ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್: ಆಡಳಿತ ಸೌಧ: ಸೌಲಭ್ಯಗಳ ಕೊರತೆ

ಸರ್ಕಾರಿ ಕೆಲಸಕ್ಕಾಗಿ ಬರುವ ಜನಸಾಮಾನ್ಯರ ಪರದಾಟ
Last Updated 27 ಫೆಬ್ರುವರಿ 2023, 6:53 IST
ಅಕ್ಷರ ಗಾತ್ರ

ಕೆಜಿಎಫ್: ಸುಮಾರು ಹತ್ತು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ತಾಲ್ಲೂಕು ಆಡಳಿತ ಸೌಧ ಅವ್ಯವಸ್ಥೆಯ ಆಗರವಾಗಿದ್ದು, ಸೂಕ್ತ ನಿರ್ವಹಣೆಯಿಲ್ಲದೆ ಗಲೀಜು ಗೂಡಾಗಿದೆ.

ಲೋಕೋಪಯೋಗಿ ಇಲಾಖೆ ನಿರ್ಮಿಸಿರುವ ಆಡಳಿತ ಸೌಧದ ಉದ್ಘಾಟನೆಗೆ ಕಂದಾಯ ಸಚಿವ ಆರ್. ಅಶೋಕ ಅವರು ಬರಲಿದ್ದಾರೆ ಎಂಬ ಕಾರಣಕ್ಕೆ ಕಳೆದ ಅಕ್ಟೋಬರ್‌ನಲ್ಲಿ ಇಲಾಖೆಯು ಉದ್ಘಾಟನೆಗೆ ತರಾತುರಿ ಮಾಡಿತ್ತು. ಅದರಂತೆ ಇನ್ನೂ ಕಾಮಗಾರಿ ಬಾಕಿಯಿರುವಾಗಲೇ, ಕಟ್ಟಡಗಳನ್ನು ತಾಲ್ಲೂಕು ಆಡಳಿತಕ್ಕೆ ನೀಡಲಾಗಿತ್ತು. ಇದರಿಂದಾಗಿ ಭವ್ಯ ಕಟ್ಟಡದಲ್ಲಿ ಮೂಲ ಸೌಲಭ್ಯಗಳ ಕೊರತೆಯಿಂದಾಗಿ ಜನರು ಪರದಾಡುವಂತಾಗಿದೆ.

ಸುಮಾರು ಮೂರು ಎಕರೆ ಹತ್ತು ಗುಂಟೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಕಟ್ಟಡದ ಸುತ್ತಮುತ್ತಲೂ ಗಿಡಗಳನ್ನು ನೆಟ್ಟು, ಬರುವ ಜನರಿಗೆ ನೆರಳಿನ ವಾತಾವರಣ ಕಲ್ಪಿಸಬಹುದಿತ್ತು. ಆದರೆ, ಕಟ್ಟಡದ ಸುತ್ತಮುತ್ತ ನೆಡಲಾಗಿರುವ ಒಂದೆರಡು ಗಿಡಗಳಿಗೆ ಕೂಡ ನೀರು ಹಾಕುವವರಿಲ್ಲದೆ, ಸೊರಗಿ ಹೋಗಿವೆ.

ವಿವಿಧ ಸರ್ಕಾರಿ ಕೆಲಸಗಳಿಗಾಗಿ ಕಚೇರಿಗೆ ಬರುವ ಅಸಹಾಯಕರಿಗಾಗಿ ಕಟ್ಟಡದಲ್ಲಿ ಲಿಫ್ಟ್ ವ್ಯವಸ್ಥೆಯನ್ನು ಯೋಜನೆಯಲ್ಲಿ ಸೇರಿಸಲಾಗಿದೆ. ಒಂದು ವಾರದ ಒಳಗಾಗಿ ಲಿಫ್ಟ್ ಅಳವಡಿಸಲಾಗುತ್ತದೆ. ಇದಕ್ಕಾಗಿ ಜನರೇಟರ್ ಅನ್ನೂ ತರಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್ ತಿಳಿಸಿದ್ದರು. ಆದರೆ, ಕಟ್ಟಡ ಉದ್ಘಾಟನೆಯಾಗಿ, ಮೂರು ತಿಂಗಳು ಕಳೆದರೂ ಈವರೆಗೆ ಕಟ್ಟಡದಲ್ಲಿ ಲಿಫ್ಟ್ ಅನ್ನು ಅಳವಡಿಸಲಾಗಿಲ್ಲ.

ವಿವಿಧ ಕಡೆಗಳಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಇಲಾಖೆಗಳನ್ನು ಶೀಘ್ರವೇ ತಾಲ್ಲೂಕು ಆಡಳಿತ ಸೌಧಕ್ಕೆ ವರ್ಗಾಯಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ವೆಂಕಟರಾಜಾ ಹೇಳಿದ್ದರು. ಆದರೆ, ತಾಲ್ಲೂಕು ಕಚೇರಿ ಸೇರಿ ಮೂರು ಇಲಾಖೆ ಹೊರತುಪಡಿಸಿ, ಉಳಿದ ಯಾವುದೇ ಇಲಾಖೆಗಳು ಈ ಕಟ್ಟಡದತ್ತ ಮುಖ ಮಾಡಿಲ್ಲ. ಬಹು ಬೇಡಿಕೆಯುಳ್ಳ ನೋಂದಾಣಾಧಿಕಾರಿಗಳ ಕಚೇರಿಯನ್ನು ಬಂಗಾರಪೇಟೆಯಿಂದ ಕೆಜಿಎಫ್‌ಗೆ ಇನ್ನೂ ವರ್ಗಾವಣೆಯಾಗಿಲ್ಲ. ಇದರಿಂದ ಕೆಜಿಎಫ್ ತಾಲ್ಲೂಕಿನ ಆಸ್ತಿಗಳ ನೋಂದಣಿಗೆ ಜನರು ಬಂಗಾರಪೇಟೆಗೆ ಹೋಗುವ ಅನಿವಾರ್ಯತೆ ಎದುರಾಗಿದೆ.

ಮೂರು ಮಹಡಿಗಳ ಕಟ್ಟಡಕ್ಕೆ ಅವಶ್ಯಕ ಇರುವ ಮಾದರಿಯಲ್ಲಿ ಅಗ್ನಿ ನಂದಕಗಳನ್ನು ಅಳವಡಿಸಲಾಗಿಲ್ಲ. ಬೆಂಕಿ ನಂದಿಸಲು ಬೃಹತ್ ನೀರಿನ ಟ್ಯಾಂಕ್, ಸ್ಪಿಂಕ್ಲರ್, ನೀರಿನ ಪೈಪ್, ಮಾದರಿ ಸೂಚನಾ ಫಲಕ ಅಳವಡಿಸಲಾಗಿಲ್ಲ. ದಾಖಲೆ ಕೊಠಡಿಗಳಲ್ಲಿ ಕಡತಗಳ ರಕ್ಷಣೆಗೆ ಸ್ವಯಂಚಾಲಿತ ಮಾಡ್ಯುಲರ್ ಅಳವಡಿಸಬೇಕು ಎಂದು ಅಗ್ನಿಶಾಮಕದಳ ಅಧಿಕಾರಿಗಳು ತಿಳಿಸಿದ್ದಾರೆ.

ಶೌಚಾಲಯ ವ್ಯವಸ್ಥೆಯೇ ಇಲ್ಲ

ಸಾವಿರಾರು ಜನ ಪ್ರತಿನಿತ್ಯ ಬರುವ ತಾಲ್ಲೂಕು ಆಡಳಿತ ಕಚೇರಿಗೆ ಪ್ರತಿದಿನ ಸಾವಿರಾರು ಜನರು ಬಂದು ಹೋಗುತ್ತಾರೆ. ಇಂಥ ಕಚೇರಿಯಲ್ಲಿ ಸಾರ್ವಜನಿಕರಿಗಾಗಿ ಒಂದೇ ಒಂದು ಶೌಚಾಲಯದ ವ್ಯವಸ್ಥೆಯಿಲ್ಲ. ಇದರಿಂದಾಗಿ ಪುರುಷರು ಕಟ್ಟಡದ ಹಿಂಭಾಗದಲ್ಲೇ ಹೋಗಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದಾಗಿ ಕಟ್ಟಡದ ಸುತ್ತ ದುರ್ಗಂಧ ಬೀರುತ್ತಿದೆ. ಕಚೇರಿಗೆ ಬರುವ ಮಹಿಳೆಯರ ಗೋಳು ಹೇಳತೀರದ್ದಾಗಿದೆ.

ಇತ್ತೀಚೆಗೆ ಸರ್ಕಾರದ ಯೋಜನೆಗಳ ಫಲಾನುಭವಿಗಳು ಆಧಾರ್ ಸಹಿತ ಖುದ್ದು ಹಾಜರಾಗಿ ನೋಂದಣಿ ಮಾಡಿಕೊಳ್ಳುವ ವೇಳೆ ಪ್ರತಿನಿತ್ಯ ಸಾವಿರಾರು ವೃದ್ಧರು, ಅಶಕ್ತರು, ಅಂಗವಿಕಲರು ತಮ್ಮ ನೋಂದಣಿಗಾಗಿ ಬೆಳಗಿನ ಜಾವ ಐದು ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುವ ಸಂಕಷ್ಟ ಎದುರಾಗಿತ್ತು.

ನಿರ್ವಹಣೆ ಎಲ್ಲ ಇಲಾಖೆಗಳ ಹೊಣೆ

ತಾಲ್ಲೂಕು ಆಡಳಿತ ಸೌಧದಲ್ಲಿ ಸರ್ಕಾರಿ ಕಚೇರಿಗಳಿಗೆ ಕೊಠಡಿಗಳನ್ನು ವಿಂಗಡಿಸಿ, ನೀಡಲಾಗಿದೆ. ಆದರೆ ಆಹಾರ, ಕಾರ್ಮಿಕ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊರೆತುಪಡಿಸಿ ಯಾವುದೇ ಇಲಾಖೆಗಳು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಕಟ್ಟಡದ ದೈನಂದಿನ ನಿರ್ವಹಣೆ ಎಲ್ಲ ಇಲಾಖೆಗಳ ಹೊಣೆಯಾಗಿದೆ. ಇಡೀ ಕಟ್ಟಡದ ನಿರ್ವಹಣೆಯನ್ನು ಕಂದಾಯ ಇಲಾಖೆ ಮಾತ್ರವೇ ಮಾಡಲು ಸಾಧ್ಯವಿಲ್ಲ. ಕಟ್ಟಡವನ್ನು ಲೋಕೋಪಯೋಗಿ ಇಲಾಖೆ ಹಸ್ತಾಂತರ ಮಾಡಿದ್ದರೂ, ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಟ್ಟಿಲ್ಲ. ಆಗಾಗ್ಗೆ ಕೊಡುವ ಸೌಲಭ್ಯಗಳನ್ನು ಮಾತ್ರ ನೀಡಿ ಹಿಂಬರಹ ಪಡೆದುಕೊಳ್ಳುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT