ಗುರುವಾರ , ಫೆಬ್ರವರಿ 25, 2021
19 °C
ಕೊಡಗಿನ ಕಾಫಿಗೆ ಕೇರಳದಲ್ಲಿ ಬೇಡಿಕೆ, ಜಿಲ್ಲೆಯ ರೈತರಿಗೆ ಸಿಗದ ಲಾಭ

ಕೇರಳದಲ್ಲಿ ಕಾಫಿಗೆ ಬೆಂಬಲ ಬೆಲೆ: ಮಧ್ಯವರ್ತಿಗಳಿಗೆ ವರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಣಿಕೊಪ್ಪಲು (ಕೊಡಗು): ಕೇರಳದಲ್ಲಿ ಕಾಫಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿದ್ದು, ಅಲ್ಲಿ ಕಾಫಿ ಬೆಲೆಯಲ್ಲೂ ಹೆಚ್ಚಳವಾಗಿದೆ. ಕೊಡಗಿನಿಂದ ಕಾಫಿಯನ್ನು ಕಡಿಮೆ ಬೆಲೆಗೆ ಖರೀದಿಸಿ, ಕೇರಳದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಕೇರಳದ ದಲ್ಲಾಳಿಗಳು ಜಿಲ್ಲೆಯ ಗಡಿಭಾಗಕ್ಕೆ ಬರುತ್ತಿದ್ದಾರೆ.

ಗಡಿಭಾಗವಾದ ಕುಟ್ಟ, ಶ್ರೀಮಂಗಲ, ಕರಿಕೆ, ಮಾಕುಟ್ಟ ಭಾಗದಲ್ಲಿ ಕೇರಳದ ದಲ್ಲಾಳಿಗಳು, ಕೊಡಗಿನ ಕಾಫಿಯನ್ನು ಖರೀದಿಸುತ್ತಿದ್ದಾರೆ. ಗೋಣಿಕೊಪ್ಪಲು, ಬಾಳೆಲೆ, ಪೊನ್ನಂಪೇಟೆ ಭಾಗಕ್ಕೂ ಮಧ್ಯವರ್ತಿಗಳು ಬರುತ್ತಿದ್ದಾರೆ. ಕೊಡಗಿನ ಕಾಫಿಗೆ ಬೇಡಿಕೆ ಬಂದಿದೆ. ಆದರೆ, ಬೆಲೆ ವಿಚಾರದಲ್ಲಿ ದೊಡ್ಡಮಟ್ಟದಲ್ಲಿ ಲಾಭ ಸಿಗುತ್ತಿಲ್ಲ.

ಕೇರಳದಲ್ಲಿ ಕಚ್ಚಾ ರೋಬಸ್ಟಾ ಕಾಫಿಗೆ ಕೆ.ಜಿಗೆ ₹ 90 ಬೆಂಬಲ ಬೆಲೆ ಘೋಷಿಸಲಾಗಿದೆ. ಅದೇ ಕೊಡಗಿನಲ್ಲಿ ಪ್ರತಿ ಕೆ.ಜಿ ರೋಬಸ್ಟಾ ಚೆರಿ, ಕೇವಲ ₹ 65ಕ್ಕೆ ಖರೀದಿಯಾಗುತ್ತಿದೆ. ರಾಜ್ಯದಲ್ಲಿ ರೋಬಸ್ಟಾ 50 ಕೆ.ಜಿಯ ಚೆರಿಗೆ ₹ 3,250 ದರವಿದ್ದರೆ, ಅದೇ ಕೇರಳದಲ್ಲಿ ಅದರ ಬೆಲೆ ₹ 4,750. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೇರಳದ ವ್ಯಾಪಾರಿಗಳು, ಕೊಡಗಿನ  ಗಡಿಭಾಗದಲ್ಲಿ ಪ್ರತಿ ಕೆ.ಜಿ ರೋಬಸ್ಟಾ ಕಾಫಿಗೆ ₹ 5 ಹೆಚ್ಚಿನ ದರ ನೀಡಿ ಖರೀದಿಸುತ್ತಿದ್ದಾರೆ. ರಾಜ್ಯದಲ್ಲಿ ರೋಬಸ್ಟಾ ಪಾರ್ಚಿಮೆಂಟ್‌ ದರ 50 ಕೆ.ಜಿ.ಯ ಚೀಲಕ್ಕೆ ₹ 5,500 ಆಗಿದೆ. ಆದರೆ, ಕೇರಳದ ವ್ಯಾಪಾರಿಗಳು ಖರೀದಿ ಮಾಡುತ್ತಿರುವುದು ರೋಬಸ್ಟಾ ಚೆರಿಯನ್ನು ಮಾತ್ರ. ಪಾರ್ಚಿಮೆಂಟ್‌ ವೆಚ್ಚದಾಯಕವಾಗಿರುವುದರಿಂದ ಗಡಿಭಾಗದ ಬೆಳೆಗಾರರು ನಾಲ್ಕೈದು ರೂಪಾಯಿ ಹೆಚ್ಚು ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಚೆರಿ ಮಾರಲು ಮುಂದಾಗುತ್ತಿದ್ದಾರೆ.

‘ಹವಾಮಾನ ವೈಪರೀತ್ಯದಿಂದ ಕಾಫಿಯ ಗುಣಮಟ್ಟ ಕೆಡುತ್ತಿದೆ. ಇದರಿಂದ ಬೆಲೆಯೂ ಕುಸಿಯುವ ಸಂಭವವಿದೆ. ಬೆಲೆ ಕಡಿಮೆಯಾದರೆ ಬೆಳೆಗಾರರಿಗೆ ನಷ್ಟ ಉಂಟಾಗಲಿದೆ’ ಎಂದು ಸಳುಗೋಡಿನ ಕಾಫಿ ಬೆಳೆಗಾರ ಕೆ.ಎಸ್.ಉದಯ ಉತ್ತಪ್ಪ ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು