ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಿಂದ: ಬಿಜೆಪಿಗೆ ಹಿನ್ನಡೆ ಆಗಲ್ಲ

Last Updated 13 ಫೆಬ್ರುವರಿ 2021, 12:16 IST
ಅಕ್ಷರ ಗಾತ್ರ

ಕೋಲಾರ: ‘ಸಿದ್ದರಾಮಯ್ಯ ಅವರು ಅಹಿಂದ ಮಾಡಲಿ ಅಥವಾ ಬೇರೆ ಏನಾದರೂ ಮಾಡಿಕೊಳ್ಳಲಿ. ಅವರಿಗೂ ನಮಗೂ ಸಂಬಂಧವಿಲ್ಲ. ಅಹಿಂದ ಹೋರಾಟದಿಂದ ಬಿಜೆಪಿಗೆ ರಾಜಕೀಯವಾಗಿ ಹಿನ್ನಡೆ ಆಗುವುದಿಲ್ಲ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಹೇಳಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಮ್ಮ ಪಕ್ಷವೇ ಬೇರೆ, ಸಿದ್ದರಾಮಯ್ಯ ಅವರ ಪಕ್ಷವೇ ಬೇರೆ. ಅಹಿಂದ ಹೋರಾಟ ಅವರ ಪಕ್ಷಕ್ಕೆ ಸೀಮಿತವಾದ ವಿಚಾರ. ನಮ್ಮ ಪಕ್ಷದಡಿ ರೂಪಿಸಬೇಕಾದ ಕಾರ್ಯಕ್ರಮಗಳು ಮತ್ತು ಜನರಿಗೆ ಏನು ಮುಟ್ಟಿಸಬೇಕೋ, ತಿಳಿ ಹೇಳಬೇಕೋ ಅದನ್ನು ಮಾಡುತ್ತೇವೆ’ ಎಂದರು.

‘ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಆಗಲು ನಾಯಕರ ನಡುವೆ ಕಿತ್ತಾಟ ನಡೆಯುತ್ತಿದೆ. ರಾಜ್ಯದ ಜನ ಬಿಜೆಪಿ ಪರವಾಗಿದ್ದಾರೆ. ಬಿಜೆಪಿಗೆ ಅಧಿಕಾರ ನೀಡಬೇಕೆಂದು ಜನ ತೀರ್ಮಾನಿಸಿದ್ದಾರೆ. ಜನರ ವಿಶ್ವಾಸ ಗಳಿಸುವ ಕೆಲಸ ಮಾಡುತ್ತೇವೆ’ ಎಂದು ನುಡಿದರು.

‘ಆಯಾ ಜಾತಿಗಳ ಸೌಲಭ್ಯಕ್ಕೆ ಸಮುದಾಯದವರು ಹೋರಾಟ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್‌ಗೂ ಕುರುಬ ಸಮಾಜಕ್ಕೂ ಯಾವುದೇ ಸಂಬಂಧವಿಲ್ಲ. ಸಿದ್ದರಾಮಯ್ಯ ಅವರು ಯಾವ ಲೆಕ್ಕಾಚಾರದಲ್ಲಿ ಕುರುಬ ಸಮಾಜ ಮತ್ತು ಆರ್‌ಎಸ್‌ಎಸ್‌ ನಡುವೆ ಸಂಬಂಧ ಕಲ್ಪಿಸುತ್ತಿದ್ದಾರೋ ಗೊತ್ತಿಲ್ಲ. ಅವರಿಗೆ ಮಾತನಾಡಲು ಏನೋ ಒಂದು ವಿಚಾರ ಬೇಕಷ್ಟೇ. ಆದರೆ, ಅವರ ಮಾತಿನಲ್ಲಿ ವಾಸ್ತಾವಂಶ ಇರುವುದಿಲ್ಲ’ ಎಂದು ಟೀಕಿಸಿದರು.

ತೀರ್ಮಾನಕ್ಕೆ ಬದ್ಧ: ‘ಪಕ್ಷದಲ್ಲಿ ಕೆಲವರಿಗೆ ಮಾತನಾಡುವ ಚಟ ಇರುವುದರಿಂದ ಮಾತನಾಡುತ್ತಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ನೋಟಿಸ್‌ ನೀಡಿರುವುದು ಪಕ್ಷದ ಶಿಸ್ತು ಸಮಿತಿಗೆ ಸಂಬಂಧಪಟ್ಟ ವಿಷಯ. ಶಿಸ್ತು ಸಮಿತಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ’ ಎಂದು ತಿಳಿಸಿದರು.

‘ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಶ್ರಮಿಸುತ್ತಿದ್ದಾರೆ. ಮುಂದೆಯೂ ತಮ್ಮದೇ ಸರ್ಕಾರ ಬರಬೇಕೆಂದು ಜನಪರ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ನಾವು ಅಭಿವೃದ್ಧಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆಯೇ ಹೊರತು ಯಾರೋ ಸಣ್ಣದಾಗಿ ಮಾತನಾಡುತ್ತಾರೆಂದು ಆ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT