ಸಿದ್ದಾಪುರ: ಶ್ರೀ ನಾರಾಯಣ ಗುರುಗಳ 170ನೇ ಜಯಂತಿ ಕಾರ್ಯಕ್ರಮವನ್ನು ಸಿದ್ದಾಪುರದ ಎಸ್.ಎನ್.ಡಿ.ಪಿ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು.
ಎಸ್.ಎನ್.ಡಿ.ಪಿ (ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಯೋಗಂ) ಕೊಡಗು ಯೂನಿಯನ್ ವತಿಯಿಂದ ಸಿದ್ದಾಪುರ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. ಚೆಂಡೆ ವಾಧ್ಯಗಳು, ವಿವಿಧ ಕಲಾ ತಂಡಗಳೊಂದಿಗೆ ಶ್ರೀ ನಾರಾಯಣ ಗುರುಗಳ ಪ್ರತಿಮೆಯನ್ನು ಸಿದ್ದಾಪುರದ ಅಯ್ಯಪ್ಪ ದೇವಾಲಯದಿಂದ ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಸಾಂಪ್ರದಾಯಿಕ ಉಡುಗೆ ಧರಿಸಿದ ನೂರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಸಿದ್ದಾಪುರ ಪಟ್ಟಣ ಹರಶಿನ ಬಣ್ಣದ ತಳಿತು ತೋರಣದಿಂದ ಕಂಗೊಳಿಸಸಿತು.
ಬಳಿಕ ಸ್ವರ್ಣಮಾಲಾ ಕಲ್ಯಾಣ ಮಂಟಪದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷರಾದ ಶಾಂತಮಲ್ಲಿಕಾರ್ಜುನ ಸ್ವಾಮಿ ಉದ್ಘಾಟಿಸಿ ಮಾತನಾಡಿದರು.
‘ನಾರಾಯಣ ಗುರುಗಳ ತತ್ವ ಸಿದ್ಧಾಂತಗಳ ಎಲ್ಲಾ ಕಾಲದಲ್ಲೂ ಪ್ರಸ್ತುತ. ದ್ವೇಷ, ಅಸೂಯೆಯನ್ನು ದೂರವಿಟ್ಟು ಎಲ್ಲರನ್ನೂ ಸಮನಾಗಿ ಸ್ವೀಕರಿಸಿದರೆ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ನಾರಾಯಣ ಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಬೇಕು’ ಎಂದು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ‘ಗುರುಗಳು ಸಂಘಟನೆಯಿಂದ ಶಕ್ತರಾಗಿ, ವಿದ್ಯೆಯಿಂದ ಸ್ವತಂತ್ರರಾಗಿ ಎಂದು ಕರೆ ನೀಡಿದ್ದು, ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಬೇಕು. ನಾರಾಯಣ ಗುರುಗಳ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸುವುದರೊಂದಿಗೆ ನಾಡನಾದ್ಯಂತ ಪಸರಿಸಬೇಕು’ ಎಂದರು.
ಎಸ್.ಎನ್.ಡಿ.ಪಿ ಕೊಡಗು ಯೂನಿಯನ್ ಅಧ್ಯಕ್ಷ ವಿ.ಕೆ ಲೊಕೇಶ್ ಮಾತನಾಡಿ, ‘ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಎಸ್.ಎನ್.ಡಿ.ಪಿ ಸಂಘಟನೆ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ 40ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ. ಸಮುದಾಯದ ಸಂಕಷ್ಟದಲ್ಲಿರುವವರು, ನಿರ್ಗತಿಕರಿಗೆ ನೆರವನ್ನು ನೀಡಿದೆ. ಸಂಘಟನೆಯು ಬಲವಾಗಿದ್ದು, ಬ್ಯಾಂಕ್ ಅನ್ನು ಹೊಂದಿದೆ. ಸದಸ್ಯರಿಗೆ ವಿವಿಧ ರೀತಿಯ ಸಹಕಾರವನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬಿಜೆಪಿ ಮುಖಂಡ ಅಪ್ಪಚ್ಚುರಂಜನ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಬಿ.ಜೆ.ಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ ವಿಜಯ, ಸಿದ್ದಾಪುರ ಕೊಡವ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಕುಕ್ಕೇರ ಉತ್ತಪ್ಪ, ಮುಖಂಡರಾದ ಪ್ರವೀಣ್, ಆಚರಣಾ ಸಮಿತಿ ಅಧ್ಯಕ್ಷ ಪಾಪಯ್ಯ, ಕಾರ್ಯದರ್ಶಿ ರಾಜು, ಯೂನಿಯನ್ ಕಾರ್ಯದರ್ಶಿ ಪ್ರೇಮಾನಂದ, ಉಪಾಧ್ಯಕ್ಷ ರಾಜನ್, ವನಿತಾ ವಿಭಾಗದ ಅಧ್ಯಕ್ಷ ರೀಶ ಸುರೇಂದ್ರನ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಒಟ್ಟು 28 ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 22 ಮಂದಿ ಸಾಧಕರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಬಳಿಕ ಸಿದ್ದಾಪುರದ ವಿವಿಧ ಕಲಾ ತಂಡಗಳಿಂದ ನೃತ್ಯ ಪ್ರದರ್ಶನ ನಡೆಯಿತು. ಜಿಲ್ಲೆಯ ವಿವಿಧ ಬಾಗದಲ್ಲಿ ನೂರಾರು ಮಂದಿ ಗುರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.