ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ

ನಾಪೋಕ್ಲು ಸಮೀಪದ ದೋಣಿಕಡು, ಚೌಟುಕೋಡುಗಳ ಜನರ ಪರದಾಟ
Last Updated 8 ಮಾರ್ಚ್ 2020, 10:55 IST
ಅಕ್ಷರ ಗಾತ್ರ

ನಾಪೋಕ್ಲು: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಹಾಗೂ ಬೇಂಗೂರು ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸುವ ದೋಣಿಕಡು ಎಂಬಲ್ಲಿ ಸೇತುವೆ ನಿರ್ಮಿಸಬೇಕು ಎಂಬ ಗ್ರಾಮೀಣ ಜನರ ಬಹುದಿನದ ಕನಸು ಕನಸಾಗಿಯೇ ಉಳಿದಿದೆ.

ಸೇತುವೆ ಇಲ್ಲದೇ ಕಾವೇರಿ ನದಿಯನ್ನು ದಾಟಲು ಇಲ್ಲಿ ಗ್ರಾಮಸ್ಥರು ಮಳೆಗಾಲದಲ್ಲಿ ದೋಣಿಯನ್ನು ಅವಲಂಬಿಸಿದರೆ ಇದೀಗ ಬೇಸಿಗೆಯಲ್ಲಿ ನದಿಯಲ್ಲಿ ನೀರು ಕಡಿಮೆ ಪ್ರಮಾಣದಲ್ಲಿ ಹರಿಯುತ್ತಿರುವುರಿಂದ ವಾಹನ ಸವಾರರು ನೀರಿನಲ್ಲಿಯೇ ವಾಹನ ಚಲಾಯಿಸಿ ಪಡಿಯಾಣಿ ಗ್ರಾಮದಿಂದ ಬೇಂಗೂರು ಗ್ರಾಮಕ್ಕೆ ತೆರಳುತ್ತಿದ್ದಾರೆ. ಕಾವೇರಿ ನದಿ ಕ್ರಮಿಸಿದರೆ ಊರುಗಳ ಸಂಪರ್ಕಕ್ಕೆ ಸಮಯ ಹಾಗೂ ದೂರ ಉಳಿತಾಯವಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.

ಪಡಿಯಾಣಿ ಗ್ರಾಮದಲ್ಲಿ ರಸ್ತೆ ಸಂಪರ್ಕ ಇದೆ. ಅತ್ತ ಬೇಂಗೂರು ಗ್ರಾಮಕ್ಕೂ ರಸ್ತೆ ಸಂಪರ್ಕ ಇದೆ. ಆದರೆ, ದೋಣಿಕಡು ಎಂಬಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆಯ ಕೊರತೆ ಗ್ರಾಮಸ್ಥರನ್ನು ಕಾಡುತ್ತಿದೆ. ಸೇತುವೆ ನಿರ್ಮಾಣಗೊಂಡರೆ ಬಲ್ಲಮಾವಟಿಯಿಂದ ಚೇರಂಬಾಣೆ ಮೂಲಕ ಮಡಿಕೇರಿ ತಲುಪಲು ಇದು ಸಮೀಪದ ಹಾದಿ ಆಗಲಿದೆ. ಈ ಕಾರಣಕ್ಕಾಗಿ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ಇನ್ನು ನಾಪೋಕ್ಲು-ಕಾರುಗುಂದ ಗ್ರಾಮೀಣ ರಸ್ತೆಯಲ್ಲಿ ಅಜ್ಜಿಮುಟ್ಟ ಬಾಳೆಯಡ ಕುಟುಂಬಸ್ಥರ ಮನೆಯ ಬಳಿ ಕಾವೇರಿ ಹೊಳೆಗೆ ಒಂದು ಸೇತುವೆಯನ್ನು ನಿರ್ಮಿಸಿದರೆ ಗ್ರಾಮೀಣ ಜನರಿಗೆ ಅನುಕೂಲವಾಗಲಿದೆ ಎಂದು ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.

ಸೇತುವೆ ಏಕೆ...?: ನಾಪೋಕ್ಲು ತಾಲೂಕಿನಲ್ಲಿಯೇ ಎರಡನೆಯ ಅತಿ ದೊಡ್ಡ ಪಟ್ಟಣವಾಗಿದ್ದು, ಸುತ್ತಮುತ್ತಲ 28 ಗ್ರಾಮಗಳಿಗೆ ವ್ಯಾವಹಾರಿಕ ಕೇಂದ್ರವಾಗಿದೆ. ಪಟ್ಟಣದ ಮುಖ್ಯರಸ್ತೆಯಿಂದ ನಾಪೋಕ್ಲು ಗ್ರಾಮದ ಮೂಲಕ ಬೆಟ್ಟಗೇರಿ ಪಂಚಾಯಿತಿಯ ಕಾರುಗುಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆ ಇದೆ. ಈ ರಸ್ತೆಗೆ ಚೌಟುಕೋಡು ಎಂಬಲ್ಲಿ ಕಾವೇರಿ ನದಿಯು ಅಡ್ಡಲಾಗಿ ಹರಿಯುತ್ತದೆ. ಇಲ್ಲಿ ಸೇತುವೆ ಇಲ್ಲದೇ ವಾಹನ ಸಂಚಾರ ಸಾಧ್ಯವಿಲ್ಲ. ಇದರಿಂದ ಈ ಭಾಗದ ಸಾರ್ವಜನಿಕರು ನಾಪೋಕ್ಲು ಪೇಟೆಗೆ ಬರಬೇಕಾದರೆ ಬೆಟ್ಟಗೇರಿ ಮುಖಾಂತರವಾಗಿ ನಾಪೋಕ್ಲುವಿಗೆ ಸುತ್ತಿ ಬರಬೇಕಾಗಿದೆ. ಇಲ್ಲಿ ಸೇತುವೆ ನಿರ್ಮಿಸುವುದು ಅತ್ಯಗತ್ಯವಾಗಿದೆ ಎನ್ನುತ್ತಾರೆ
ಅವರು.

ನಾಪೋಕ್ಲುವಿನಿಂದ ಮಡಿಕೇರಿ-ಭಾಗಮಂಡಲ ಮುಖ್ಯರಸ್ತೆಯನ್ನು ಸಂಪರ್ಕಿಸಲು ಸುಮಾರು ಏಳು ಕಿ.ಮೀ ದೂರದ ಗ್ರಾಮೀಣ ರಸ್ತೆಯು ಇದಾಗಿದ್ದು, ಈ ರಸ್ತೆಯನ್ನು ಅಭಿವೃದ್ಧಿಪಡಿಸುವುದರಿಂದ ಆ ಭಾಗದ ಕಾರುಗುಂದ, ಚೇರಂಬಾಣೆ, ತಣ್ಣಿಮಾನಿ, ಭಾಗಮಂಡಲ, ಕರಿಕೆ, ಗ್ರಾಮದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ.

ನಾಪೋಕ್ಲು ಮೂಲಕವಾಗಿ ಚೇರಂಬಾಣೆ, ಭಾಗಮಂಡಲ, ತಲಕಾವೇರಿ, ಕರಿಕೆಗೆ ಪ್ರಯಾಣಿಸುವವರಿಗೆ 10 ಕಿ.ಮೀನಷ್ಟು ಪ್ರಯಾಣದ ದೂರವು ಕಡಿಮೆಯಾಗುತ್ತದೆ. ಮಳೆಗಾಲದಲ್ಲಿ ಪ್ರವಾಹದಿಂದ ದ್ವೀಪವಾಗುವ ನಾಪೋಕ್ಲು ಜನರಿಗೆ ಈ ರಸ್ತೆಯಿಂದ ಬೇರೆ ಗ್ರಾಮದ ಸಂಪರ್ಕಕ್ಕೆ ಅನುಕೂಲವಾಗುತ್ತದೆ. ಹಲವು ಗ್ರಾಮಗಳ ಜನರಿಗೆ ಅನುಕೂಲವಾಗುವ ನಾಪೋಕ್ಲು-ಕಾರುಗುಂದ ಗ್ರಾಮೀಣ ರಸ್ತೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸಿ ಎಂದು ಕೊಡವ ಸಮಾಜದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಸದ್ಯಕ್ಕೆ ಬೇತು ಗ್ರಾಮವನ್ನು ಪಾರಾಣೆ ಗ್ರಾಮಕ್ಕೆ ಸಂಪರ್ಕಿಸುವ ಎತ್ತುಕಡು ಸೇತುವೆ ನಿರ್ಮಾಣಗೊಂಡು ಗ್ರಾಮಸ್ಥರು ಸಂತಸಗೊಂಡಿದ್ದಾರೆ. ಎರಡು ಗ್ರಾಮಗಳನ್ನು ಸಂಪರ್ಕಿಸುವ ಎತ್ತುಕಡು ಸೇತುವೆಯ ಬಳಿ ಅನತಿ ದೂರ ಮಣ್ಣಿನ ರಸ್ತೆಯಿದೆ. ಇತ್ತೀಚೆಗೆ ಮಕ್ಕಿ ಶಾಸ್ತಾವು ದೇವಾಲಯದ ಬಳಿಯಿಂದ ರಸ್ತೆ ಡಾಮರೀಕರಣ ಮಾಡಲಾಗಿದೆ.ಇನ್ನೂ ಸ್ವಲ್ಪ ದೂರ ರಸ್ತೆ ನಿರ್ಮಿಸಿದರೆ ಗ್ರಾಮಸ್ಥರಿಗೆ, ವಾಹನ ಚಾಲಕರಿಗೆ ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT