ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಉತ್ಪನ್ನ: ಲಾಭದಾಯಕ ಬೆಲೆ ಘೋಷಿಸಿ- ಭಾರತೀಯ ಕಿಸಾನ್ ಸಂಘ

Last Updated 11 ಜನವರಿ 2022, 15:56 IST
ಅಕ್ಷರ ಗಾತ್ರ

ಕೋಲಾರ: ಕೃಷಿ ಉತ್ಪನ್ನಗಳಿಗೆ ಕೇಂದ್ರ ಸರ್ಕಾರವೇ ಲಾಭದಾಯಕ ಬೆಲೆ ಘೋಷಿಸಬೇಕೆಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ಸದಸ್ಯರು ಇಲ್ಲಿ ಮಂಗಳವಾರ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ಮಾಡಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕವಾದರೂ ರೈತರ ಜೀವನ ಸುಧಾರಿಸಿಲ್ಲ. ಬೆಲೆ ಕುಸಿತ, ಪ್ರಾಕೃತಿಕ ವಿಕೋಪ, ಬೆಳೆ ನಾಶದಿಂದ ರೈತರು ಪ್ರತಿನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಬಂಡವಾಳಶಾಹಿಗಳು, ಕಾರ್ಪೊರೇಟ್‌ ಕಂಪನಿಗಳು ಹಾಗೂ ಹಣವಂತ ರಾಜಕಾರಣಿಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರಗಳು ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿವೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ರೈಲ್ವೆ, ರಸ್ತೆ, ವಿದ್ಯುನ್ಮಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಮಂಗಳ ಗ್ರಹಕ್ಕೂ ತಲುಪಿದ್ದೇವೆ. ಆದರೆ, ಜೀವನಕ್ಕೆ ಅತ್ಯಗತ್ಯವಾಗಿ ಬೇಕಾದ ಆಹಾರ ಉತ್ಪಾದಿಸುವ ಕೃಷಿ ಕ್ಷೇತ್ರದ ಸ್ಥಿತಿ ಇಂದಿಗೂ ಡೋಲಾಯಮಾನವಾಗಿದೆ. ಆರ್ಥಿಕ ಸಂಕಷ್ಟದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಗೋಪಾಲಕೃಷ್ಣ ಕಳವಳ ವ್ಯಕ್ತಪಡಿಸಿದರು.

‘ಕೃಷಿ ಬಿಕ್ಕಟ್ಟಿನ ಕಾರಣಕ್ಕೆ ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಿದೆ. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಲಾಭದಾಯಕ ಬೆಲೆ ಸಿಗದ ಕಾರಣ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ರೈತರು ಬೀದಿ ಪಾಲಾಗಿ ಕಾರ್ಪೊರೇಟ್‌ ಕಂಪನಿಗಳ ಬಾಗಿಲು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಆಹಾರ ಸ್ವಾವಲಂಬನೆ ನಾಶವಾಗಿ ಹಸಿವು ತಾಂಡವವಾಡುತ್ತಿದೆ’ ಎಂದು ವಿಷಾದಿಸಿದರು.

ರೈತರ ಶೋಷಣೆ: ‘ಸರ್ಕಾರಿ ಕಚೇರಿಗಳಲ್ಲಿ ರೈತರ ಮೇಲೆ ಶೋಷಣೆಯಾಗುತ್ತಿದೆ. ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ, ರಸಗೊಬ್ಬರ ಸಿಗುತ್ತಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ದೇಶದ ಜನ ಅನ್ನಕ್ಕಾಗಿ ಹೊರ ದೇಶಗಳತ್ತ ಕೈ ಚಾಚುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಸಮಾಜದ ಬೇರೆ ಕ್ಷೇತ್ರಗಳ ಉತ್ಪಾದಕರು ತಾವು ಉತ್ಪಾದಿಸಿದ ಉತ್ಪನ್ನಗಳಿಗೆ ತಾವೇ ದರ ನಿಗದಿಪಡಿಸುತ್ತಾರೆ. ಆದರೆ, ರೈತ ಕುಲಕ್ಕೆ ಈ ಅವಕಾಶವಿಲ್ಲ’ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರಗಳು ಕಾರ್ಪೊರೇಟ್‌ ಕಂಪನಿಗಳು ಹಾಗೂ ಬಂಡವಾಳಶಾಹಿಗಳ ಹಿತ ಕಾಯುವುದನ್ನು ಬಿಟ್ಟು ರೈತರ ಪರವಾಗಿ ವರ್ತಿಸಬೇಕು. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಕಾನೂನು ಜಾರಿ ಮಾಡಬೇಕು. ಸ್ವಾಮಿನಾಥನ್‌ ಆಯೋಗದ ವರದಿ ಜಾರಿಗೊಳಿಸಬೇಕು. ರೈತ ಕುಲಕ್ಕೆ ಮಾರಕವಾಗಿರುವ ಈ ಕಾಯ್ದೆಗಳನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಸಂಘದ ಕಾರ್ಯದರ್ಶಿ ಯೋಗೇಶ್, ಸದಸ್ಯರಾದ ಪ್ರವೀಣ್‌ಕುಮಾರ್, ದೇವರಾಜ್, ವೆಂಕಟರೆಡ್ಡಿ, ರಮೇಶ್‌ಬಾಬು, ಟಿ.ಮಂಜುನಾಥ್, ಮುನಿರಾಜು, ದರ್ಶನ್, ಮುನಿರೆಡ್ಡಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT