10 ಸಾವಿರ ಬೀದಿ ವ್ಯಾಪಾರಿಗಳಿಗೆ ಸಾಲ ನೀಡುವ ಗುರಿ

7
ಶಾಸಕ ಕೆ.ಶ್ರೀನಿವಾಸಗೌಡ ಭರವಸೆ

10 ಸಾವಿರ ಬೀದಿ ವ್ಯಾಪಾರಿಗಳಿಗೆ ಸಾಲ ನೀಡುವ ಗುರಿ

Published:
Updated:
Prajavani

ಕೋಲಾರ: ‘ರಾಜ್ಯ ಬಜೆಟ್‌ನಂತರ ಬೀದಿ ಬದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ಧರದಲ್ಲಿ ಸಾಲ ಸೌಕರ್ಯ ಕಲ್ಪಿಸುವ ಮೂಲಕ ಮೀಟರ್ ಬಡ್ಡಿ ಸುಳಿಯಿಂದ ತಪ್ಪಿಸಲಾಗುವುದು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

ದೇವರಾಜ ಅರಸ್ ಅಭಿವೃದ್ಧಿ ನಿಗಮದ ನೇರ ಸಾಲ ಯೋಜನೆಯ ಚೆಕ್‌ಗಳನ್ನು ಇಲ್ಲಿ ಸೋಮವಾರ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿ, ‘ಡಿಸಿಸಿ ಬ್ಯಾಂಕ್ ಮೂಲಕ ಬೀದಿ ವ್ಯಾಪಾರಸ್ಥರಿಗೆ ಸಾಲ ನೀಡಲು ಕ್ರಮ ಕೈಗೊಂಡಿದ್ದು ಬಜೆಟ್‌ನಲ್ಲಿ ಅನುದಾನ ಮಂಜೂರಾಗುತ್ತದೆ’ ಎಂದರು.

‘ನಗರದಲ್ಲಿ 10 ಸಾವಿರ ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ ಸಾಲಕ್ಕೆ ಅರ್ಹರಾದವರನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ. ಫಲಾನುಭವಿಗಳು ಸಾಲದ ಹಣವನ್ನು ಆದಾಯೋತ್ಪನ್ನ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸ್ವಯಂ ಉದ್ಯೋಗ ರೂಪಿಸಿಕೊಳ್ಳುವ ಅವಕಾಶಕ್ಕಾಗಿ ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ನೇರ ಸಾಲ ವಿತರಣೆ ಯೋಜನೆಯನ್ನು ರೂಪಿಸಲಾಗಿದ್ದು ಫಲಾನುಭವಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.

‘ರಸ್ತೆ ಬದಿ ವ್ಯಾಪಾರಿಗಳಿಗೆ ಆಂದೋಲನದ ಮಾದರಿಯಲ್ಲಿ ಸಾಲ ವಿತರಣೆ ಮಾಡುವ ಮೂಲಕ ಜಿಲ್ಲೆಯಲ್ಲಿ ಬಡ್ಡಿ ಮಾಫಿಯಾಗೆ ತೆರೆ ಎಳೆಯಲಾಗುವುದು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ತಿಳಿಸಿದರು.

‘₨ 1 ಸಾವಿರಕ್ಕೆ ದಿನಕ್ಕೆ ₨ 100 ತೆರಬೇಕಾದರೆ ಬಡವರ ಬವಣೆ ಹೇಳ ತೀರದಾಗುತ್ತದೆ. ಹೀಗಾಗಿ ಶೀಘ್ರದಲ್ಲೇ ಬ್ಯಾಂಕಿನಿಂದ ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ಸಾಲ ಎಂದಿಗೂ ಆಸ್ತಿ ಆಗುವುದಿಲ್ಲ. ಬದಲಿಗೆ ಶೂಲವಾಗಿ ಮಾರ್ಪಾಡಾಗುವುದರಿಂದಾಗಿ ಫಲಾನುಭವಿಗಳು ಸಾಲ ಸಕಾಲಕ್ಕೆ ಮರುಪಾವತಿಸಿ, ಸ್ವಾಭಿಮಾನದ ಬದುಕು ಕಂಡುಕೊಳ್ಳಬೇಕು’ ಎಂದು ಹೇಳಿದರು.

ದೇವರಾಜ ಅರಸ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಗಣೇಶ್ ಮಾತನಾಡಿ, ‘ನಿಗಮದಿಂದ 131 ಫಲಾನುಭವಿಗಳಿಗೆ ₨ 70 ಲಕ್ಷ ಸಾಲ ವಿತರಣೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಸಹಾಯಧನದಲ್ಲಿ ಹೈನುಗಾರಿಕೆ, ಬ್ಯೂಟಿಪಾರ್ಲರ್, ಹೂ ವ್ಯಾಪಾರ, ಸೆಲೂನ್, ಡ್ರೈ ಕ್ಲೀನಿಕ್, ಟೈಲರಿಂಗ್ ವೃತ್ತಿಗಳಿಗೆ ಸಾಲ ನೀಡಲಾಗುತ್ತಿದೆ. ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗಿದೆ’ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ, ನರಸಾಪುರ ಸ್ವಸಹಾಯ ಸಂಘದ ಅಧ್ಯಕ್ಷ ಮುನಿರಾಜು, ಮುಖಂಡರಾದ ಚಂದ್ರೇಗೌಡ, ಸೀನಪ್ಪ, ದೇವರಾಜ ಅರಸು ಅಭಿವೃದ್ಧಿ ನಿಗಮದ ಸಹಾಯಕ ಅಭಿವೃದ್ಧಿ ಅಧಿಕಾರಿ ಲಕ್ಷ್ಮಯ್ಯ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !