ಕೋಲಾರ: ಮಾಲೂರು ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಿತ್ರಕಲಾ ಶಿಕ್ಷಕ ಮುನಿಯಪ್ಪ ಅವರ ಮೊಬೈಲ್‌ನಲ್ಲಿ ಐದು ಸಾವಿರಕ್ಕೂ ಹೆಚ್ಚು ನಗ್ನ ದೃಶ್ಯಗಳಿದ್ದವು ಎನ್ನಲಾದ ವಿಚಾರ ಪೋಷಕರಲ್ಲಿ ಆತಂಕ ತಂದೊಡ್ಡಿದೆ.
ಈ ಸಂಬಂಧ ಪೋಷಕರು, ಸಂಬಂಧಿಕರು ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರಿಗೆ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ತಮ್ಮ ಮಕ್ಕಳಿಗೆ ಸಂಬಂಧಿಸಿದ ವಿಡಿಯೊಗಳು ಇವೆಯೇ ಎಂದು ಆತಂಕಗೊಂಡಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿರುವ ಪೋಷಕರೊಬ್ಬರು, ‘ವಸತಿ ಶಾಲೆಯಲ್ಲಿ ಮಕ್ಕಳು ಬಟ್ಟೆ ಬದಲಾಯಿಸುವ ಫೋಟೊವನ್ನು ಕೆಲವರು ಮೊಬೈಲ್‌ನಲ್ಲಿ ತೆಗೆದಿದ್ದ ಬಗ್ಗೆ ಆಗಲೇ ದೂರು ನೀಡಿದ್ದೆವು’ ಎಂದರು.
ಈ ಕುರಿತು ಪ್ರತಿಕ್ರಿಯಿಸಿರುವ ವಸತಿ ಶಾಲೆಯ ಹೊಸ ಪ್ರಾಂಶುಪಾಲ, ‘ಆರೋಪಿ ಶಿಕ್ಷಕ ಈಗ ನಮ್ಮ ವಸತಿ ಶಾಲೆಯಲ್ಲಿ ಇಲ್ಲ. ಕೆಲ ಸಾಮಾಜಿಕ ಜಾಲತಾಣಗಳು ನಮ್ಮ ಶಾಲೆಯಲ್ಲಿರುವ ಶಿಕ್ಷಕ ಎಂದು ಉಲ್ಲೇಖಿಸುತ್ತಿವೆ. ಪೋಷಕರು ಆತಂಕಗೊಂಡು ಕರೆ ಮಾಡಿ ವಿಚಾರಿಸುತ್ತಿದ್ದಾರೆ. ನಾವು ಸಮಾಧಾನ ಮಾಡುತ್ತಿದ್ದೇವೆ. ಈಗ ನಮ್ಮ ವಸತಿ ಶಾಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ’ ಎಂದರು.
ಪ್ರಕರಣ ನಡೆದಾಗ ಇದ್ದ ವಸತಿ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು, ಅತಿಥಿ ಶಿಕ್ಷಕರು, ಅಡುಗೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲರನ್ನೂ ಈಗಾಗಲೇ ವರ್ಗಾವಣೆ ಮಾಡಲಾಗಿದೆ.
ಶಾಲೆಯಿಂದ ಆರೋಪಿ ಶಿಕ್ಷಕ ವರ್ಗ
‘ಕೋಲಾರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಮಲಗುಂಡಿ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರಕಲಾ ಶಿಕ್ಷಕರಾಗಿದ್ದ ಮುನಿಯಪ್ಪ ಅವರನ್ನು 2023ರ ಡಿ.17ರಂದೇ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ಅಮಾನತುಗೊಳಿಸಿತ್ತು.
ಅವರ ವಿರುದ್ಧ ಮಾಸ್ತಿ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಈಗ ಅವರು ಕೋಲಾರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಜೂನ್ 5ರಂದು ಅಮಾನತು ತೆರವುಗೊಳಿಸಿ ಚಾಮರಾಜನಗರ ಜಿಲ್ಲೆಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ವರ್ಗಾವಣೆ ಮಾಡಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.