ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಷ್ಣಾಂಶ: ಕಾಫಿ ಬೆಳೆಗಾರರ ಆತಂಕ

ಬಿಸಿಲೂರಾದ ಕಾಫಿನಾಡು l ಬತ್ತುತ್ತಿವೆ ಜಲಮೂಲಗಳು
Last Updated 27 ಮಾರ್ಚ್ 2023, 18:41 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನಲ್ಲಿ ಈ ವರ್ಷ ಸಮರ್ಪಕವಾಗಿ ಮುಂಗಾರು ಪೂರ್ವ ಮಳೆಯಾಗದೇ ಕಾಫಿ ಬೆಳೆಗಾರರು ಆತಂಕದಲ್ಲಿದ್ದಾರೆ. ದಿನದಿಂದ ದಿನಕ್ಕೆ ಉಷ್ಣಾಂಶ ಏರುತ್ತಿದ್ದು, ಕೊಳವೆಬಾವಿ, ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ನೀರಿನ ಸೌಕರ್ಯ ಹೊಂದಿರುವ ಬೆಳೆಗಾರರೂ ಚಿಂತಿತರಾಗಿದ್ದಾರೆ.

ಸಾಮಾನ್ಯವಾಗಿ ಮಾರ್ಚ್ ತಿಂಗಳಿನಲ್ಲಿ ಮಳೆಯಾಗಬೇಕಿತ್ತು. ಕೆಲ ದಿನಗಳ ಹಿಂದೆ ಸುಂಟಿಕೊಪ್ಪ, ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಮಾತ್ರವೇ ಆಲಿಕಲ್ಲು ಮಳೆ ಸುರಿದಿತ್ತು. ಇನ್ನುಳಿದ ಬಹಳಷ್ಟು ಭಾಗಗಳಲ್ಲಿ ಮಳೆ ಬಿದ್ದಿಲ್ಲ.

ಕೆರೆ, ಕೊಳವೆಬಾವಿ ಸೇರಿದಂತೆ ಉತ್ತಮ ನೀರಿನ ಸೌಕರ್ಯ ಹೊಂದಿರುವ ಬೆಳೆಗಾರರು ಪರ್ಯಾಯವಾಗಿ ತುಂತುರು ಹನಿ ನೀರಾವರಿ ಪದ್ಧತಿಯಲ್ಲಿ (ಸ್ಪ್ರಿಂಕ್ಲರ್) ಕಾಫಿಗೆ ನೀರು ಸಿಂಪಡಿಸಿದ್ದಾರೆ. ಎಲ್ಲೆಲ್ಲಿ ಈ ಬಗೆಯಲ್ಲಿ ನೀರು ಸಿಂಪಡಿಸಲಾಗಿದೆಯೋ ಅಲ್ಲೆಲ್ಲ ಈಗ ಕಾಫಿ ಹೂ ಸಮೃದ್ಧವಾಗಿ ಅರಳಿದೆ. ಆದರೆ, ಇನ್ನುಳಿದ ಬೆಳೆಗಾರರು ಹಾಗೂ ಅರೇಬಿಕಾ ಕಾಫಿ ಬೆಳೆಯುವ ಹೆಚ್ಚಿನ ಮಂದಿ ಮಳೆಯ ನಿರೀಕ್ಷೆಯಲ್ಲಿದ್ದಾರೆ.

ಸ್ಪ್ರಿಂಕ್ಲರ್‌ ಮೂಲಕ ನೀರು ಒದಗಿಸಿದವರ ಕಾಫಿ ತೋಟದಲ್ಲಿ ಹೂ ಅರಳಿದ್ದರೂ ಉಷ್ಣಾಂಶ ದಿನೇ ದಿನೇ ಹೆಚ್ಚುತ್ತಿರುವುದರಿಂದ ಹೂ ಕಾಳುಗಟ್ಟುವುದಕ್ಕೂ ತೊಂದರೆಯಾಗಲಿದೆ. ಹಾಗಾಗಿ, ಅವರೂ ಆಕಾಶದತ್ತ ನೋಡು
ವಂತಾಗಿದೆ.

ಶ್ರೀಮಂಗಲದ ಕಾಫಿ ಬೆಳೆಗಾರ ಹರೀಶ್‌ ಮಾದಪ್ಪ ಪ್ರತಿಕ್ರಿಯಿಸಿ, ‘ಕೊಡಗಿನಲ್ಲಿ ಇಷ್ಟು ಬಿಸಿಲು, ಉಷ್ಣಾಂಶ ಇತ್ತೀಚಿನ ವರ್ಷಗಳಲ್ಲಿ ಕಂಡಿರಲಿಲ್ಲ. ಕೆರೆ, ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೋಗುತ್ತಿವೆ. ನೀರಿನ ಸೌಕರ್ಯ ಹೊಂದಿರುವ ಕಾಫಿ ಬೆಳೆಗಾರರೂ ಕಂಗಾಲಾಗಿದ್ದಾರೆ. ಸದ್ಯ, ಉತ್ತಮ ಮಳೆ ಸುರಿಯಬೇಕಿದೆ’ ಎಂದು ಹೇಳಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾಫಿ ಮಂಡಳಿಯ ಉಪ ನಿರ್ದೇಶಕ ಚಂದ್ರಶೇಖರ್, ‘ಮಾರ್ಚ್ ತಿಂಗಳಿನಲ್ಲಿ ಈವರೆಗೆ ಮಳೆಯಾಗಬೇಕಿತ್ತು. ಕಾಫಿ ತೋಟಗಳಿಗೆ ಈಗ ಮಳೆಯಾಗದೇ ಹೋದರೆ ಕಾಫಿ ಹೂ ಅರಳುವುದಕ್ಕೆ ಸಮಸ್ಯೆಯಾಗಲಿದೆ. ಬಿಸಿಲಿನ ತಾಪವೂ ಏರುತ್ತಿದ್ದು, ಸದ್ಯ ಮಳೆ ಬೇಕಿದೆ’ ಎಂದು ಹೇಳಿದರು.

ಏ. 5ರವರೆಗೂ ಮಳೆ ನಿರೀಕ್ಷೆ ಇಲ್ಲ: ‘ಈ ತಿಂಗಳಿನಲ್ಲಿ ಮಳೆ ಬೀಳಬೇಕಿತ್ತು. ಆದರೆ, ನಿರೀಕ್ಷೆ ಫಲಿಸಲಿಲ್ಲ. ಏ. 5ರವರೆಗೂ ಮಳೆಯ ಮುನ್ಸೂಚನೆ ಇಲ್ಲ’ ಎಂದು ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಹವಾಮಾನ ವಿಷಯ ತಜ್ಞ ಹರೀಶ್ ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದಲ್ಲಿ ಕಳೆದ ವರ್ಷ ಮಾರ್ಚ್ 27ರಂದು 2,848.71 ಅಡಿಗಳಷ್ಟು ನೀರಿತ್ತು. ಈ ಬಾರಿ 2,822.80 ಅಡಿಗಳಷ್ಟು ನೀರಿದೆ. ನದಿ ಮೂಲಗಳೂ ಬತ್ತುತ್ತಿವೆ.

‘ಮಾರ್ಚ್ ತಿಂಗಳಿನಲ್ಲಿ ಶೇ 88ರಷ್ಟು ಮಳೆ ಕೊರತೆಯಾಗಿದೆ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT