ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಬದಿ ವ್ಯಾಪಾರಿಗಳ ಶೋಷಣೆ ಮುಕ್ತಿಗೆ ಕ್ರಮ

Last Updated 7 ಡಿಸೆಂಬರ್ 2019, 14:23 IST
ಅಕ್ಷರ ಗಾತ್ರ

ಕೋಲಾರ: ‘ಬಡತನ, ಜಾತಿಯನ್ನು ಬಂಡವಾಳವಾಗಿಸಿಕೊಂಡು ಓಟು ಗಿಟ್ಟಿಸುವ ಜಾಯಮಾನ ನನ್ನದಲ್ಲ. ಬಡತನದ ವಿರುದ್ದ ಸಮರ ಸಾರಿ ಸ್ವಾವಲಂಬನೆಯ ಬದುಕು ಕಲ್ಪಿಸುವ ಸಂಕಲ್ಪದೊಂದಿಗೆ ಡಿಸಿಸಿ ಬ್ಯಾಂಕ್ ಆರ್ಥಿಕ ನೆರವು ಒದಗಿಸುತ್ತಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.

ನಗರದ ಶನಿವಾರ ಬೀದಿ ಬದಿಯ ಸಣ್ಣ ವ್ಯಾಪಾರಿಗಳ ಕ್ಷೇಮಾಭಿವೃದ್ದಿ ಸಂಘವನ್ನು ಉದ್ಘಾಟಿಸಿ ಮಾತನಾಡಿ, ‘ಬೀದಿಬದಿ ವ್ಯಾಪಾರ ಮಾಡಿ ಜೀವನ ನಡೆಸುವ ಬಡವರರನ್ನು ಬಡ್ಡಿ ಶೋಷಣೆಯಿಂದ ಮುಕ್ತಿಗೊಳಿಸಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಹೇಳಿದರು.

‘ಬಡವರಿಗೂ ಸ್ವಾಭಿಮಾನದ ಬದುಕುವ ಅವಕಾಶ ಕಲ್ಪಿಸುವ ದಿಸೆಯಲ್ಲಿ ಬಡ್ಡಿರಹಿತವಾಗಿ ₨ ೧೦ ಸಾವಿರ ಸಾಲ ನೀಡುತ್ತಿದೆ. ಮೀಟರ್ ಬಡ್ಡಿ ಶೋಷಣೆಯಿಂದ ನಿಮ್ಮನ್ನು ಪಾರು ಮಾಡಲು ಸರ್ಕಾರ ಬಡವರ ಬಂಧು ಯೋಜನೆ ಜಾರಿಗೆ ತಂದಿದ್ದು, ಇದರ ಪ್ರಯೋಜನೆ ಪಡೆದುಕೊಳ್ಳಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಸಾಲ ಪಡೆದುಕೊಳ್ಳುವ ಫಲಾನುಭವಿ ಡಿಸಿಸಿ ಬ್ಯಾಂಕಿನಲ್ಲಿ ಖಾತೆ ತೆರೆಯಬೇಕು. ವ್ಯವಹಾರಗಳನ್ನು ಬ್ಯಾಂಕಿನಲ್ಲಿ ಮುಂದುವರೆಸಿ ನೀವೇ ನಮ್ಮ ಬ್ಯಾಂಕಿನ ಆಸ್ತಿಯಾಗಬೇಕು. ಪಡೆದ ಸಾಲ ಪ್ರಾಮಾಣಿಕವಾಗಿ ಮರು ಪಾವತಿಸಿದಲ್ಲಿ ಮುಂದಿನ ಸಾಲ ಹೆಚ್ಚುವರಿಯಾಗಿ ನೀಡಲಾಗುವುದು’ ಎಂದು ಹೇಳಿದರು.

ಬ್ಯಾಂಕಿನ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ‘ಬಡ್ಡಿರಹಿತ ₨ ೧೦ ಸಾವಿರ ಸಾಲದ ಜತೆಗೆ ವಾರ್ಷಿಕ ಬಡ್ಡಿ ಶೇ.೯ರ ದರದಲ್ಲಿ ₨ ೧ ಲಕ್ಷದವರೆಗೂ ಸಾಲ ನೀಡಲು ಆಡಳಿತ ಮಂಡಲಿಯಲ್ಲಿ ಚರ್ಚಿಸಿ ತೀರ್ಮಾನಿಸಿರುವುದು ಸ್ವಾಗತಾರ್ಹವಾಗಿದೆ’ ಎಂದರು.

‘ಮಹಿಳೆಯರಿಗೆ ಸ್ವಾವಲಂಬಿ ಬದುಕಿಗೆ ಹಾಗೂ ರೈತರಿಗೆ ಬಡ್ಡಿ ರಹಿತ ಸಾಲ ಕೊಡುವ ಕೆಲಸ ಮಾಡಲಾಗುತ್ತಿದೆ. ಕೋಲಾರ ಚಿಕ್ಕಬಳ್ಳಾಪುರದಲ್ಲಿ ಸುಮಾರು ೪ ಸಾವಿರ ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಕಲ್ಪಿಸಿ ಬಡ್ಡಿ ಮಾಫಿಯಾದಿಂದ ಮುಕ್ತಿ ಕಲ್ಪಿಸಲಾಗಿದೆ’ ಎಂದು ಹೇಳಿದರು.

ವಕೀಲ ನರೇಂದ್ರ ಬಾಬು, ನಗರಸಭೆ ಸದಸ್ಯ ಅಪ್ಸರ್, ಸಂಘದ ಅಧ್ಯಕ್ಷ ಎಚ್.ಶೇಕ್ ಖದೀರ್, ಉಪಾಧ್ಯಕ್ಷ ಸಲಿಂಪಾಷ ಕಾರ್ಯದರ್ಶಿ ಅನ್ವರ್ ಪಾಷ, ಖಜಾಂಚಿ ಮಹಮ್ಮದ್ ಹಫೀಜ್, ಪ್ರಧಾನ ಕಾರ್ಯದರ್ಶಿ ದಾಮೋದರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT