಹೋಗುವುದು ಸೇರಿದಂತೆ ಹಾವುಗಳನ್ನು ಕುರಿತ ಜಾಗೃತಿ ಕಾರ್ಯಕ್ರಮಗಳನ್ನು ಸರ್ಕಾರ ಮತ್ತು ಸರ್ಕಾರೇತರ ಹೆಚ್ಚು ಹೆಚ್ಚು ಕೈಗೊಳ್ಳಬೇಕು – ಡಾ.ಎಚ್.ಎಂ.ಕಾವೇರಿ ಸಾಮಾಜಿಕ ಕಾರ್ಯಕರ್ತೆ ಪಾಲಿಬೆಟ್ಟ.

ಕಾಫಿ ಗಿಡಗಳಲ್ಲಿ ಅಪಾಯಕಾರಿ ಗೂಳಿ ಮಂಡಳ ಹಾವು ಇದೆ. ಕಾಫಿ ಕೊಯ್ಲು ಕಪಾತು ಕೆಲಸದ ವೇಳೆ ಎಚ್ಚರಿಕೆ ವಹಿಸಬೇಕು. ಇದೀಗ ಬೇಸಿಗೆಗಾಲದಲ್ಲಿ ಹಾವುಗಳು ಪೊದೆಯಿಂದ ಜನವಸತಿ ಪ್ರದೇಶಕ್ಕೆ ನೀರನ್ನು ಅರಸಿ ಬರುತ್ತಿದೆ. ನಾಗರಹಾವು ಕೊಳಕುಮಂಡಲ ಕಟ್ಟು ಹಾವು ಇತ್ಯಾದಿ ಹಾವುಗಳು ಅಪಾಯಕಾರಿ ಹಾವುಗಳು. ಹಾವು ಕಚ್ಚಿದರೆ ಕೂಡಲೇ ಸ್ಥಳೀಯ ಆಸ್ಪತ್ರೆಗೆ ತೆರಳಬೇಕು. ಅತೀ ಶೀಘ್ರದಲ್ಲಿ ಚಿಕಿತ್ಸೆ ನೀಡಬೇಕು. ಹಾವುಗಳನ್ನು ಕಂಡಲ್ಲಿ ಸಮೀಪದ ಉರಗ ಪ್ರೇಮಿಗಳಿಗೆ ಮಾಹಿತಿ ನೀಡಿ. ಸ್ವತಃ ಹಾವು ಹಿಡಿಯುವುದು ಅಪಾಯಕಾರಿ – ಸ್ನೇಕ್ ಸುರೇಶ್ ಉರಗ ಪ್ರೇಮಿ ಸಿದ್ದಾಪುರ

ಕೊಡಗು ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯಗಳಿಗೂ ಹಾವು ಕಡಿತಕ್ಕೆ ಔಷಧಗಳು ಲಭ್ಯವಿವೆ. ಹಾವು ಕಚ್ಚಿದ ಕೂಡಲೇ ತಕ್ಷಣಕ್ಕೆ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಯಾವುದೇ ನಿರ್ಲಕ್ಷ್ಯ ವಹಿಸಬಾರದು ಮೂಢನಂಬಿಕೆಗಳಿಗೆ ಬಲಿಯಾಗಬಾರದು – ಡಾ.ಕೆ.ಎಂ.ಸತೀಶ್‌ಕುಮಾರ್ ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ.

ಯಾವುದೇ ಹಾವು ಇರಲಿ ಅಥವಾ ಯಾವುದೇ ಪ್ರಾಣಿಯಾಗಲಿ ಕಚ್ಚಿದರೆ ತಕ್ಷಣವೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು. ಅವೈಜ್ಞಾನಿಕವಾದ ಪ್ರಥಮ ಚಿಕಿತ್ಸೆ ಮಾಡುತ್ತಾ ಕಾಲಹರಣ ಮಾಡಬಾರದು. ಕೂಡಲೇ ಆಸ್ಪತ್ರೆಗೆ ಬರಬೇಕು – ಡಾ.ಕೆ.ಕೃತಿಕಾ ಸಹಾಯಕ ಪ್ರಾಧ್ಯಾಪಕಿ ಸಮುದಾಯ ವೈದ್ಯಶಾಸ್ತ್ರ ವಿಭಾಗ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ.

ಮಾಹಿತಿ: ಡಿ.ಪಿ.ಲೋಕೇಶ್, ರಘು ಹೆಬ್ಬಾಲೆ, ರೆಜಿತ್‌ಕುಮಾರ್ ಗುಹ್ಯ.

 ಹಾವು ಸಂರಕ್ಷಣೆಯಲ್ಲಿ ತೊಡಗಿರುವ ಕೂಡುಮಂಗಳೂರಿನ ಸ್ನೇಕ್ ಅಬ್ದುಲ್ ಗರ್ಫೂರ್  
 ಹಾವು ಸಂರಕ್ಷಣೆಯಲ್ಲಿ ತೊಡಗಿರುವ ಕೂಡುಮಂಗಳೂರಿನ ಸ್ನೇಕ್ ಅಬ್ದುಲ್ ಗರ್ಫೂರ್  
ನಾಪೋಕ್ಲು ಬಳಿಯ ಬೇತು ಗ್ರಾಮದ ಕಾಫಿ ತೋಟವೊಂದರಲ್ಲಿ ಕಾಫಿ ಗಿಡದ ಮೇಲೆ ಕಾಣಿಸಿಕೊಂಡ ಹಸಿರುವರ್ಣದ ಹಗಲು ಕುರುಡ ಹಾವು (ಸಂಗ್ರಹ ಚಿತ್ರ)
ನಾಪೋಕ್ಲು ಬಳಿಯ ಬೇತು ಗ್ರಾಮದ ಕಾಫಿ ತೋಟವೊಂದರಲ್ಲಿ ಕಾಫಿ ಗಿಡದ ಮೇಲೆ ಕಾಣಿಸಿಕೊಂಡ ಹಸಿರುವರ್ಣದ ಹಗಲು ಕುರುಡ ಹಾವು (ಸಂಗ್ರಹ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT