ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರೇ ಬಲಿಷ್ಠ ರಾಷ್ಟ್ರ ಕಟ್ಟಿ: ಎಂ.ಸಿ.ನಾಣಯ್ಯ ಕರೆ

ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ
Last Updated 14 ಡಿಸೆಂಬರ್ 2019, 13:30 IST
ಅಕ್ಷರ ಗಾತ್ರ

ಮಡಿಕೇರಿ: ‘ರಾಷ್ಟ್ರದಲ್ಲಿ ಯುವಕರ ಸಂಖ್ಯೆ ಹೆಚ್ಚಿದ್ದು, ಭಾರತದ ಚಿತ್ರಣವನ್ನೇ ಬದಲಾಯಿಸುವ ಶಕ್ತಿ ಯುವಜನರಿಗಿದೆ’ ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಹೇಳಿದರು.

ನಗರದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಷ್ಟ್ರದಲ್ಲಿ ಶೇ 35 ಯುವಜನರಿದ್ದು, ಯುವ ಜನರಿಂದಲೇ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಮಗುವಿನ ಸರ್ವಾಂಗೀಣ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿಯಾಗುತ್ತದೆ. ವಿದ್ಯಾರ್ಥಿ ಜೀವನದಲ್ಲೇ ಸಮಯ ಪ್ರಜ್ಞೆ, ವಿದ್ಯಾಭ್ಯಾಸದ ಕಡೆ ಗಮನ ಹಾಗೂ ಭವಿಷ್ಯದ ಬಗ್ಗೆ ಚಿಂತನೆ ನೀಡಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ಅವರದೇ ಆದ ಸ್ವಂತ ಆಲೋಚನಾ ಶಕ್ತಿಯಿದೆ. ಇಂತಹ ಕಾರ್ಯಕ್ರಮದಲ್ಲಿ ತಮ್ಮಲ್ಲಿರುವ ಬುದ್ಧಿವಂತಿಕೆ ತೋರ್ಪಡಿಸಲು ಇದು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.

ಪ್ರತಿಯೊಬ್ಬ ವಿದ್ಯಾರ್ಥಿಯು ಸ್ಪರ್ಧಾ ಕಾರ್ಯಕ್ರಮದಲ್ಲಿ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿ, ಬದಲಾವಣೆಯ ಬಗ್ಗೆ ಚರ್ಚಿಸಬೇಕು ಎಂದು ನಾಣಯ್ಯ ಹೇಳಿದರು.

ಯುವ ಸಂಸತ್ ಕಲ್ಪನೆ 1962ರಲ್ಲಿ ಜಾರಿಗೆ ಬಂದಿದೆ. ಯುವ ಸಂಸತ್ ಮೂಲಕ ಶಾಸಕಾಂಗ ರೂಪಿಸುವ ಶಾಸನ. ಜನ ಪ್ರತಿನಿಧಿ ಕೈಗೊಳ್ಳುವ ಕಾರ್ಯಗಳು, ಅದಕ್ಕೆ ಪ್ರತಿಯಾಗಿ ವಿರೋಧ ಪಕ್ಷದವರ ವಿರೋಧ ಎಲ್ಲವನ್ನು ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಯುವ ಸಂಸತ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಮೂಲ ಸೌಲಭ್ಯಗಳ ಕೊರತೆಯನ್ನು ಪ್ರಶ್ನಿಸುವಂತಾಗಬೇಕು. ಇದರಿಂದ ಪ್ರಶ್ನೆ ಕೇಳುವುದರ ಮೂಲಕ ಪ್ರಜಾ ಪ್ರಭುತ್ವವನ್ನು ಬಲಪಡಿಸುವಂತಾಗಬೇಕೆಂದು ಹೇಳಿದರು.

ಭಾರತದ ಸಂವಿಧಾನ ಸಂಸದೀಯ ಪ್ರಜಾಪ್ರಭುತ್ವದ ಮಾದರಿಯಲ್ಲಿದೆ. ಭವಿಷ್ಯದ ಪ್ರಜೆಗಳು, ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಮಕ್ಕಳಿಗೆ ಶಿಕ್ಷಕರು ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಮಕ್ಕಳಿಗೆ ರಾಜಕೀಯ ಪ್ರಜ್ಞೆ, ಜತೆಗೆ ಸಂವಿಧಾನದ ಆಶಯಗಳನ್ನು ತಿಳಿಸುವುದರ ಮೂಲಕ ಯುವ ಜನತೆ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ತೊಡಸಿಕೊಳ್ಳಬೇಕು ಎಂದು ನಾಣಯ್ಯ ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಭವಾನಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಚಿಂತನೆ ಮಾಡಲು ಮತ್ತು ಜ್ಞಾನ ಸಂಪಾದನೆಗೆ ಏಕಾಂಗಿ ಹೋರಾಟ ಮಾಡಬೇಕಿದೆ ಎಂದು ಹೇಳಿದರು.

ರಾಜ್ಯಶಾಸ್ತ್ರ ಉಪನ್ಯಾಸಕ ಚಿದಾನಂದ್‌, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಕೆಂಚಪ್ಪ, ದಯಾನಂದ್ ಹಾಜರಿದ್ದರು. ಕಾರ್ಯಕ್ರಮದಲ್ಲಿ ವರಿಷ್ಮಾ ತಂಡ ಪ್ರಾರ್ಥಿಸಿದರು, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ್ ಅವರು ಸ್ವಾಗತಿಸಿದರು. ನಂದೀಶ್ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT