ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಖುಷಿ | ಪರಂಗಿ ಬೆಳೆಯಲ್ಲಿ ಹೊಸ ಪ್ರಯೋಗ

ಕೆ.ತ್ಯಾಗರಾಜ್ ಕೊತ್ತೂರು
Published 6 ಮಾರ್ಚ್ 2024, 6:08 IST
Last Updated 6 ಮಾರ್ಚ್ 2024, 6:08 IST
ಅಕ್ಷರ ಗಾತ್ರ

ಮುಳಬಾಗಿಲು: ಕೃಷಿಯಿಂದ ಬೇಸತ್ತು ಕೃಷಿ ಚಟುವಟಿಕೆಗಳನ್ನೇ ಬಿಟ್ಟು ಬೇರೆ ಕೆಲಸ ಮಾಡಬೇಕೆಂದು ನಿರ್ಧರಿಸಿದ್ದ ರೈತ ಮುನಿನಾರಾಯಣ ರೆಡ್ಡಿ ಆಕಸ್ಮಾತ್‌ ಆಗಿ ಪರಂಗಿ ಬೆಳೆ ಬೆಳೆದು, ಇಂದು ಅದರಿಂದ ಲಕ್ಷಾಂತರ ಲಾಭ ಗಳಿಸುತ್ತಾ ಅದನ್ನೇ ಕಾಯಂ ಮಾಡಿಕೊಳ್ಳುವುದರ ಜತೆಗೆ ವಿವಿಧ ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡಿದ್ದಾರೆ.  

ತಾಯಲೂರು ಸಮೀಪದ ಜೌಗುಪಲ್ಲಿ ಗ್ರಾಮದ ರೈತ ಮುನಿನಾರಾಯಣ ರೆಡ್ಡಿ ಸುಮಾರು 20-30 ವರ್ಷಗಳಿಂದ ನಾನಾ ಬಗೆಯ ಬೆಳೆಗಳನ್ನು ಬೆಳೆದು ಎಲ್ಲದರಲ್ಲಿಯೂ ನಷ್ಟ ಅನುಭವಿಸಿ ಕೃಷಿಯನ್ನೇ ತೊರೆಯುವ ನಿರ್ಧಾರ ಮಾಡಿದ್ದರು. ಆ ಸಂದರ್ಭದಲ್ಲಿ 2 ಎಕರೆ ಜಮೀನಿನಲ್ಲಿ ಆಕಸ್ಮಾತ್‌ ಆಗಿ ಪರಂಗಿ ಬೆಳೆ ಬೆಳೆದು ಮೊದಲ ಪ್ರಯತ್ನದಲ್ಲೇ ₹20 ಲಕ್ಷ ಲಾಭ ಪಡೆದು ಅದೇ ಬೆಳೆಯನ್ನು ಬೆಳೆಯುತ್ತಿದ್ದಾರೆ.

ಎಂಟು ವರ್ಷಗಳಿಂದ ರೆಡ್ ಲೇಡಿ ಎಂಬ ಜಾತಿಯ ಪಪ್ಪಾಯ ಬೆಳೆಯುತ್ತಿದ್ದು, ಎಲ್ಲಾ ಋತುಗಳಲ್ಲೂ ಲಾಭ ಗಳಿಸುತ್ತಾ ಯಶಸ್ವಿ ರೈತ ಎನಿಸಿಕೊಂಡಿದ್ದಾರೆ. ಜತೆಗೆ ಈ ಬಾರಿ ಮೊದಲ ಬಾರಿಗೆ ಮುನಿನಾರಾಯಣ ರೆಡ್ಡಿ ಅವರು ಹೊಸ ಪ್ರಯೋಗ ಮಾಡಿದ್ದು, ದೆಹಲಿ ಪಂದ್ರ-15 ಎಂಬ ಜಾತಿಯ ಪರಂಗಿಯ 2,500 ಸಸಿಗಳನ್ನು ನಾಟಿ ಮಾಡಿದ್ದಾರೆ. ಎಲ್ಲಾ ಗಿಡಗಳು ಸಮೃದ್ಧವಾಗಿ ಹೂ ಬಿಟ್ಟಿದ್ದು, ಈ ಬಾರಿಯೂ ಉತ್ತಮ ಫಸಲು ಪಡೆಯುವ ಭರವಸೆಯಲ್ಲಿದ್ದಾರೆ.

ಎರಡು ವರ್ಷ ಫಸಲು: ಎಂಟು ತಿಂಗಳಿಗೆ ಪರಂಗಿ ಫಸಲು ಕೊಯ್ಲಿಗೆ ಬರಲಿದ್ದು, ನಂತರ ತೋಟ ನಿರ್ವಹಣೆ ಮಾಡುವ ಆಧಾರದ ಮೇಲೆ ಎರಡು ವರ್ಷಗಳ ಕಾಲ‌ ಸುಧೀರ್ಘವಾಗಿ ಫಸಲು ಕೊಯ್ಯಬಹುದು. ಈ ಜಾತಿಯ ಪರಂಗಿ ನಾಟಿ ಮಾಡಲಾಗಿದೆ.‌

₹25 ಲಕ್ಷ ಲಾಭದ ನಿರೀಕ್ಷೆ : ತಾಲ್ಲೂಕಿನಲ್ಲಿ ಇದೇ ಮೊದಲಿಗೆ ವಿಶಿಷ್ಟ ಜಾತಿಯ ಪರಂಗಿ ನಾಟಿ ಮಾಡಿದ್ದು , ಈ  ಪರಂಗಿಗೆ ದೆಹಲಿ  ಉತ್ತಮ ಮಾರುಕಟ್ಟೆಯಾಗಿದೆ. ಮಾರುಕಟ್ಟೆಯಲ್ಲಿ ಕನಿಷ್ಠ ಒಂದು ಕೆಜಿ ₹15 ರಿಂದ ₹20ಕ್ಕೆ ಮಾರಾಟವಾದರೂ ಕನಿಷ್ಠ ₹25 ಲಕ್ಷ ಲಾಭ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ರೈತ.

ಪರಂಗಿಯಲ್ಲಿ ಮಾವು ಬೆಳೆ: ಇನ್ನು ಪರಂಗಿ ತೋಟದಲ್ಲಿ ಇದೇ ಮೊದಲ ಬಾರಿಗೆ 150 ಮಾವಿನ ಸಸಿಗಳನ್ನು ನಾಟಿ ಮಾಡಲಾಗಿದೆ. ಮಾವಿನ ಸಸಿಗಳು ದೊಡ್ಡದಾದ ಮೇಲೆ ಮಾವಿನ ಜತೆ ಮಿಶ್ರವಾಗಿ ಚೆಂಡು ಹೂ ಹಾಗೂ ಇನ್ನಿತರೆ ಬೆಳೆಗಳನ್ನು ಬೆಳೆಯಲಾಗುವುದು. ನಂತರ ಬೇರೆ ಭೂಮಿಯಲ್ಲಿ ಪರಂಗಿಯ ಮತ್ತೊಂದು ಪ್ರಯೋಗಕ್ಕೆ ಇಳಿಯಲಾಗುವುದು ಎನ್ನುತ್ತಾರೆ ಮುನಿನಾರಾಯಣ ರೆಡ್ಡಿ.

ಹೈನುಗಾರಿಕೆಯಲ್ಲೂ ಸೈ: ಇನ್ನೂ ಸೀಮೆ ಹಸುಗಳ ಸಾಕಾಣಿಕೆಯಲ್ಲಿಯೂ ತೊಡಗಿದ್ದು ದಿನಕ್ಕೆ 30 ರಿಂದ 40 ಲೀಟರ್ ಹಾಲನ್ನು ಡೇರಿಗೆ ಹಾಕುವ ಮೂಲಕ ಹೈನುಗಾರಿಕೆಯಲ್ಲಿಯೂ ಯಶಸ್ವಿಯಾಗಿದ್ದಾರೆ.

ಎಂಟು ವರ್ಷಗಳಿಂದ ಪರಂಗಿ ಬೆಳೆದು ಲಾಭ ಕಂಡಿದ್ದೇನೆ ಅನೇಕ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸಿ ಕೃಷಿಯನ್ನೇ ಬಿಡಬೇಕು ಎಂದು ನಿರ್ಧರಿಸಿದ್ದ ಸಮಯದಲ್ಲಿ ಆಕಸ್ಮಾತ್‌ ಆಗಿ ಪರಂಗಿ ಬೆಳೆದೆ. ಅದೇ ವರ್ಷ ₹20 ಲಕ್ಷ ಲಾಭ ಬಂದಿದ್ದರಿಂದ ಯಾವುದೇ ಕಾರಣಕ್ಕೂ ಪಪ್ಪಾಯ ಬಿಟ್ಟು ಬೇರೆ ಬೆಳೆ ಬೆಳೆಯಬಾರದು ಎಂದು ನಿರ್ಧರಿಸಿ ಕಾಯಂ ಆಗಿ ಪರಂಗಿ ಬೆಳೆಯುತ್ತಿದ್ದೇನೆ. ಎಂಟು ವರ್ಷಗಳಿಂದ ಪ್ರತಿ ಬೆಳೆಯಲ್ಲೂ ಲಾಭ ಕಂಡಿದ್ದೇನೆ. ಈ ಬಾರಿ ದೆಹಲಿ ಪಂದ್ರ–15 ತಳಿಯ ಪರಂಗಿಯನ್ನು ನಾಟಿ ಮಾಡಿದ್ದೇವೆ. ಉತ್ತಮ ಲಾಭ ನಿರೀಕ್ಷೆಯಲ್ಲೂ ಇದ್ದೇನೆ.
ಮುನಿನಾರಾಯಣ ರೆಡ್ಡಿ ,ರೈತ
ಪರಂಗಿ ಗಿಡಗಳಲ್ಲಿ ಸಮೃದ್ಧವಾಗಿರುವ ಫಸಲು 
ಪರಂಗಿ ಗಿಡಗಳಲ್ಲಿ ಸಮೃದ್ಧವಾಗಿರುವ ಫಸಲು 
ಮುನಿನಾರಾಯಣ ರೆಡ್ಡಿ
ಮುನಿನಾರಾಯಣ ರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT