ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆಯಲ್ಲಿ ಅವೈಜ್ಞಾನಿಕ ಕ್ರೀಡಾ ಕಾಮಗಾರಿಗಳು

Last Updated 19 ಅಕ್ಟೋಬರ್ 2022, 13:02 IST
ಅಕ್ಷರ ಗಾತ್ರ

ಸೋಮವಾರಪೇಟೆ: ಪಟ್ಟಣದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಹಾಗೂ ಅವ್ಯವಸ್ಥಿತ ಕ್ರೀಡಾಂಗಣ ಕಾಮಗಾರಿಗಳಿಂದ ಇಲ್ಲಿನ ಕ್ರೀಡಾಪಟುಗಳು ಹೈರಣಾಗಿದ್ದಾರೆ. ಸರ್ಕಾರದ ಹಣ ವ್ಯರ್ಥವಾಗಿ ಪೋಲಾಗುತ್ತಿದ್ದು, ಇದರಿಂದ ಕ್ರೀಡಾಪಟುಗಳಿಗೆ ಯಾವುದೇ ಲಾಭವಾಗದೇ, ಕಷ್ಟದಲ್ಲೇ ಅಭ್ಯಾಸ ನಡೆಸಬೇಕಿದೆ.

ಬಾಸ್ಕೆಟ್‌ಬಾಲ್‌ ಕ್ರೀಡಾಂಗಣವನ್ನು 9 ವರ್ಷದ ಹಿಂದೆ ನೆಲಸಮ ಮಾಡಿ, ಮತ್ತೆ ಅದೇ ಜಾಗದಲ್ಲಿ ಬಾಸ್ಕೆಟ್‌ಬಾಲ್‌ ಕ್ರೀಡಾಂಗಣವನ್ನು ನಿರ್ಮಿಸಲು ಹೊರಟಿರುವುದು ಅವೈಜ್ಞಾನಿಕ ಯೋಜನೆಗೆ ಹಿಡಿದ ಕೈಗನ್ನಡಿ ಎನಿಸಿದೆ.

ಈ ಹಿಂದೆ ಪಟ್ಟಣದ ಪದವಿಪೂರ್ವ ಕಾಲೇಜಿನ ಮೈದಾನಕ್ಕೆ ಹೊಂದಿಕೊಂಡಂತೆ ಬಾಸ್ಕೆಟ್ ಬಾಲ್ ಕ್ಲಬ್‌ನವರು ಸ್ವಂತ ಹಣ ಹಾಕಿ ಸುಸಜ್ಜಿತ ಮೈದಾನ ಮಾಡಿಕೊಂಡಿದ್ದರು. ಆದರೆ, ಪಕದಲ್ಲೇ ಆಸ್ಟ್ರೋ ಟರ್ಫ್ ಮೈದಾನ ಮಾಡುವುದಕ್ಕೆಂದು ಕಷ್ಟಪಟ್ಟು ಮಾಡಿಕೊಂಡಿದ್ದ ಬಾಸ್ಕೆಟ್‌ಬಾಲ್ ಮೈದಾನವನ್ನು ಅವರ ಎದುರೇ ನೆಲಸಮ ಮಾಡಲಾಗಿತ್ತು. ಕ್ರೀಡೆಗೆ ತಮ್ಮನ್ನು ತೊಡಗಿಸಿಕೊಂಡಿದ್ದ 10 ರಿಂದ 75ರ ವಯೋಮಾನದವರೆಗಿನ ಕ್ರೀಡಾಪಟುಗಳು ನಂತರದ ದಿನಗಳಲ್ಲಿ ಚಿಕ್ಕಪುಟ್ಟ ಸ್ಥಳದಲ್ಲಿ ಕಂಬಗಳನ್ನು ನಿಲ್ಲಿಸಿಕೊಂಡು ಬೆಳಿಗ್ಗೆ ಮತ್ತು ಸಂಜೆ ಅಭ್ಯಾಸ ಮಾಡುತ್ತಿದ್ದಾರೆ.

ಶತಮಾನೋತ್ಸವ ಸಭಾಂಗಣದ ಪಕ್ಕದಲ್ಲಿರುವ ಖಾಲಿ ಸ್ಥಳದಲ್ಲಿ ಬ್ಯಾಸ್ಕೆಟ್‌ಬಾಲ್ ಕ್ರೀಡಾಂಗಣ ನಿರ್ಮಾಣ ಮಾಡಲು ಶಾಸಕ ಅಪ್ಪಚ್ಚು ರಂಜನ್ ₹ 8 ಲಕ್ಷ ವೆಚ್ಚದಲ್ಲಿ ಕಳೆದ 3 ವರ್ಷಗಳ ಹಿಂದೆ ಭೂಮಿಪೂಜೆ ನೆರವೇರಿಸಿದ್ದರು. ಆದರೆ, ದಿನ ಕಳೆದರೂ ಭೂಮಿ ಸಮತಟ್ಟು ಮಾಡುವುದು ಹೊರತುಪಡಿಸಿದಂತೆ ಬೇರಾವುದೇ ಕೆಲಸಗಳಾಗಲಿಲ್ಲ. ಈಗ ಅಲ್ಲಿ ಚೆಂಡು ಹೊರಗೆ ಹೋಗುತ್ತದೆ ಎಂದು ಈ ಹಿಂದೆ ನೆಲಸಮ ಮಾಡಲಾಗಿದ್ದ ಜಾಗಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.

ಭೂಮಿಪೂಜೆ ನೆರವೇರಿಸುವುದಕ್ಕೂ ಮುನ್ನ ಹಾಗೂ ಭೂಮಿ ಸಮತಟ್ಟು ಮಾಡುವಾಗ ಚೆಂಡು ಹೊರಗೆ ಹೋಗುತ್ತದೆ ಎಂಬ ವಿಷಯ ಗೊತ್ತಾಗಲಿಲ್ಲವೇ? ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.

ಈಗ ಬ್ಯಾಸ್ಕೆಟ್‌ಬಾಲ್‌ ಕ್ರೀಡಾಂಗಣವನ್ನು ಈ ಹಿಂದೆ ಇದ್ದ ಆಸ್ಟ್ರೋ ಟರ್ಫ್‌ಗೆ ಹೊಂದಿಕೊಂಡಂತಹ ಸ್ಥಳದಲ್ಲೇ ನಿರ್ಮಿಸಲು ನಿರ್ಧರಿಸಲಾಗಿದೆ. ಹಿಂದೆ ಟರ್ಫ್‌ ಮೈದಾನಕ್ಕೆ ಬಾಲ್‌ ಹೋಗುತ್ತದೆಂದು ಬ್ಯಾಸ್ಕೆಟ್‌ಬಾಲ್ ಕ್ರೀಡಾಂಗಣವನ್ನು ನೆಲಸಮ ಮಾಡಲಾಗಿತ್ತು. ಹಾಗಿದ್ದರೆ, ಈಗ ಬಾಲ್ ಹೋಗುವುದಿಲ್ಲವೇ? ಎಂಬ ಪ್ರಶ್ನೆಯನ್ನು ಕ್ರೀಡಾಭ್ಯಾಸಿಗಳು ಕೇಳುತ್ತಿದ್ದಾರೆ.

ಟಫ್ ನಿರ್ಮಾಣದ ಕಾಮಗಾರಿ ದಶಮಾನೋತ್ಸವವಾದರೂ ಮುಗಿದಿಲ್ಲ. ಅದರ ಪಕ್ಕದಲ್ಲಿಯೇ ಬಾಸ್ಕೆಟ್‌ಬಾಲ್ ಕ್ರೀಡಾಂಗಣ ನಿರ್ಮಿಸಿದಲ್ಲಿ ಮಹಿಳಾ ಹಾಕಿ ಟೂರ್ನಮೆಂಟ್ ನಡೆಸಲು ಸಮಸ್ಯೆಯಾಗುತ್ತದೆ ಎಂದು ಹಾಕಿ ಕ್ರೀಡಾಪಟುಗಳು ದೂರಿದ್ದಾರೆ.

‘ಮೊದಲೇ ಇಕ್ಕಟ್ಟಾದ ಸ್ಥಳದಲ್ಲಿ ಟರ್ಫ್ ಮೈದಾನ ಮಾಡುತ್ತಿರುವುದರಿಂದ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ, ಡ್ರೆಸ್ಸಿಂಗ್ ರೂಂ, ಶೌಚಾಲಯ ಸೇರಿದಂತೆ ಬೇರಾವುದೇ ವ್ಯವಸ್ಥೆ ಮಾಡಲು ಸ್ಥಳ ಇಲ್ಲ’ ಎಂದು ರಾಷ್ಟ್ರೀಯ ಹಾಕಿ ತೀರ್ಪುಗಾರರಾದ ಶಶಿಧರ್ ತಾಂಬೂರಿ ಆರೋಪಿಸಿದರು.

‘ಸರ್ಕಾರ ಸಾಕಷ್ಟು ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಜಾಹೀರಾತುಗಳನ್ನು ಪ್ರಕಟಿಸುತ್ತಿದೆ. ಆದರೆ, ಒಂದೂ ಚಿಕ್ಕ ಒಳಾಂಗಣ ಕ್ರೀಡಾಂಗಣಕ್ಕೆ ಬೇಕಾದ ಯಾವುದೇ ವ್ಯವಸ್ಥೆಗಳೂ ತಾಲ್ಲೂಕು ಕೇಂದ್ರದಲ್ಲಿಲ್ಲ’ ಎಂದು ಷೆಟಲ್ ಬ್ಯಾಡ್ಮಿಂಟನ್ ತರಬೇತುದಾರ ಗೌತಮ್ ಕಿರಗಂದೂರು ದೂರಿದರು.

‘ಟರ್ಫ್ ನಿರ್ಮಾಣವಾಗಿರುವ ಜಾಗವೇ ಅವೈಜ್ಞಾನಿಕವಾಗಿದೆ. ಕಾಮಗಾರಿ ಪೂರ್ಣಗೊಂಡಿಲ್ಲ. ಸರ್ಕಾರದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಇದರೊಂದಿಗೆ ಟರ್ಫ್ ಮೈದಾನಕ್ಕೆ ಹೊಂದಿಕೊಂಡಂತೆ ಮತ್ತೊಮ್ಮೆ ಬಾಸ್ಕೆಟ್‌ಬಾಲ್ ಕ್ರೀಡಾಂಗಣ ಮಾಡಲು ಮುಂದಾಗಿರುವ ಔಚಿತ್ಯವೇನು?. ಈ ಯೋಜನೆಯ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ದ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು’ ಎಂದು ಕ್ರೀಡಾಪಟುಗಳು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT