ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: ಮರದ ಕೆಳಗೆ ಪದವಿ ಪ್ರವೇಶಾತಿ!

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತಯಂತ್ರ; ಬಾಲಕಿಯರ ಜೂನಿಯರ್‌ ಕಾಲೇಜಿನಲ್ಲಿ ತರಗತಿ–ಗೊಂದಲ
Published 16 ಮೇ 2024, 7:06 IST
Last Updated 16 ಮೇ 2024, 7:06 IST
ಅಕ್ಷರ ಗಾತ್ರ

ಕೋಲಾರ: ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕೋಲಾರ ಮೀಸಲು ಲೋಕಸಭೆ ಕ್ಷೇತ್ರದ ವಿದ್ಯುನ್ಮಾನ ಮತ‌ಯಂತ್ರ ಇಟ್ಟಿರುವ ಕಾರಣ ತರಗತಿಗಳು ಪಕ್ಕದ ಬಾಲಕಿಯರ ಸರ್ಕಾರಿ ಜೂನಿಯರ್‌ ಕಾಲೇಜಿಗೆ ಸ್ಥಳಾಂತರಗೊಂಡಿದ್ದು, ಕೊಠಡಿ ಸಮಸ್ಯೆ ಕಾರಣ ಪ್ರಸ್ತಕ ಶೈಕ್ಷಣಿಕ ಸಾಲಿನ ಪದವಿ ಕೋರ್ಸ್‌ಗಳ ಪ್ರವೇಶಾತಿಯನ್ನು ಮರದ ಕೆಳಗೆ ನಡೆಸಲಾಗುತ್ತಿದೆ.

ಪದವಿ ತರಗತಿ ನಡೆಸಲು ಜೂನಿಯರ್‌ ಕಾಲೇಜಿನಲ್ಲಿ 16 ಕೊಠಡಿ ನೀಡಲಾಗಿದೆ. ಏಪ್ರಿಲ್‌ 27ರಿಂದ ಜೂನ್‌ 6ರವರೆಗೆ ಇಲ್ಲಿಯೇ ತರಗತಿ ನಡೆಸಬೇಕಾಗಿದೆ.

ಉಪನ್ಯಾಸಕರ ಕೊಠಡಿ (ಸ್ಟಾಫ್‌ ರೂಮ್‌) ಹಾಗೂ ಕಚೇರಿ ಒಂದೇ ಕೊಠಡಿಯಲ್ಲಿ ನಡೆಯುತ್ತಿವೆ. ಇದರಿಂದ ತೊಂದರೆ ಆಗುತ್ತಿರುವುದಾಗಿ ಉಪನ್ಯಾಸಕರು ಹೇಳಿಕೊಂಡಿದ್ದಾರೆ. ಪ್ರಥಮ ಪದವಿ ಕೋರ್ಸ್‌ಗಳಿಗೆ ಪ್ರವೇಶಾತಿ ಕೂಡ ಆರಂಭವಾಗಿದ್ದು, ಕೊಠಡಿ ಸಮಸ್ಯೆ ಎದುರಾಗಿದೆ. ಪೂರಕವಾದ ವಾತಾವರಣವೂ ಇಲ್ಲ. ಹೀಗಾಗಿ, ಸಿಬ್ಬಂದಿ ಕಾಲೇಜಿನ ಆವರಣದಲ್ಲಿ ಮರದ ಕೆಳಗೆ ಕುರ್ಚಿ ಹಾಕಿಕೊಂಡು ಕುಳಿತು ಪ್ರವೇಶಾತಿ ಪ್ರಕ್ರಿಯೆ ನಡೆಸುತ್ತಿದ್ದಾರೆ. ಅಲ್ಲದೇ, ಹೊಸದಾಗಿ ಪ್ರವೇಶಾತಿಗೆ ಅರ್ಜಿ ಪಡೆಯಲು ವಿದ್ಯಾರ್ಥಿಗಳು ವಿಳಾಸ ಗೊತ್ತಾಗದೇ ಪರದಾಡುತ್ತಿದ್ದಾರೆ.

ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರು, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ, ಶಿಕ್ಷಣ ಸಂಯೋಜಕ ಮತ್ತಿತರ ಹುದ್ದೆಗಳಿಗೆ ಬಾಲಕಿಯರ ಜೂನಿಯರ್‌ ಕಾಲೇಜಿನಲ್ಲೇ ಮೇ 14 ರಿಂದ 16 ರವರೆಗೆ ಪರೀಕ್ಷೆಗಳು ನಡೆಯುತ್ತಿವೆ. ಇದರಿಂದ ಮತ್ತಷ್ಟು ತೊಂದರೆ ಉಂಟಾಗಿದ್ದು, ಪದವಿ ವಿದ್ಯಾರ್ಥಿಗಳಿಗೆ ರಜೆ ಕೊಡಬೇಕಾದ ಪರಿಸ್ಥಿತಿ ಎದುರಾಗಿದೆ.

‘ಪ್ರವೇಶಾತಿಗೆ ತೊಂದರೆ ಉಂಟಾಗಿದೆ. ಜೊತೆಗೆ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಪರೀಕ್ಷೆಗಳು ಇಲ್ಲಿಯೇ ನಡೆಯುತ್ತಿದ್ದು, ಕೊಠಡಿ ಅಲಭ್ಯತೆಯಿಂದ ವಿದ್ಯಾರ್ಥಿಗಳಿಗೆ ಮೂರು ದಿನ ರಜೆ ಘೋಷಿಸಿದ್ದೇವೆ’ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎನ್‌.ಶ್ರೀನಿವಾಸಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳಿಗ್ಗೆ ಬಿ.ಎ, ಬಿ.ಕಾಂ ಹಾಗೂ ಬಿ.ಎಸ್ಸಿ ತರಗತಿ, ಮಧ್ಯಾಹ್ನ ಬಿಎಸ್‌ಡಬ್ಲ್ಯು, ಬಿಸಿಎ ತರಗತಿ ನಡೆಸುತ್ತಿದ್ದಾರೆ. ಈಗಾಗಲೇ ಪದವಿಯ 1, 3, 5ನೇ ಸೆಮಿಸ್ಟರ್‌ ಪರೀಕ್ಷೆ ನಡೆದಿದ್ದು, ಫಲಿತಾಂಶ ಬರಬೇಕು. 2, 4, 6 ನೇ ಸೆಮಿಸ್ಟರ್‌ ತರಗತಿಗಳು ಈಗ ನಡೆಯುತ್ತಿವೆ.

‘ಕುಡಿಯುವ ನೀರಿನ ಸಮಸ್ಯೆ ಇದೆ. ವಿದ್ಯುತ್‌ ಸಂಪರ್ಕ ಇದ್ದರೂ ಫ್ಯಾನ್‌ ಇಲ್ಲ. ಜೂನ್‌ 6ರವರೆಗೆ ಇಲ್ಲಿಯೇ ತರಗತಿ ನಡೆಸಬೇಕಿದೆ. ಆದರೆ, ಜೂನ್‌ 1ರಂದು ಪಿಯು ತರಗತಿ ಆರಂಭವಾಗಲಿದ್ದು, ಅವರಿಗೆ ನಾವು ಕೊಠಡಿ ಬಿಟ್ಟುಕೊಡಬೇಕಿದೆ. ಹೀಗಾಗಿ, ಜೂನ್‌ 1ರಿಂದ ಜೂನ್‌ 6ರವರೆಗೆ ಪದವಿ ವಿದ್ಯಾರ್ಥಿಗಳಿಗೆ ರಜೆ ನೀಡಬೇಕಾಗುತ್ತದೆ’ ಎಂದರು.

ಈ ಬಾರಿ ಸ್ನಾತಕೋತ್ತರ ಪರೀಕ್ಷೆಗಳನ್ನು ನಡೆಸಲು ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಅವಕಾಶ ಲಭಿಸಿತ್ತು. ಕೊಠಡಿ ಕೊರತೆ ಕಾರಣ ಆರ್‌.ವಿ.ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಜೊತೆಗೆ ಪದವಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲು ಇದೇ ಕಾಲೇಜಿಗೆ ಅವಕಾಶ ಸಿಕ್ಕಿತ್ತು. ಮತಯಂತ್ರ ಇಟ್ಟಿರುವ ಕಾರಣ ಕೆ.ಆರ್‌.ಪುರಂಕ್ಕೆ ಸ್ಥಳಾಂತರಿಸಲಾಗಿದೆ.

ತರಗತಿ ನಡೆಸಲು ಪರದಾಟ, ಪ್ರವೇಶಾತಿಗೆ ಗೊಂದಲ ಒಂದೇ ಕೊಠಡಿಯಲ್ಲಿ ಸ್ಟಾಫ್‌ ರೂಮ್‌, ಕಚೇರಿ ಜೂನ್‌ 1ರಿಂದ ಪಿಯು ತರಗತಿ–ಆಗ ಕೊಠಡಿ ಬಿಟ್ಟುಕೊಡಬೇಕಾದ ಅನಿವಾರ್ಯ
ತರಗತಿ ಸ್ಥಳಾಂತರದಿಂದ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಜೊತೆಗೆ ಈಗ ನೀಡಿರುವ ಜಾಗದಲ್ಲಿ ನಿರಂತವಾಗಿ ಪದವಿ ತರಗತಿ ನಡೆಸಲು ಅಡ್ಡಿ ಉಂಟಾಗುತ್ತಿದೆ. ಕೆಲ ದಿನ ರಜೆ ನೀಡಬೇಕಾಗಿದೆ
ಪ್ರೊ.ಕೆ.ಎನ್‌.ಶ್ರೀನಿವಾಸಗೌಡ ಪ್ರಾಂಶುಪಾಲ ಸರ್ಕಾರಿ ಪ್ರಥಮದರ್ಜೆ ಕಾಲೇಜು ಕೋಲಾರ
ಜೂನ್‌ 6ರ ನಂತರ ತರಗತಿಗೆ ಅವಕಾಶ
ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸುಮಾರು 16 ಭದ್ರತಾ ಕೊಠಡಿಗಳಲ್ಲಿ ಏಪ್ರಿಲ್‌ 27ರಂದು ಮತಯಂತ್ರ ಇಟ್ಟು ಸೀಲ್‌ ಮಾಡಲಾಗಿದೆ. ಸುರಕ್ಷತೆಗಾಗಿ ಈ ಕೊಠಡಿಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ. ಮೂರು ಹಂತದ ಭದ್ರತೆ ಕಲ್ಪಿಸಲಾಗಿದೆ. ಜೂನ್‌ 4ರಂದು ಇಲ್ಲಿಯೇ ಕೋಲಾರ ಮೀಸಲು ಕ್ಷೇತ್ರದ ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದ್ದು ಜೂನ್‌ 6ರ ನಂತರವಷ್ಟೇ ಕಾಲೇಜು ಪುನರಾರಂಭಿಸಲು ಬಿಟ್ಟುಕೊಡಲಾಗುತ್ತದೆ.
ಕಾಲೇಜಿನಲ್ಲಿ 1700 ವಿದ್ಯಾರ್ಥಿಗಳು
‘ಪಿಯುಸಿ ಫಲಿತಾಂಶ ಬಂದಿದ್ದು ಪ್ರಥಮ ಪದವಿಗೆ ಪ್ರವೇಶಾತಿ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 150 ಅರ್ಜಿಗಳನ್ನು ವಿದ್ಯಾರ್ಥಿಗಳು ತೆಗೆದುಕೊಂಡು ಹೋಗಿದ್ದಾರೆ. 25 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಂಡಿದ್ದಾರೆ. ಈ ಬಾರಿ 500ರಿಂದ 600ವಿದ್ಯಾರ್ಥಿಗಳು ಹೊಸದಾಗಿ ಪ್ರವೇಶಾತಿ ಪಡೆಯುವ ನಿರೀಕ್ಷೆ ಇದೆ’ ಎಂದು ಕೆ.ಎನ್‌.ಶ್ರೀನಿವಾಸಗೌಡ ತಿಳಿಸಿದರು. ‘ಸದ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ 1700 ವಿದ್ಯಾರ್ಥಿಗಳು ಇದ್ದಾರೆ. ಅಂತಿಮ ಪದವಿ ತರಗತಿ ಜುಲೈ 25ಕ್ಕೆ ಮುಗಿಯುತ್ತದೆ. ಆನಂತರ ಮೊದಲ ಪದವಿಯ ತರಗತಿಗಳು ಆರಂಭವಾಗುತ್ತವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT