ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ವೇದಿಕೆ ಮೇಲೆ ಬಡಿದಾಡಲು ಮುಂದಾದ ಶಾಸಕ ನಾರಾಯಣಸ್ವಾಮಿ –ಸಂಸದ ಮುನಿಸ್ವಾಮಿ

ಸಚಿವರ ಪಕ್ಕ ಕುಳಿತಿರುವ ಭೂಗಳ್ಳ ಎಂದ ಸಂಸದ; ನಿಮ್ಮಪ್ಪ ಭೂಗಳ್ಳ ಎಂದ ಶಾಸಕ
Published 25 ಸೆಪ್ಟೆಂಬರ್ 2023, 7:33 IST
Last Updated 25 ಸೆಪ್ಟೆಂಬರ್ 2023, 7:33 IST
ಅಕ್ಷರ ಗಾತ್ರ

ಕೋಲಾರ: ನಗರದಲ್ಲಿ ಸೋಮವಾರ ನಡೆದ ಜನತಾ ದರ್ಶನದ ವೇದಿಕೆಯಲ್ಲಿಯೇ ಬಂಗಾರಪೇಟೆಯ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹಾಗೂ ಬಿಜೆಪಿ ಸಂಸದ ಎಸ್‌.ಮುನಿಸ್ವಾಮಿ ಕಿತ್ತಾಡಿಕೊಂಡಿದ್ದಾರೆ.

ಪರಸ್ಪರ ಅವಾಚ್ಯವಾಗಿ ನಿಂದಿಸಿಕೊಂಡು, ಕೈ ಕೈ ಮಿಲಾಯಿಸಲು ಮುಂದಾದ ಇಬ್ಬರನ್ನೂ ಪೊಲೀಸರು, ಅಧಿಕಾರಿಗಳು ಸಮಾಧಾನಪಡಿಸಿದರು. ಶಾಸಕರ ಮೇಲೆ ಏರಿಹೋದ ಸಂಸದರನ್ನು ಪೊಲೀಸರು ವೇದಿಕೆ
ಯಿಂದ ಎಳೆದೊಯ್ಯಬೇಕಾಯಿತು.

ಶಾಸಕ ಮತ್ತು ಸಂಸದರ ಜಟಾಪಟಿಗೆ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸೇರಿದ್ದ ಸಾವಿರಾರು ಜನರು, ಅಧಿಕಾರಿಗಳು ಸಾಕ್ಷಿ
ಯಾದರು. ವೇದಿಕೆಯಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಹಾಗೂ ಶಾಸಕರು, ಇಬ್ಬರ ಈ ಕಿತ್ತಾಟವನ್ನು ತಡೆಯಲು ಸಾಧ್ಯವಾಗದೆ ಅಸಹಾಯಕರಾಗಿ ಕುಳಿತಿದ್ದರು. 

ಜಟಾಪಟಿ ಶುರುವಾಗಿದ್ದು ಹೇಗೆ?:

ಶ್ರೀನಿವಾಸಪುರದಲ್ಲಿ ಅರಣ್ಯ ಇಲಾಖೆ ಕೈಗೊಂಡಿರುವ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ಸಂಸದ ಮುನಿಸ್ವಾಮಿ ಅವರು ಸ್ಥಳೀಯ ರೈತ ಮುಖಂಡರ ಜೊತೆಗೂಡಿ ಸಚಿವರಿಗೆ ಅಹವಾಲು ಸಲ್ಲಿಸಲು ಬಂದಿದ್ದರು. ಈ ವೇಳೆ ಅವರು, ‘ಭೂಗಳ್ಳರನ್ನು ಪಕ್ಕದಲ್ಲಿ ಕೂರಿಸಿಕೊಂಡು ಸಚಿವರು ಜನತಾ ದರ್ಶನ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಆ ಮಾತಿನಿಂದ ಕೆರಳಿ, ಕುರ್ಚಿಯಿಂದ ಮೇಲೆದ್ದ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಅವರು ವೇದಿಕೆಯಿಂದಲೇ, ‘ನಿಮ್ಮಪ್ಪ ಭೂಗಳ್ಳ, ಯಾರಿಗೆ ಹೇಳುತ್ತೀಯಾ ಮಗನೇ’ ಎಂದರು. ‘ಬಾಯಿಗೆ ಬಂದಂತೆ ಮಾತನಾಡಬೇಡ. ಶಾಸಕನಿಗೆ ಗೌರವಕೊಡು. ರೌಡಿ ರೀತಿ ವರ್ತಿಸುತ್ತೀಯಾ’ ಎಂದು  ನಿಂದಿಸಿದರು.

ಇದರಿಂದ ಕೆಂಡಾಮಂಡಲವಾದ ಮುನಿಸ್ವಾಮಿ ವೇದಿಕೆ ಏರಿ, ಶಾಸಕರತ್ತ ನುಗ್ಗಿ ಹೋದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾರಾಯಣ ಮತ್ತು ಇತರ ಪೊಲೀಸ್‌ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ಸಂಸದರನ್ನು ತಡೆದು, ವೇದಿಕೆಯಿಂದ ಕೆಳಗೆ ಎಳೆದೊಯ್ದರು.

ಸಿಟ್ಟಿನಿಂದ ಕುದಿಯುತ್ತಿದ್ದ ಮುನಿಸ್ವಾಮಿ ಅವರು ಪೊಲೀಸರಿಂದ ಕೊಸರಿಕೊಂಡು ಮತ್ತೆ ಶಾಸಕರತ್ತ ನುಗ್ಗಿ ಹೋದರು. ‘ಭೂಗಳ್ಳರನ್ನು ಪಕ್ಕದಲ್ಲಿ ಕೂರಿಸಿಕೊಂಡು ಜನತಾ ದರ್ಶನ ಮಾಡುತ್ತೀರಾ ಎಂದಷ್ಟೇ ನಾನು ಕೇಳಿದೆ. ಯಾರ ಹೆಸರನ್ನೂ ಹೇಳಿಲ್ಲ. ಯಾರನ್ನೂ ಹೊಡೆಯಲು ಮುಂದಾಗಿಲ್ಲ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿನೋಡಿ
ಕೊಳ್ಳುವುದು ಏಕೆ? ಅವಾಚ್ಯ ಶಬ್ದಗಳಿಂದ ನನ್ನನ್ನು ಏಕೆ ನಿಂದಿಸಿದೆ’ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ ಕಾರ್ಯಕರ್ತರು ಸಂಸದರ ವಿರುದ್ಧ ಮುಗಿಬಿದ್ದರು. 

ಸಚಿವ ಬೈರತಿ ಸುರೇಶ್‌, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಶಾಸಕ ಕೊತ್ತೂರು ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು ಇಬ್ಬರನ್ನೂ ಸಮಾಧಾನಪಡಿಸಲು ಯತ್ನಿಸಿ ಸೋತು, ಸುಮ್ಮನಾದರು.

ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಸಾರ್ವಜನಿಕರು ಜನಪ್ರತಿನಿಧಿಗಳ ಜಗಳ ಕಂಡು ಕಕ್ಕಾಬಿಕ್ಕಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT