ಭಾನುವಾರ, ಸೆಪ್ಟೆಂಬರ್ 19, 2021
23 °C
ಗುಡ್ಡಗಾಡು ಪ್ರದೇಶದ ನಿವಾಸಿಗಳಿಗೆ ಜಿಲ್ಲಾಡಳಿತದ ಎಚ್ಚರಿಕೆ

ಆಶ್ಲೇಷ ಮಳೆಯ ಅಬ್ಬರ | ಕೊಡಗಿನಲ್ಲಿ ಪ್ರವಾಹ ಭೀತಿ: ಸಹಾಯವಾಣಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಶ್ಲೇಷ ಮಳೆಯ ಅಬ್ಬರ ಮುಂದುವರಿದಿದೆ. ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳು ಜಿಲ್ಲೆಯಲ್ಲಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು ಪ್ರವಾಹ ಭೀತಿ ಎದುರಾಗಿದೆ.

ಕುಶಾಲನಗರ ಭಾಗದ ನಿವಾಸಿಗಳಿಗೆ ಸತತ 3ನೇ ವರ್ಷವೂ ಜಲಾವೃತದ ಆತಂಕವಿದೆ. ಭಾಗಮಂಡಲ ತ್ರಿವೇಣಿ ಸಂಗಮ ಸಂ‍ಪೂರ್ಣ ಭರ್ತಿಯಾಗಿದೆ. ಭಾಗಮಂಡಲ– ಅಯ್ಯಂಗೇರಿ ರಸ್ತೆಯ ಮೇಲೆ ಕಾವೇರಿ ನೀರು ಹರಿಯುತ್ತಿದೆ.

ಜಿಲ್ಲೆಯ ಪ್ರಮುಖ ಜಲಪಾತಗಳು ಧುಮ್ಮಿಕ್ಕುತ್ತಿವೆ. ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಭಾಗಮಂಡಲ, ಚೇರಂಬಾಣೆ ಭಾಗದಲ್ಲಿ ಭತ್ತದ ಗದ್ದೆಗಳು ಜಲಾವೃತವಾಗಿವೆ. ಗೋಣಿಕೊಪ್ಪಲು ಸಮೀಪದ ಬಾಳೆಲೆಯ ಹಳೇ ಸೇತುವೆ ಮುಳುಗಡೆಯಾಗಿದೆ.

ಮಡಿಕೇರಿ, ಮಾದಾಪುರ, ಸೋಮವಾರಪೇಟೆ ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಹಾರಂಗಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಹೊರ ಹರಿವು ಮತ್ತೆ ಹೆಚ್ಚಿಸಲಾಗಿದೆ. ಹೆಬ್ಬೆಟ್ಟಗೇರಿ, ಕಾಲೂರು, ನಾಪೋಕ್ಲು ಭಾಗದಲ್ಲಿ ಗಾಳಿಗೆ ಮರಗಳು ಉರುಳಿವೆ. ಮಡಿಕೇರಿ– ಭಾಗಮಂಡಲ ರಸ್ತೆಗೆ ಬೃಹತ್‌ ಮರ ಉರುಳಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಕೊಡಗಿನಲ್ಲಿ ಆಗಸ್ಟ್ 7ರ ವರೆಗೂ ಭಾರಿ ಮಳೆಯಾಗುವ ಮುನ್ಸೂಚನೆಯಿದ್ದು ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತವಾಗುವ ಸಾಧ್ಯತೆಯಿದ್ದು ಆ ಪ್ರದೇಶದ ನಿವಾಸಿಗಳು ಸುರಕ್ಷಿತ ಪ್ರದೇಶಕ್ಕೆ ಬರಲು ಜಿಲ್ಲಾಡಳಿತ ಕೋರಿದೆ. ಜಲಾವೃತವಾಗುವ ಪ್ರದೇಶಗಳ ಜನರು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಮನವಿ ಮಾಡಿದ್ದಾರೆ.

ಮಳೆ ತೀವ್ರಗೊಳ್ಳುತ್ತಿದ್ದು ಜಿಲ್ಲಾಡಳಿತವು ಸಹಾಯವಾಣಿ ಆರಂಭಿಸಿದೆ. ಸಾರ್ವಜನಿಕರು 1077 ಅಥವಾ ವಾಟ್ಸ್‌ಆ್ಯಪ್‌ ಸಂಖ್ಯೆ 85500 01077ಕ್ಕೆ ಸಂಪರ್ಕಿಸಬಹುದು.

24 ಗಂಟೆ ಅವಧಿಯಲ್ಲಿ ದಾಖಲಾದ ಮಳೆಯ ಪ್ರಮಾಣ (ಸೆಂ.ಮೀಗಳಲ್ಲಿ)
ಶಾಂತಳ್ಳಿ: 20.7
ಭಾಗಮಂಡಲ: 18.6
ಬಲ್ಲಮಾವಟಿ: 17.2
ಶ್ರೀಮಂಗಲ: 15
ಮಡಿಕೇರಿ: 14.1 
ನಾಪೋಕ್ಲು: 13
ಪೊನ್ನಂಪೇಟೆ: 12

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು