ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯಜೀವಿಗಳಿಗೂ ತ್ಯಾಜ್ಯ ಸಂಕಟ

Last Updated 6 ಏಪ್ರಿಲ್ 2016, 7:34 IST
ಅಕ್ಷರ ಗಾತ್ರ

ಸಿದ್ದಾಪುರ: ಕೆಲ ವರ್ಷಗಳ ಈಚೆಗೆ ಜಿಂಕೆಯೊಂದು ಅರಣ್ಯದ ಅಂಚಿನಲ್ಲಿ ಅಸಹಜವಾಗಿ ಸತ್ತು ಬಿದ್ದಿತ್ತು. ಮರಣೋತ್ತರ ಪರೀಕ್ಷೆ ಸಂದರ್ಭ ಅದರ ಜಠರದಲ್ಲಿ ಸಿಕ್ಕಿದ್ದು ಪ್ಲಾಸ್ಟಿಕ್‌ ತ್ಯಾಜ್ಯಗಳು! ಇಲ್ಲಿನ ತ್ಯಾಜ್ಯ ಸಮಸ್ಯೆ ಎಷ್ಟು ಭೀಕರವಾಗಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ.

ಬೇಸಿಗೆ ಸಮಯವಾದುದರಿಂದ ಅರಣ್ಯದಿಂದ ಹಾಗೂ ನಾಗರಹೊಳೆಯ ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನದಿಂದ ಜಿಂಕೆಗಳು, ಕಡವೆಗಳು, ಮಂಗಗಳು ತಂಪಾದ ವಾತಾವರಣ, ನೀರು ಮತ್ತು ಅಹಾರವನ್ನು  ಅರಸಿ ಸಿದ್ದಾಪುರ ಸುತ್ತಲಿನ ರಕ್ಷಿತಾರಣ್ಯದ ಅಂಚಿಗೆ ಬರುತ್ತಿವೆ. ಆದರೆ, ಆಹಾರದೊಂದಿಗೆ ಪ್ಲಾಸ್ಟಿಕ್‌ಮಿಶ್ರಿತ ತ್ಯಾಜ್ಯವೂ ಅವುಗಳ ಹೊಟ್ಟೆಗೆ ಹೋಗಿ ಪ್ರಾಣಕ್ಕೇ ಎರವಾಗುತ್ತಿವೆ ಎಂದು ಅರಣ್ಯ ನೌಕರರೊಬ್ಬರು ವಿವರಿಸುತ್ತಾರೆ.

ವಾರದ ಹಿಂದೆ ಆನೆಯೊಂದು ಅರಣ್ಯದಂಚಿನಲ್ಲಿ ತ್ಯಾಜ್ಯ ವಿಲೇವಾರಿಗಾಗಿ ತೋಡಿದ್ದ ಗುಂಡಿಗೆ ಬಿದ್ದು ಸಾವಿನೊಂದಿಗೆ ಸೆಣಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಕಾಲಕ್ಕೆ ಕೆಲವರು ಧಾವಿಸಿದ್ದರಿಂದ ಆನೆ ಬದುಕುಳಿಯಿತು.

ಸಿದ್ದಾಪುರ ಪಟ್ಟಣ ರಕ್ಷಿತ ಅರಣ್ಯ ಪ್ರದೇಶವನ್ನು ತೆಕ್ಕೆಯಲ್ಲಿ ಹೊಂದಿರುವ ಗ್ರಾಮ. ಈ ಊರಿನ ಮತ್ತೊಂದು ಪಾರ್ಶ್ವದಲ್ಲಿ ಕಾವೇರಿ ನದಿ ಹರಿಯುತ್ತಿದೆ. ಸುತ್ತಲೂ ಆನೆ ಪಥಗಳನ್ನು ಹೊಂದಿದ್ದು ಸೂಕ್ಷ್ಮ ಪರಿಸರ ತಾಣದ ಪಟ್ಟಿಯಲ್ಲಿ ಈ ಗ್ರಾಮ ಸೇರ್ಪಡೆ ಗೊಂಡಿದೆ. ತ್ಯಾಜ್ಯ ವಿಲೇವಾರಿ ಸಮಸ್ಯೆ ಗ್ರಾಮದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದ್ದು, ಈಗ ಅರಣ್ಯಜೀವಿಗಳ ಪ್ರಾಣಕ್ಕೂ ಹಾನಿಯಾಗುವ ಮಟ್ಟಕ್ಕೆ ಬಂದಿದೆ.

ತ್ಯಾಜ್ಯ ಸಮಸ್ಯೆಯನ್ನು ಬಗೆಹರಿಸಲು ಮಾರ್ಗೋಪಾಯಗಳಿದ್ದರೂ ಅನೇಕ ವರ್ಷಗಳಿಂದ ಜಿಲ್ಲೆಯ ಆಡಳಿತದ ನಿರ್ಲಕ್ಷ್ಯ ಹಾಗೂ ಹಿತಾಸಕ್ತಿಯ ಕೊರತೆಯಿಂದ ಅಮಾಯಕರು ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಲ ವ್ಯಕ್ತಿಗಳು ಸಿದ್ದಾಪುರ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡಿದ್ದು ಇದನ್ನು ತ್ಯಾಜ್ಯ ವಿಲೇವಾರಿಗೆ ನಿಯಮಾನುಸಾರ ಒದಗಿಸುವಂತೆ ಸ್ಥಳೀಯ ಆಡಳಿತ ಬಹಳ ಹಿಂದೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು. ವರ್ಷಗಳು ಉರುಳಿದರೂ ತ್ಯಾಜ್ಯ ವಿಲೇವಾರಿಗೆ ಜಾಗ ನಿಗದಿಪಡಿಸುವ ಪ್ರಕ್ರಿಯೆ ನಡೆದಿಲ್ಲ.

ಏತನ್ಮಧ್ಯೆ ತ್ಯಾಜ್ಯ ಸಮಸ್ಯೆಯ ಸುಳಿಯಿಂದ ಹೊರಬರಲು ಕರಡಿಗೋಡು ಗ್ರಾಮದ ಅರಣ್ಯದ ಅಂಚಿನಲ್ಲಿ ಸ್ಥಳವನ್ನು ನಿಗದಿಪಡಿಸ ಲಾಗಿತ್ತಾದರೂ ಅರಣ್ಯ ಇಲಾಖೆಯ ವಿರೋಧ ಇದಕ್ಕಿದೆ. ಅರಣ್ಯದ ಹಾಡಿಗಳಲ್ಲಿರುವ ಬುಡಕಟ್ಟು ಜನರ ಅಸಮಧಾನವೂ ಇದೆ. ಪಟ್ಟಣದಲ್ಲಿ ಮೀನು, ಕೋಳಿ ಮತ್ತು ಇತರ ಮಾಂಸ ವ್ಯಾಪಾರಸ್ಥರು ತ್ಯಾಜ್ಯಗಳನ್ನು ಕಾವೇರಿ ನದಿ ಸೇರಿದಂತೆ ಎಲ್ಲೆಂದರಲ್ಲಿ ಎಸೆ ಯುತ್ತಿದ್ದಾರೆ.

ತ್ಯಾಜ್ಯ ಸಮಸ್ಯೆಗೆ ಸಂಬಂಧಿಸಿ ಎರಡು ವಾರಗಳ ಹಿಂದೆ ಜಿಲ್ಲಾಧಿಕಾರಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಅಹ್ವಾನಿಸಿದ್ದರು. ಪಿಡಿಒ ಮತ್ತು ಅಧ್ಯಕ್ಷರ ನಡುವೆ ಭುಗಿಲೆದ್ದ ಕಲಹದಿಂದಾಗಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಪಕ್ಕಕ್ಕೆ ಸರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT