ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ | ವಾರಾಂತ್ಯದಲ್ಲಿ ಮತದಾನ ಜಾಗೃತಿಗೆ ವಿವಿಧ ಕಾರ್ಯಕ್ರಮ

15ರಂದು ಚಿತ್ರಕಲಾ ಶಿಬಿರ, 16 ರಂದು ಬೈಕ್ ರ್‍ಯಾಲಿ, 30ರಂದು ಟಾರ್ಚ್ ಡೇ
Last Updated 7 ಏಪ್ರಿಲ್ 2023, 6:24 IST
ಅಕ್ಷರ ಗಾತ್ರ

ಮಡಿಕೇರಿ: ಮತದಾನದ ಜಾಗೃತಿಗಾಗಿ ಏ. 15ರಂದು ರಾಜಸೀಟಿನಲ್ಲಿ ಚಿತ್ರಕಲಾ ಶಿಬಿರ, 16ರಂದು ಬೈಕ್ ರ್‍ಯಾಲಿ ಹಾಗೂ 30ರಂದು ಟಾರ್ಚ್ ಡೇ ಆಯೋಜಿಸುವ ಬಗ್ಗೆ ಸಂಬಂಧಪಟ್ಟವರು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್ ತಿಳಿಸಿದರು.

ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ವತಿಯಿಂದ ವಾರಾಂತ್ಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಬಂಧ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ‘ಜಿಲ್ಲೆಯ ಹೋಂ ಸ್ಟೇ, ರೆಸಾರ್ಟ್ ಹಾಗೂ ಹೋಟೆಲ್ ಅಸೋಷಿಯೇಷನ್ ಅವರ ಜೊತೆ ಈಗಾಗಲೇ ಚರ್ಚಿಸಲಾಗಿದ್ದು, ಮತದಾನದಂದು ಕೊಠಡಿ ಕಾಯ್ದಿರಿಸುವ ರಾಜ್ಯದ ಪ್ರವಾಸಿಗರು ಮತದಾನ ಮಾಡಿ ಬಂದಲ್ಲಿ ಶೇ 10ರಷ್ಟು ರಿಯಾಯಿತಿ ನೀಡಲು ಉದ್ದೇಶಿಸಲಾಗಿದೆ’ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಹಲವು ಕ್ಷೇತ್ರಗಳ ಸಾಧಕರು ಮತದಾನದ ಜಾಗೃತಿಗಾಗಿ ವಿವಿಧ ಬಗೆಯ ಸಲಹೆಗಳನ್ನು ನೀಡಿದರು.

ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ‘ಮತದಾನದ ಜಾಗೃತಿ ಮೂಡಿಸುವಲ್ಲಿ ಸಂತೆ ನಡೆಯುವ ದಿನಗಳಂದು ‘ಕರಪತ್ರ’ ಹಂಚುವ ಮೂಲಕ ಹೆಚ್ಚಿನ ಅರಿವು ಮೂಡಿಸಬಹುದು’ ಎಂದು ಸಲಹೆ ನೀಡಿದರು.

ಸ್ಕೌಟ್ಸ್ ಮತ್ತು ಗೈಡ್ಸ್‌ನ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ, ‘ಮತದಾನ ಕಡಿಮೆಯಾಗಿರುವ ಮತಗಟ್ಟೆಗಳಲ್ಲಿ ಕಿರುನಾಟಕ ಪ್ರದರ್ಶನ ಮೂಲಕ ಹೆಚ್ಚಿನ ಅರಿವು ಮೂಡಿಸಬಹುದು’ ಎಂದರು.

ರೋಟರಿ ಸಂಸ್ಥೆಯ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್ ಮಾತನಾಡಿ, ‘ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮೊಬೈಲ್ ಟಾರ್ಚ್ ಮೂಲಕ ಜಾಗೃತಿ ಮೂಡಿಸಬಹುದು. ಹಾಗೆಯೇ ರಾಜಸೀಟಿನಲ್ಲಿ ಚಿತ್ರಕಲಾ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಬಹುದು’ ಎಂದರು.

ಸ್ತ್ರೀಶಕ್ತಿ ಒಕ್ಕೂಟಗಳ ಅಧ್ಯಕ್ಷೆ ರೆಹನಾ ಸುಲ್ತಾನ್ ಮಾತನಾಡಿ, ‘ಮತದಾನದಂದು ಕೂಲಿ ಕಾರ್ಮಿಕರು ಮತ ಹಕ್ಕು ಚಲಾಯಿಸುವಂತಾಗಲು ಹೆಚ್ಚಿನ ಅರಿವು ಮೂಡಿಸಬೇಕು’ ಎಂದು ಕೋರಿದರು.

ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯ ಧನಂಜಯ ಮಾತನಾಡಿ, ‘ಬೈಕ್ ರ‍್ಯಾಲಿ ಏರ್ಪಡಿಸುವುದರ ಜತೆಗೆ 18 ರಿಂದ 30 ವರ್ಷದವರೆಗಿನ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಹೊರ ಪ್ರದೇಶಗಳಿದ್ದು, ಅವರನ್ನು ಆಹ್ವಾನಿಸಿ ಮತದಾನ ಹೆಚ್ಚಳಕ್ಕೆ ಕ್ರಮವಹಿಸಬೇಕು’ ಎಂದು ಹೇಳಿದರು.

ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಅವರು ಖಾಸಗಿ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ಅಂಚೆ ಮತಪತ್ರ ಮೂಲಕ ಮತಚಲಾಯಿಸಲು ಅವಕಾಶ ಮಾಡಬೇಕು ಎಂದು ಮನವಿ ಮಾಡಿದರು.

ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅಂಬೆಕಲ್ ನವೀನ್, ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ಎಂ.ಬಿ.ದೇವಯ್ಯ, ಕಾರ್ಯದರ್ಶಿ ಮೋಂತಿ ಗಣೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT