ಶ್ರೀನಿವಾಸಪುರ: ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಕರ್ನಾಟಕ ಸರ್ಕಾರಿ ಮಾದರಿ ಉನ್ನತೀಕೃತ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗಾಗಿ ಪುರಸಭೆಯಿಂದ ₹50 ಲಕ್ಷ ನೀಡಲಾಗಿದೆ. ಅಗತ್ಯವಿದ್ದಲ್ಲಿ ಇನ್ನೂ ₹20 ಲಕ್ಷ ನೀಡಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಕರ್ನಾಟಕ ಸರ್ಕಾರಿ ಮಾದರಿ ಉನ್ನತೀಕೃತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಾಲೆಯ ಶತಮಾನೋತ್ಸವ ನೆನಪಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಲೆಗೆ ಅಗತ್ಯವಾದ ತರಗತಿ ಕೊಠಡಿ ನಿರ್ಮಿಸಲಾಗುವುದು. ಅಗತ್ಯ ಸಂಖ್ಯೆಯ ಶಿಕ್ಷರ ಸೇವೆ ಒದಗಿಸಲಾಗುವುದು. ಶತಮಾನೋತ್ಸವ ಸಮಾರಂಭಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ಹೇಳಿದರು.
ವಿದ್ಯಾರ್ಥಿಗಳು ಗುಣಮಟ್ಟದ ಫಲಿತಾಂಶ ಪಡೆಯುವುದರ ಜತೆಗೆ, ನೈತಿಕವಾಗಿ ಬೆಳೆಯಬೇಕು. ಗುರು ಹಿರಿಯರ ಬಗ್ಗೆ ಗೌರವ ಭಾವನೆ ಹೊಂದಿರಬೇಕು. ಶಾಲೆ, ಶಿಕ್ಷಕರು ಹಾಗೂ ಪೋಷಕರಿಗೆ ಗೌರವ ತರಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮುದಾಯ ಕೈ ಜೋಡಿಸಬೇಕು. ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಕೈಗೊಳ್ಳಲು ಸರ್ಕಾರೇತರ ಸಂಸ್ಥೆಗಳು ಮುಂದೆ ಬಂದಿರುವುದು ಶ್ಲಾಘನೀಯ ಸಂಗತಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಲಕ್ಷ್ಮಮ್ಮ, ಮುಖ್ಯ ಶಿಕ್ಷಕ ಎಂ.ಬೈರೇಗೌಡ, ಶ್ರೀನಿವಾಸಮೂರ್ತಿ ಯದುನಾಥ್, ಪ್ರಸಾದ್ ಮಾತನಾಡಿದರು. ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಲೇಖನ ಸಾಮಗ್ರಿ ವಿತರಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಎಸ್‌ಡಿಎಂಸಿ ಅಧ್ಯಕ್ಷ ಆನಂದ ರೆಡ್ಡಿ, ಉಪಾಧ್ಯಕ್ಷೆ ರಜಿಯಾ ಸುಲ್ತಾನ್, ಕೈಗಾರಿಕೆ ಹಾಗೂ ವಾಣಿಜ್ಯ ಮಂಡಳಿ ಉಪ ನಿರ್ದೇಶಕ ರವಿಚಂದ್ರ, ಶ್ರೀನಿವಾಸಪ್ಪ, ಸತ್ಯನಾರಾಯಣ, ಜಗನ್ ಮೋಹನ್ ರೆಡ್ಡಿ, ಗೋವಿಂದರೆಡ್ಡಿ, ಸುರೇಶ್, ಕೃಷ್ಣಪ್ಪ, ವಿಶ್ವನಾಥರೆಡ್ಡಿ, ವೇಣುಗೋಪಾಲರೆಡ್ಡಿ, ವಿಜಯ್, ಶ್ರೀನಿವಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.