ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: 34 ಸಾವಿರ ಮಂದಿಗೆ ಸಿಗದ ‘ಗೃಹಲಕ್ಷ್ಮಿ’

ತಾಂತ್ರಿಕ ಸಮಸ್ಯೆ ಕಾರಣ ಖಾತೆ ಸೇರದ ₹ 2 ಸಾವಿರ: ಅರ್ಜಿ ಸಲ್ಲಿಸಿದ ಮಹಿಳೆಯರ ನಿತ್ಯ ಅಲೆದಾಟ
Published 13 ಅಕ್ಟೋಬರ್ 2023, 6:07 IST
Last Updated 13 ಅಕ್ಟೋಬರ್ 2023, 6:07 IST
ಅಕ್ಷರ ಗಾತ್ರ

ಕೋಲಾರ: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆ ಆರಂಭಗೊಂಡು ಎರಡು ತಿಂಗಳು ಕಳೆದಿದ್ದು, ತಾಂತ್ರಿಕ ಕಾರಣಗಳಿಂದ ಜಿಲ್ಲೆಯ 34 ಸಾವಿರ ‘ಯಜಮಾನಿ’ಯರಿಗೆ ಇನ್ನೂ ಹಣ ತಲುಪಿಲ್ಲ.

ಈ ವರೆಗೆ ಜಿಲ್ಲೆಯಲ್ಲಿ 2.95 ಲಕ್ಷ ಮಹಿಳೆಯರು ‘ಗೃಹಲಕ್ಷ್ಮಿ’ಯ ₹ 2 ಸಾವಿರಕ್ಕಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಅವರಲ್ಲಿ ನಿಗದಿತ ಸಮಯಕ್ಕೆ ನೋಂದಣಿ ಮಾಡಿಕೊಂಡಿರುವ 2,77,937 ಲಕ್ಷ ಫಲಾನುಭವಿಗಳಿಗೆಂದು ಸರ್ಕಾರ ₹ 55.58 ಕೋಟಿ ಅನುದಾನ ಬಿಡುಗಡೆ ಮಾಡಿದೆ. 2,43,955 ‘ಯಜಮಾನಿ’ಯರ ಖಾತೆಗೆ ಈಗಾಗಲೇ ₹ 48.79 ಕೋಟಿ ಹಣ ಜಮೆಯಾಗಿದೆ. ಇನ್ನು ತಾಂತ್ರಿಕ ಸಮಸ್ಯೆಯಿಂದಾಗಿ 33,982 ಮಂದಿ ಫಲಾನುಭವಿಗಳ ಬಿಲ್‌ ಸಿದ್ಧವಾಗದ ಕಾರಣ ಹಣ ಖಾತೆಗೆ ಹೋಗಿಲ್ಲ.

ಹೆಸರು ನೋಂದಾಯಿಸಿದ್ದರೂ ಹಣ ಬಂದಿಲ್ಲವೆಂದು ಮಹಿಳೆಯರು ಚಿಂತೆಗೀಡಾಗಿದ್ದಾರೆ. ತಮಗೆ ಹಣ ಸಿಗುತ್ತೋ ಇಲ್ಲವೋ ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ. ನಿತ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಗೆ ಹೋಗಿ ವಿಚಾರಿಸುತ್ತಿದ್ದಾರೆ. ಸಿಡಿಪಿಒ ಮೊಬೈಲ್‌, ಕಚೇರಿ ದೂರವಾಣಿಗೆ ಕರೆ ಮಾಡುತ್ತಿದ್ದಾರೆ. ಬ್ಯಾಂಕ್‌ಗಳಿಗೆ ಹೋಗಿ ಪರಿಶೀಲಿಸಿಕೊಳ್ಳುತ್ತಿದ್ದಾರೆ. ಆದರೆ, ಹಣ ಜಮೆಯಾಗದ ವಿಷಯ ತಿಳಿದು ಸಪ್ಪೆ ಮೊರೆ ಹಾಕಿ ಹಿಂತಿರುಗುತ್ತಿದ್ದಾರೆ.

‘ಹಲವರು ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡಿಕೊಂಡಿಲ್ಲ. ಇನ್ನು ಕೆಲವರು ಪಡಿತರ ಚೀಟಿಯಲ್ಲಿ ಹೆಸರು ಸರಿಪಡಿಸಿಕೊಂಡಿಲ್ಲ. ಹಲವರದ್ದು ಬ್ಯಾಂಕ್‌ ಖಾತೆ ಸಕ್ರಿಯವಾಗಿಲ್ಲ. ಇಲ್ಲವೇ ಹೆಸರು ತಪ್ಪಾಗಿರುತ್ತದೆ. ಕೆಲವರಿಗೆ ಹಣ ಬಂದಿದ್ದರೂ ಗೊತ್ತಾಗುತ್ತಿಲ್ಲ. ಈ ಬಗ್ಗೆ ಮಾಹಿತಿ ನೀಡಿ ಎಲ್ಲಾ ಅರ್ಹ ಫಲಾನುಭವಿಗಳಿಗೂ ಯೋಜನೆಯ ಲಾಭ ದೊರಕಿಸಿಕೊಡಲು ಶ್ರಮಿಸಲಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಮುದ್ದಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಸುಮಾರು 12 ಸಾವಿರ ಮಹಿಳೆಯರ ಆಧಾರ್‌ ಸೀಡಿಂಗ್‌ ಆಗಿಲ್ಲ ಎಂಬುದು ಗೊತ್ತಾಗಿದೆ. ಕೆಲ ಮಹಿಳೆಯರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿರುತ್ತವೆ. ಇದರಲ್ಲಿ ಆಧಾರ್‌ ಸಂಖ್ಯೆ ಯಾವ ಬ್ಯಾಂಕ್‌ ಖಾತೆಗೆ ಜೋಡಣೆ ಆಗಿದೆ ಎಂಬುದನ್ನು ಪರಿಶೀಲಿಸಿಕೊಂಡು ಮಾಹಿತಿ ನೀಡಬೇಕು. ಇನ್ನು ಕೆಲವರು ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರೂ ಅದನ್ನು ಬಳಕೆ ಮಾಡದೆ ಸಕ್ರಿಯ ಸ್ಥಿತಿಯಲ್ಲಿ ಇಲ್ಲ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಇನ್ನು ಕೆಲವರ ಪಡಿತರ ಚೀಟಿಯಲ್ಲಿ ಯಜಮಾನರ ಹೆಸರು ಮೊದಲಿದೆ. ಹೀಗಾಗಿ, ಹಣ ಸಿಕ್ಕಿಲ್ಲ. ಪಡಿತರ ಚೀಟಿ ತಿದ್ದುಪಡಿ ಮಾಡಿಸಿ ಯಜಮಾನಿಯರ ಹೆಸರು ಮೊದಲು ಸೇರಿಸಬೇಕು. ಅದಕ್ಕೆ ಆಹಾರ ಇಲಾಖೆ ಈಗ ಅವಕಾಶ ಕಲ್ಪಿಸಿದೆ. ಈ ವರೆಗೆ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಳ್ಳದವರು ಅರ್ಜಿ ಸಲ್ಲಿಸಲು ಇನ್ನೂ ಅವಕಾಶವಿದೆ.

ನೋಂದಣಿಗೆ ಅರ್ಜಿ ಸಲ್ಲಿಸಿದಾಗ ನೀಡಿದ ಮಾಹಿತಿ ಬ್ಯಾಂಕ್ ಖಾತೆ ಮಾಹಿತಿ ಪಡಿತರ ಚೀಟಿ ಹಾಗೂ ಆಧಾರ್‌ನಲ್ಲಿರುವ ಮಾಹಿತಿಯಲ್ಲಿ ವ್ಯತ್ಯಾಸ ಇರುವುದರಿಂದ ಈ ಸಮಸ್ಯೆ ಉಂಟಾಗುತ್ತಿದೆ
ಎಂ.ಮುದ್ದಣ್ಣ, ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಅಧಿಕಾರಿಗಳ ಮೇಲೆ ಒತ್ತಡ
‘ಗೃಹಲಕ್ಷ್ಮಿ’ ಹಣಕ್ಕಾಗಿ ಮಹಿಳೆಯರು ನಿತ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಗೆ ತೆರಳಿ ವಿಚಾರಿಸುತ್ತಿದ್ದಾರೆ. ಇದು ಇಲಾಖೆ ಅಧಿಕಾರಿಗಳ ಮೇಲೆ ಮತ್ತಷ್ಟು ಒತ್ತಡ ಹೆಚ್ಚಿಸಿದೆ. ‘ನಿತ್ಯ ಕನಿಷ್ಠ ನೂರು ಮಹಿಳೆಯರು ಕಚೇರಿಗೆ ಭೇಟಿ ನೀಡುತ್ತಾರೆ. ತಮಗೆ ಇನ್ನೂ ಹಣ ಬಂದಿಲ್ಲವೆಂದು ಹೇಳಿಕೊಳ್ಳುತ್ತಾರೆ. ತಾಂತ್ರಿಕ ಕಾರಣಗಳನ್ನು ತಿಳಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಸಿಬ್ಬಂದಿ ಕೂಡ ಕಡಿಮೆ ಇರುವುದರಿಂದ ಎಲ್ಲರ ಮೇಲೆ ಒತ್ತಡ ಹೆಚ್ಚಿದೆ. ಜೊತೆಗೆ ಇಲಾಖೆಯ ಇತರ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು’ ಎಂದು ಮುದ್ದಣ್ಣ ತಿಳಿಸಿದರು.

‘ಗೃಹಲಕ್ಷ್ಮಿ’ಗೆ ನೋಂದಣಿ ಮಾಡಿಯೂ ಹಣ ಸಿಗದಿರಲು ಕೆಲ ಕಾರಣ

  • ಬ್ಯಾಂಕ್‌ ಖಾತೆಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳದಿರುವುದು

  • ಒಂದಕ್ಕಿಂತ ಹೆಚ್ಚು ಖಾತೆ ಹೊಂದಿ ಪರಿಶೀಲನೆ ಮಾಡದಿರುವುದು ‌‌

  • ಆಧಾರ್‌ ಜೋಡಣೆ ಆಗಿರುವುದೊಂದು ಖಾತೆ ನೋಂದಣಿ ವೇಳೆ ನೀಡಿರುವುದು ಬೇರೊಂದು ಖಾತೆ ‌

  • ಬ್ಯಾಂಕ್‌ ಖಾತೆಗೆ ಇ–ಕೆವೈಸಿ ಮಾಡಿಸದಿರುವುದು

  • ಪಡಿತರ ಚೀಟಿಯಲ್ಲಿ ಯಜಮಾನಿಯರ ಹೆಸರು ಎಲ್ಲರಿಗಿಂತ ಮೊದಲು ಇಲ್ಲದಿರುವುದು

  • ನೋಂದಣಿ ವೇಳೆ ನೀಡಿದ ಹೆಸರಿಗೂ ಬ್ಯಾಂಕ್‌ ಖಾತೆಯಲ್ಲಿರುವ ಹೆಸರಿಗೂ ಹೊಂದಾಣಿಕೆ ಆಗದಿರುವುದು

  • ಖಾತೆ ಪರಿಶೀಲಿಸದಿರುವುದು– ಕೆಲವರ ಖಾತೆಗೆ ಹಣ ಬಂದಿದ್ದರೂ ಮೊಬೈಲ್‌ಗೆ ಸಂದೇಶ ಬಂದಿರುವುದಿಲ್ಲ

  • ಖಾತೆ ಸೇರಿ ಬೇರೆ ಯಾವುದೋ ಸಾಲದ ಕಂತಿಗೆ ಹಣ ಜಮೆಯಾಗಿರುವ ಸಾಧ್ಯತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT