ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಮಳಿಗೆಗಳಲ್ಲಿ ಲಕ್ಷಾಂತರ ಬಾಕಿ: ಕಾನೂನು ಕ್ರಮಕ್ಕೆ ಸಭೆಯಲ್ಲಿ ನಿರ್ಣಯ

ಸೋಮವಾರಪೇಟೆ: ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆಗಳ ಬಾಡಿಗೆ ಹಣ ಬಾಕಿ
Last Updated 21 ಜುಲೈ 2021, 5:45 IST
ಅಕ್ಷರ ಗಾತ್ರ

ಸೋಮವಾರಪೇಟೆ: ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದ ವಾಣಿಜ್ಯ ಮಳಿಗೆಗಳಲ್ಲಿ ಲಕ್ಷಾಂತರ ರೂಪಾಯಿ ಬಾಡಿಗೆ ಬಾಕಿ ಇದ್ದು, ಸದಸ್ಯರು ಚರ್ಚಿಸಿ, ಕೂಡಲೇ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಅಧ್ಯಕ್ಷ ಬಿ. ಸಂಜೀವ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಬಹುತೇಕ ವಾಣಿಜ್ಯ ಮಳಿಗೆಗಳಲ್ಲಿ ಬಾಡಿಗೆ ಕರಾರಿನ ಸ್ಪಷ್ಟ ಉಲ್ಲಂಘನೆಯಿಂದ ಪಂಚಾಯಿತಿಗೆ ಹೆಚ್ಚಿನ ನಷ್ಟವಾಗುತ್ತಿದೆ. ಮಳಿಗೆಗಳನ್ನು ಕಾನೂನು ಬಾಹಿರ ಪರಭಾರೆ, ಬಾಡಿಗೆ ಪಾವತಿಸದೇ ಸತಾಯಿಸುತ್ತಿರುವುದು ಮತ್ತು ಪಂಚಾಯಿತಿಯ ಬಾಡಿಗೆ ಕರಾರಿನ ಉಲ್ಲಂಘನೆಯ ಬಗ್ಗೆ ಸದಸ್ಯ ಮಹೇಶ್ ಸಭೆಯ ಗಮನಕ್ಕೆ ತಂದರು.

ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆಗಳಲ್ಲಿ ಒಬ್ಬೊಬ್ಬರು ಸುಮಾರು ₹2.5 ಲಕ್ಷದವರೆಗೆ ಬಾಡಿಗೆ ಉಳಿಸಿಕೊಂಡಿದ್ದು, ಕೆಲ ಬಾಡಿಗೆದಾರರು ವರ್ಷಗಳಿಂದ ಬಾಡಿಗೆ ಪಾವತಿಸದೇ ಪಂಚಾಯಿತಿಗೆ ನಷ್ಟ ಮಾಡಿದ್ದಾರೆ. ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಮಳಿಗೆಗಳನ್ನು ವಶಪಡಿಸಿಕೊಳ್ಳವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ನೋಟಿಸ್‌ ನೀಡಿದರೂ ಸ್ಪಂದಿಸುತ್ತಿಲ್ಲ ಎಂದು ಮುಖ್ಯಾಧಿಕಾರಿ ನಾಚಪ್ಪ ಅವರು ಸಭೆಗೆ ತಿಳಿಸಿದರು.

ಆರು ತಿಂಗಳಿನಿಂದ ಬಾಡಿಗೆ ಕಟ್ಟದವರು ಕೂಡಲೇ ಬಾಡಿಗೆ ಪಾವತಿಸಬೇಕು. ವರ್ಷಗಳಿಂದ ಬಾಡಿಗೆ ಪಾವತಿಸದವರಿಗೆ ಲೀಗಲ್ ನೋಟಿಸ್‌ ಜಾರಿಗೊಳಿಸಿ ನಂತರ ಮಳಿಗೆಗಳಿಗೆ ಬೀಗ ಹಾಕಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಗೆ ಸೂಚಿಸಲಾಯಿತು.

‘ಕಕ್ಕೆಹೊಳೆ ಸಮೀಪ ಇಂದಿರಾಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಇಂದಿರಾಗಾಂಧಿ ಹೆಸರಿನಲ್ಲಿ 1993ರಲ್ಲಿ ನಿರ್ಮಾಣ ಮಾಡಿರುವ ಬಸ್ ತಂಗುದಾಣವನ್ನು ಪಂಚಾಯಿತಿ ಸಾಮಾನ್ಯ ಸಭೆಯ ಅನುಮತಿ ಪಡೆಯದೆ ಬಿಜೆಪಿ ಕೆಲ ಕಾರ್ಯಕರ್ತರು ಒಡೆದು ಹಾಕಿದ್ದಾರೆ. ನೂತನ ತಂಗುದಾಣಕ್ಕೆ ಇಂದಿರಾಗಾಂಧಿ ಅವರ ಹೆಸರನ್ನೇ ಇಡಬೇಕು’ ಎಂದು ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶೀಲಾ ಡಿಸೋಜಾ ಆಗ್ರಹಿಸಿದರು. ಬಿಜೆಪಿ ಬೆಂಬಲಿತ ಸದಸ್ಯರಿಗೂ, ಶೀಲಾ ಡಿಸೋಜಾ ಅವರಿಗೂ ಮಾತಿನ ಚಕಮಕಿ ನೆಡೆಯಿತು. ‘ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಬಸ್ ತಂಗುದಾಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇದಕ್ಕೆ ತಕರಾರು ತೆಗೆಯುವುದು ಸರಿಯಲ್ಲ’ ಎಂದು ಎಸ್.ಆರ್. ಸೋಮೇಶ್ ಹೇಳಿದರು.

‘ಕ್ಷೇತ್ರದ ಶಾಸಕರ ಅಭಿಮಾನಿಗಳು ಅವರ ಜನ್ಮದಿನದ ಪ್ರಯುಕ್ತ ಕಟ್ಟಡ ಕಟ್ಟುತ್ತಿರುವುದರಿಂದ ಶಾಸಕರ ಹೆಸರು ಇಡಲಾಗಿದೆ’ ಎಂದು ಶರತ್ ಚಂದ್ರ ಮತ್ತು ಬಿ.ಆರ್.ಮಹೇಶ್ ಸ್ಪಷ್ಟನೆ ನೀಡಿದರು.

‘ಅಭಿವೃದ್ಧಿ ಕಾಮಗಾರಿಗೆ ಸದಸ್ಯರು ಸೇರಿದಂತೆ ನಾಗರಿಕರು ಸಹಕರಿಸಬೇಕು’ ಎಂದು ಅಧ್ಯಕ್ಷರು ಮನವಿ ಮಾಡಿದರು.

‘ಬಸ್ ತಂಗುದಾಣ ನಿರ್ಮಿಸುವುದಕ್ಕೆ ಇಂದಿರಾಗಾಂಧಿ ಅಭಿಮಾನಿಗಳ ಸಂಘದವರಿಗೆ ಪಂಚಾಯಿತಿ ಅನುಮತಿ ನೀಡಿದ್ದು, ನಿರ್ಣಯದ ವಿವರವನ್ನು ಮುಂದಿನ ಸಭೆಯಲ್ಲಿ ಮಂಡಿಸಬೇಕು’ ಎಂದು ಶೀಲಾ ಡಿಸೋಜಾ ಮನವಿ ಮಾಡಿದರು.

ವಾಣಿಜ್ಯ ಮಳಿಗೆ ಮುಂಗಡ ₹1.50 ಕೋಟಿಯನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿ ಇರಿಸಲಾಗಿದೆ. ಅದರ ಬಡ್ಡಿಯನ್ನು ಆಯ್ದ ಕಾಮಗಾರಿಗಳಿಗೆ ಉಪಯೋಗಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನೆಡೆಯಿತು.

ಮುಂಗಡ ಠೇವಣಿ ಹಣದ ಆಧಾರದಲ್ಲಿ ಸಾಲ ಪಡೆದು, ಪಟ್ಟಣ ವ್ಯಾಪ್ತಿಯ ನಿವೇಶನರಹಿತರಿಗೆ ನಿವೇಶನ ಒದಗಿಸಲು ಹಣವನ್ನು ವಿನಿಯೋಗಿ ಸಬಹುದು ಎಂದು ಸದಸ್ಯರು ಸಲಹೆ ನೀಡಿದರು.ಪಟ್ಟಣಕ್ಕೆ ಸಮೀಪವಿರುವ ಪೈಸಾರಿ ಜಾಗದಲ್ಲಿ 5 ಎಕರೆಯನ್ನು ಮಂಜೂರು ಮಾಡಿಸಿಕೊಡುವಂತೆ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸುವಂತೆ ಸಭೆ ತೀರ್ಮಾನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT