ಸೋಮವಾರ, ಮಾರ್ಚ್ 30, 2020
19 °C
‘ಸುಬಾಹು ಇ-ಬೀಟ್’ ಸೇವೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌ ಚಾಲನೆ

ಪೊಲೀಸ್ ಗಸ್ತು ವ್ಯವಸ್ಥೆ ಸುಧಾರಣೆಗೆ ‘ತಂತ್ರಾಂಶ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಜಿಲ್ಲೆಯಲ್ಲಿ ಪೊಲೀಸ್‌ ಬೀಟ್‌ ವ್ಯವಸ್ಥೆ ಸುಧಾರಣೆಯಾದ ‘ಸುಬಾಹು ಇ–ಬೀಟ್‌’ ಸೇವೆಗೆ ಶುಕ್ರವಾರ ಚಾಲನೆ ನೀಡಲಾಯಿತು.

ಬೆಂಗಳೂರಿನ ‘ಸ್ಮಾರ್ಟ್ ಸೆಕ್ಯೂರ್’ ಸಂಸ್ಥೆ ರೂಪಿಸಿರುವ ‘ಸುಬಾಹು ಇ- ಬೀಟ್’ ತಂತ್ರಾಂಶವನ್ನು ಶುಕ್ರವಾರ ನಗರದ ಜಿಲ್ಲಾ ಪೊಲೀಸ್ ಕ್ರೀಡಾಂಗಣದ ಹಾಲ್‌ನಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸುಮನ್‌ ಡಿ. ಪನ್ನೇಕರ್‌ ಅವರು ಅನಾವರಣಗೊಳಿಸಿದರು.

ಸುಮನ್‌ ಡಿ. ಪನ್ನೇಕರ್‌ ಮಾತನಾಡಿ, ‘ಗಸ್ತು ಸಿಬ್ಬಂದಿ ತಮ್ಮ ಕಾರ್ಯವನ್ನು ಸೂಕ್ತವಾಗಿ ನಿರ್ವಹಿಸುತ್ತಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ತಿಳಿಯಲು ಈ ತಂತ್ರಾಂಶ ಸಹಕಾರಿ’ ಎಂದು ಹೇಳಿದರು.

ಈ ಹಿಂದೆ ರಾತ್ರಿ ಗಸ್ತನ್ನು ಕೈಬರಹದ ಮೂಲಕ ದಾಖಲಿಸಲಾಗುತ್ತಿತ್ತು. ಸಿಬ್ಬಂದಿಗಳು ನಿಗದಿತ ಸ್ಥಳಗಳಿಗೆ ತೆರಳಿ ಅಲ್ಲಿ ಸಹಿ ಮಾಡುವ ವ್ಯವಸ್ಥೆಯಿತ್ತು. ಇದೀಗ ಸುಬಾಹು ಇ-ಬೀಟ್ ಮೂಲಕ ಸಿಬ್ಬಂದಿಗಳು ತಮ್ಮ ಸ್ಮಾರ್ಟ್ ಫೋನ್ ಬಳಸಿ ಕ್ಯು–ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು. ನಿಗದಿತ ಸ್ಥಳಗಳಲ್ಲಿ ಅಂದರೆ ಗಸ್ತು ತೆರಳುವ ಮಾರ್ಗಗಳಲ್ಲಿ ‘ಕ್ಯು ಆರ್ ಕೋಡ್’ ಅನ್ನು ಸಿಬ್ಬಂದಿಗಳು ಸ್ಕ್ಯಾನ್ ಮಾಡಬೇಕಿದೆ. ಇದರಿಂದ ಸಿಬ್ಬಂದಿಗಳೂ ಸಹ ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಪಡೆಯಬಹುದು ಎಂದು ಎಸ್‌ಪಿ ಹೇಳಿದರು.

ಸುಬಾಹು ತಂತ್ರಾಂಶ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂಬ ಬಗ್ಗೆ ತಿಳಿಯಲು ಮಡಿಕೇರಿ ನಗರ, ಸೋಮವಾರಪೇಟೆ, ವಿರಾಜಪೇಟೆ, ಶನಿವಾರಸಂತೆ ಮತ್ತು ಗೋಣಿಕೊಪ್ಪಲಿನಲ್ಲಿ ಪೈಲೆಟ್ ಪ್ರಾಜೆಕ್ಟ್‌ ಅನ್ನು ಸಹ ನಡೆಸಲಾಗಿದ್ದು ತಂತ್ರಾಂಶವನ್ನು ಬಳಸಲು ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಒಟ್ಟಾರೆ 16 ಠಾಣೆಗಳಲ್ಲಿಯೂ ಸಹ ಈ ತಂತ್ರಾಂಶ ಬಳಕೆಗೆ ಇದೀಗ ಚಾಲನೆ ನೀಡಲಾಗಿದೆ ಎಂದರು.

ಕೊಡಗು ಗುಡ್ಡಗಾಡು ಪ್ರದೇಶ. ಕೆಲವು ಕಡೆಗಳಲ್ಲಿ ಅಂತರ್ಜಾಲ ಸೇವೆ ದೊರೆಯುವುದಿಲ್ಲ. ಆದರೆ, ಈ ತಂತ್ರಾಂಶ ಅಂತಹ ಸ್ಥಳಗಳಿಗೆ ಪೊಲೀಸ್ ಸಿಬ್ಬಂದಿಗಳು ಭೇಟಿಕೊಟ್ಟಾಗ ಅಗತ್ಯ ಮಾಹಿತಿಗಳನ್ನು ತನ್ನಲ್ಲಿ ಸಂಗ್ರಹಿಸಿ ಇಂಟರ್‌ನೆಟ್ ಸೇವೆ ಸಿಗುವ ಪ್ರದೇಶದಿಂದ ಮತ್ತೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಿದೆ ಎಂದರು.

ಸ್ಮಾರ್ಟ್ ಸೆಕ್ಯೂರ್ ಸಂಸ್ಥೆಯ ಮಹೇಂದ್ರ ಅವರು, ಪೊಲೀಸ್ ಇಲಾಖೆಗೆ ಈ ತಂತ್ರಾಂಶದ ಬಳಕೆ ಅತ್ಯಂತ ಅವಶ್ಯಕವಾಗಿದೆ. ಸುಬಾಹು ಅಡ್ಮಿನ್ ಅನ್ನು ಹಿರಿಯ ಅಧಿಕಾರಿಗಳಿಗಾಗಿ ಮತ್ತು ಸುಬಾಹು ಬೀಟ್ ಅನ್ನು ಬೀಟ್ ಅಧಿಕಾರಿಗಳಿಗಾಗಿ ವಿನ್ಯಾಸಗೊಳಿಸಿದ್ದು ಮೊಬೈಲ್ ಮೂಲಕವೇ ಅನೇಕ ಮಾಹಿತಿ ಪಡೆಯಲು ಪೂರಕವಾಗಿದೆ ಎಂದರು.

ವಿರಾಜಪೇಟೆ ಉಪ ವಿಭಾಗದ ಡಿವೈಎಸ್‌ಪಿ ಜಯಕುಮಾರ್, ಮಡಿಕೇರಿ ಉಪ ವಿಭಾಗದ ಡಿವೈಎಸ್‌ಪಿ ದಿನೇಶ್ ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು