ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೃಂದಾವನ ಬಡಾವಣೆಯಲ್ಲಿ ವಿಶಿಷ್ಟ ಹುತ್ತರಿ

ಕುಶಾಲನಗರ: ಸರ್ವ ಧರ್ಮೀಯರಿಂದ ಸಡಗರದ ಆಚರಣೆ
Published 28 ನವೆಂಬರ್ 2023, 14:33 IST
Last Updated 28 ನವೆಂಬರ್ 2023, 14:33 IST
ಅಕ್ಷರ ಗಾತ್ರ

ಕುಶಾಲನಗರ: ಇಲ್ಲಿನ ಪುರಸಭೆ ವ್ಯಾಪ್ತಿಯ ಮುಳ್ಳುಸೋಗೆ ಬಳಿಯ ಗುಮ್ಮನಕೊಲ್ಲಿ ಬೃಂದಾವನ ಬಡಾವಣೆಯಲ್ಲಿ ಸೋಮವಾರ ರಾತ್ರಿ ಬಡಾವಣೆ ನಿವಾಸಿಗಳು ಜತೆಗೂಡಿ ಕೊಡಗಿನ ಸಾಂಪ್ರದಾಯಿಕ ಸುಗ್ಗಿ ಹಬ್ಬವಾದ ಹುತ್ತರಿಯನ್ನು ಸಂಭ್ರಮ- ಸಡಗರದಿಂದ ಆಚರಿಸಿದರು.

ಬಡಾವಣೆಯ ಎಲ್ಲಾ ಧರ್ಮಿಯರು ಜತೆಗೂಡಿ ಜಾತ್ಯತೀತವಾಗಿ ಆಚರಿಸಿದ ಹುತ್ತರಿ ಏಕತೆ ಪ್ರತಿಬಿಂಬಿಸಿತು.
ಕಳೆದ 10 ವರ್ಷಗಳಿಂದ ಬಡಾವಣೆಯಲ್ಲಿ ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಎಲ್ಲಾ ರೀತಿಯ ಹಬ್ಬ ಹರಿದಿನಗಳು ಹಾಗೂ ವಿವಿಧ ಕ್ರೀಡಾಕೂಟಗಳನ್ನು ಪರಸ್ಪರ ಪ್ರೀತಿ- ವಿಶ್ವಾಸ ಹಾಗೂ ಸೌಹಾರ್ದತೆಯಿಂದ ನಡೆಸಿಕೊಂಡು ಬರಲಾಗುತ್ತಿದೆ.

ಬಡಾವಣೆಯ ನಿವಾಸಿ ಮೇಲ ಮನೆ ಎಂ.ಎನ್.ಕಾಳಪ್ಪ ಅವರ ಮನೆಯಲ್ಲಿ ಅರಳಿ, ಮಾವು, ಹಲಸು, ಕುಂಬಳಿ, ಗೋಡಂಬಿ ಗಿಡಗಳ ಎಲೆಗಳನ್ನು ಬಳಸಿ ‘ನೆರೆ ಕಟ್ಟುವ’ ವಿಧಿ ವಿಧಾನದ ಮೂಲಕ ನೆರೆಕಟ್ಟಿದ ನಂತರ ಮೆರವಣಿಗೆಯಲ್ಲಿ ಕಾಳಪ್ಪ ಅವರ ಗದ್ದೆ ತೆರಳಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಕದಿರು ತೆಗೆಯಲಾಯಿತು.

ಸಾಂಪ್ರದಾಯಿಕ ಉಡುಗೆ - ತೊಡುಗೆಯೊಂದಿಗೆ ಭತ್ತದ ಗದ್ದೆಯಲ್ಲಿ ತೆರಳಿ ಗದ್ದೆಯಲ್ಲಿ ಬೆಳೆದಿದ್ದ ಕದಿರನ್ನು ಕೊಯ್ದು ಅಲ್ಲಿಂದ ಪ್ರತಿಯೊಬ್ಬರ ಕೈಯಲ್ಲಿ ಭತ್ತದ ಕದಿರನ್ನು ಹಿಡಿದು ಮನೆಗಳತ್ತ ಸಾಗಿದರು. ಕದಿರನ್ನು ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ದು ಭಕ್ತಿ ಮತ್ತು ಶ್ರದ್ಧೆಯಿಂದ ಮನೆಯಲ್ಲಿರುವ ಮನೆಯ ಹಿರಿಬಾಗಿಲು ಆಯುಧ, ಯಂತ್ರ, ಅಡುಗೆ ಮನೆ ಮತ್ತು ವಾಹನಗಳಿಗೆ ಆ ಕದಿರನ್ನು ಕಟ್ಟುವ ಮೂಲಕ ಸಾಂಪ್ರದಾಯಿಕ ಆಚರಣೆ ಮಾಡಲಾಯಿತು. ಸಾಂಪ್ರದಾಯಿಕವಾದ ನೃತ್ಯ ಹಾಗೂ ಹಾಡು ಹೇಳುವ ಮೂಲಕ ಸಂಭ್ರಮಿಸಿದರು.

ಬೃಂದಾವನ ಬಡಾವಣೆ ಸೇರಿದಂತೆ ಇನ್ನಿತರ ಬಡಾವಣೆ ನಿವಾಸಿಗಳು ಹಾಗೂ ನೆಂಟರಿಷ್ಟರು, ಪುರುಷರು ಮತ್ತು ಹೆಣ್ಣು ಮಕ್ಕಳು ಪಾಲ್ಗೊಂಡಿದ್ದರು. ಜತೆಗೆ ಹೊಸ ಅಕ್ಕಿಯೊಂದಿಗೆ ಸಿದ್ಧಗೊಳಿಸಿದ ಖಾದ್ಯಗಳನ್ನು ಉಣಬಡಿಸಲಾಯಿತು.
ನಮ್ಮ ಬಡಾವಣೆಯಲ್ಲಿ ಕೈಲು ಮುಹೂರ್ತ, ಹುತ್ತರಿ ಹಬ್ಬ ಸೇರಿದಂತೆ ಎಲ್ಲಾ ಹಬ್ಬಗಳನ್ನು ಬಡಾವಣೆಯ ಎಲ್ಲಾ ನಿವಾಸಿಗಳು ಜತೆಗೂಡಿ ಆಚರಿಸುತ್ತಿದ್ದೇವೆ ಎಂದು ನಿವಾಸಿ ಕೂಡಕಂಡಿ ಸೋಮಪ್ಪ‌ ಹೇಳಿದರು.

ಹುತ್ತರಿ ಉತ್ಸವದಲ್ಲಿ ಹಿರಿಯ ಸಹಕಾರಿ ಧುರೀಣ ಎಂ.ಎನ್.ಕುಮಾರಪ್ಪ, ಆರ್ ಪಿ. ಲಕ್ಷ್ಮಣ್,
ಬಡಾವಣೆಯ ಪ್ರಮುಖರಾದ. ಹಂಡ್ರಂಗಿ ಜೆ.ನಾಗರಾಜ್, ಜಿ.ಬಿ.ಪೂವಯ್ಯ, ಉಮಾದೇವಿ, ಮಹೇಂದ್ರ, ಜಗನ್ನಾಥ್, ಶ್ರೀನಿವಾಸ್, ವನಿತ, ರಾಣಿ, ಲಲಿತಾ, ಮೀನಾಕ್ಷಿ, ಜಯ ಪ್ರಕಾಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT