ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಾಲನಗರದಲ್ಲೂ ಟ್ರಾಫಿಕ್‌ ಕಿರಿಕಿರಿ

ಸುಧಾರಣೆ ಕಾಣದ ಸಂಚಾರ ವ್ಯವಸ್ಥೆ, ಜನರಿಗೆ ತಪ್ಪದ ತೊಂದರೆ
Last Updated 14 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ಕುಶಾಲನಗರ: ನೂತನ ತಾಲ್ಲೂಕು ಕೇಂದ್ರವಾಗಿ ಸರ್ಕಾರ ಘೋಷಣೆ ಮಾಡಿರುವ ಕುಶಾಲನಗರ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಸೇರಿದಂತೆ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಹೆಚ್ಚುವರಿಯಾಗಿ ಗ್ರಾಮಾಂತರ ಹಾಗೂ ಸಂಚಾರಿ ಪೊಲೀಸ್ ಠಾಣೆ ಸ್ಥಾಪಿಸಲಾಗಿದೆ. ಆದರೂ, ನಿರೀಕ್ಷಿತ ಮಟ್ಟದಲ್ಲಿ ಸಂಚಾರಿ ವ್ಯವಸ್ಥೆ ಸುಧಾರಣೆ ಕಂಡುಬಂದಿಲ್ಲ.

ಕುಶಾಲನಗರ ಪಟ್ಟಣವು ಜಿಲ್ಲೆಯ ಪ್ರಮುಖ ವಾಣಿಜ್ಯ ನಗರವಾಗಿದ್ದು, ಕುಶಾಲನಗರದ ಹೃದಯಭಾಗದಲ್ಲಿ ಮೈಸೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮತ್ತು ಹಾಸನ, ಕೇರಳ ಕಣ್ಣೂರು ರಾಜ್ಯ ಹೆದ್ದಾರಿ ಹಾದು ಹೋಗುತ್ತಿದೆ. ಇದರೊಂದಿಗೆ ನಗರದ ನಾಲ್ಕು ದಿಕ್ಕುಗಳಿಂದ ಕುಶಾಲನಗರಕ್ಕೆ ಬಂದು ಸೇರುವ ರಸ್ತೆಗಳಲ್ಲಿ ದಿನಂಪ್ರತಿ ಹೆಚ್ಚುಹೆಚ್ಚು ವಾಹನಗಳ ಸಂಚರಿಸುತ್ತಿರುತ್ತವೆ. ಇದರೊಂದಿಗೆ ಕುಶಾಲನಗರ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳಾದ ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ, ದುಬಾರೆ ಆನೆ ಕ್ಯಾಂಪ್, ಕಾವೇರಿ ರಿವರ್ ರ್‍ಯಾಫ್ಟಿಂಗ್‌, ಬೈಲುಕುಪ್ಪೆ ಗೋಲ್ಡನ್‌ ಟೆಂಪಲ್‌ಗಳಿಗೆ ದಿನಂಪ್ರತಿ ಹೆಚ್ಚುಹೆಚ್ಚು ಪ್ರವಾಸಿಗರು ಕುಶಾಲನಗರ ಪಟ್ಟಣದ ಮೂಲಕ ಆಗಮಿಸುತ್ತಿರುವುದರಿಂದ ವಾಹನ ದಟ್ಟಣೆ ದಿನೇದಿನೇ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ವಾಹನ ಅಪಘಾತಗಳು ಸಂಭವಿಸಿ ಶಾಲಾ–ಕಾಲೇಜು ಮಕ್ಕಳು, ವಯೋವೃದ್ಧರು, ಹಿರಿಯ ನಾಗರಿಕರು, ಪಾದಚಾರಿಗಳಿಗೆ ಪ್ರಾಣಹಾನಿ ಹಾಗೂ ಗಾಯ, ನೋವು ಉಂಟಾಗುತ್ತಿರುವುದರಿಂದ ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆಯಿಂದ ಅನೇಕ ಮಾರ್ಪಾಡು ಮಾಡಿದೆ.

ಪಟ್ಟಣದಲ್ಲಿ ದಿನನಿತ್ಯ ವಾಹನ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರಿ ವ್ಯವಸ್ಥೆ ಹಾಗೂ ಕಾನೂನು ಸುವ್ಯವಸ್ಥೆಯೊಂದಿಗೆ ಸಂಚಾರಿ ನಿಯಮಗಳನ್ನು ಪಾಲಿಸಲು ಅನುಕೂಲವಾಗುವಂತೆ ಕಳೆದ ಎರಡು ವರ್ಷಗಳ ಹಿಂದೆ ಕೂಡ್ಲೂರು ಕೈಗಾರಿಕಾ ಬಡಾವಣೆ ಬಳಿ ಪ್ರತ್ಯೇಕವಾಗಿ ಸಂಚಾರಿ ಪೊಲೀಸ್ ಠಾಣೆ ತೆರೆಯಲಾಗಿದೆ. ಅದೇ ರೀತಿ ಪಟ್ಟಣದ ಕಾರ್ಯಪ್ಪ ವೃತ್ತದಲ್ಲಿ ₹ 10 ಲಕ್ಷ ವೆಚ್ಚದಲ್ಲಿ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಪಟ್ಟಣದ ರಥಬೀದಿ, ಕಿತ್ತೂರು ರಾಣಿ ಚೆನ್ನಮ್ಮ (ಕನ್ನಿಕಾ) ರಸ್ತೆಯಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 9 ಗಂಟೆಯವರೆಗೆ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೂ, ದಿನನಿತ್ಯ ವಾಹನ ದಟ್ಟಣೆಯಿಂದ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಮೇಲೆ ಪರಿಣಾಮ ಉಂಟಾಗುತ್ತಿದೆ. ಇದರೊಂದಿಗೆ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹಾಗೂ ವಾಹನ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಆಟೊರಿಕ್ಷಾಗಳಿದ್ದು ನಿಗದಿತ ಆಟೊ ಸ್ಟಾಂಡ್‌ಗಳ ಕೊರತೆ ಕೂಡ ಇದೆ. ಎಲ್ಲೆಂದರಲ್ಲಿ ಆಟೊ ರಿಕ್ಷಾ ನಿಲ್ಲಿಸಲಾಗುತ್ತಿದೆ. ಇದರಿಂದ ಕೂಡ ಸುಗಮ ಸಂಚಾರ ವ್ಯವಸ್ಥೆಗೆ ತೊಂದರೆ ಉಂಟಾಗುತ್ತಿದೆ.

ಜೊತೆಗೆ, ಅಯ್ಯಪ್ಪಸ್ವಾಮಿ ರಸ್ತೆ ಬಳಿ ಖಾಸಗಿ ಬಸ್ ನಿಲ್ದಾಣ ಸ್ಥಾಪಿಸಲಾಗಿದ್ದು, ಈ ನಿಲ್ದಾಣ ಕೂಡ ಅನೇಕ ಮೂಲಸಮಸ್ಯೆಗಳನ್ನು ಎದುರಿಸುತ್ತಿದೆ. ಈ ನಿಲ್ದಾಣಕ್ಕೆ ಬಸ್‌ಗಳು ತೆರಳಲು ಸೂಕ್ತ ರಸ್ತೆಯ ಕೊರತೆಯಿದೆ. ಎಲ್ಲ ಖಾಸಗಿ ಬಸ್‌ಗಳು ಕಾರ್ಯಪ್ಪ ವೃತ್ತದ ಮೂಲಕ ಕಿರಿದಾದ ಅಯ್ಯಪ್ಪಸ್ವಾಮಿ ರಸ್ತೆಯ ಮೂಲಕ ನಿಲ್ದಾಣಕ್ಕೆ ತೆರಳಬೇಕಾಗಿದೆ. ಏಕಕಾಲದಲ್ಲಿ ಎರಡು ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುವುದು ಕಷ್ಟಸಾಧ್ಯವಾಗಿದೆ. ಅಲ್ಲದೇ, ಖಾಸಗಿ ಬಸ್‌ಗಳು ಪಟ್ಟಣದ ಹೃದಯಭಾಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ಮುಖ್ಯರಸ್ತೆಯಲ್ಲಿಯೇ ನಿಲ್ಲಿಸಿಕೊಂಡು ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿವೆ. ಮ್ಯಾಕ್ಸಿಕ್ಯಾಬ್‌ಗಳು ಕೂಡ ಇದೇ ರೀತಿ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತುಂಬ ತೊಂದರೆ ಉಂಟಾಗುತ್ತಿದೆ. ಬೀದಿಬದಿಯ ವ್ಯಾಪಾರಿಗಳಿಗೂ ಸಮಸ್ಯೆ ಉಂಟಾಗುತ್ತಿದೆ ಎಂದು ವ್ಯಾಪಾರಿ ಮಹಾದೇವ್ ದೂರಿದ್ದಾರೆ.

ಟ್ರಾಫಿಕ್ ಸಿಗ್ನಲ್ ಸ್ಥಗಿತ:ಪಟ್ಟಣದ ಹೃದಯಭಾಗ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಸುಗಮ ಸಂಚಾರಿ ವ್ಯವಸ್ಥೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿತ್ತು. ಆದರೆ, ಆರಂಭದಿಂದಲೂ ಈ ಟ್ರಾಫಿಕ್ ಸಿಗ್ನಲ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಸಿಗ್ನಲ್ ದುರಸ್ತಿಗೊಂಡು ಅನೇಕ ದಿನಗಳೇ ಕಳೆದರೂ ಕೂಡ ಸರಿಪಡಿಸುವ ಕಾರ್ಯ ಕೈಗೊಂಡಿಲ್ಲ. ಸಿಗ್ನಲ್ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ವಾಹನ ಚಾಲಕರು ಬೇಕಾಬಿಟ್ಟಿಯಾಗಿ ಚಾಲನೆ ಮಾಡುತ್ತಿದ್ದಾರೆ.

ವಾಹನ ನಿಲುಗಡೆಯ ಅವ್ಯವಸ್ಥೆ:ಪೊಲೀಸ್ ಇಲಾಖೆ ವತಿಯಿಂದ ವಾಹನ ನಿಲುಗಡೆಗೆ ಮಾರ್ಗಸೂಚಿ ಅಳವಡಿಸಿದ್ದರೂ ಕೂಡ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ಕಾರ್ಯಪ್ಪ ವೃತ್ತ, ಅಯ್ಯಪ್ಪಸ್ವಾಮಿ ರಸ್ತೆ, ಪೋಸ್ಟ್ ಆಫೀಸ್, ಗಣಪತಿ ದೇವಸ್ಥಾನ, ಶೈಲಜಾ ಹೋಟೆಲ್, ಮಹಿಳಾ ಸಮಾಜ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಂಭಾಗ... ಹೀಗೆ ನಾನಾ ಕಡೆಗಳಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಸಾದಚಾರಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ತುಂಬ ತೊಂದರೆ ಉಂಟಾಗುತ್ತಿದೆ.

ಸಂಚಾರಿ ಪೊಲೀಸ್ ಠಾಣೆ ದೂರ:ಪಟ್ಟಣದ ಸುಗಮ ಸಂಚಾರಿ ವ್ಯವಸ್ಥೆಯನ್ನು ಕಲ್ಪಿಸಬೇಕಾದ ಸಂಚಾರಿ ಪೊಲೀಸ್ ಠಾಣೆಯೇ ಪಟ್ಟಣದಿಂದ ನಾಲ್ಕು ಕಿ.ಮೀ ದೂರದಲ್ಲಿದೆ. ಕೂಡ್ಲೂರು ಕೈಗಾರಿಕಾ ಬಡಾವಣೆ ಬಳಿ ಸಂಚಾರಿ ಪೊಲೀಸ್ ಠಾಣೆ ಕಾರ್ಯ ನಿರ್ವಹಿಸುತ್ತಿದ್ದು ಸಿಬ್ಬಂದಿಗಳಿಗೂ ಕೂಡ ಕರ್ತವ್ಯ ನಿರ್ವಹಿಸಲು ತೊಂದರೆ ಉಂಟಾಗುತ್ತಿದೆ. ಆದ್ದರಿಂದ, ಕೂಡಲೇ ಈ ಠಾಣೆಯನ್ನು ಪಟ್ಟಣಕ್ಕೆ ಸ್ಥಳಾಂತರ ಮಾಡಬೇಕು ಎಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT