ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 22 ಲಕ್ಷ ಸಸಿ ನೆಡುವ ಗುರಿ

ಇಲಾಖೆ ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್ ಹೇಳಿಕೆ
Last Updated 4 ಮೇ 2019, 1:51 IST
ಅಕ್ಷರ ಗಾತ್ರ

ಕೋಲಾರ: ‘ಕೋಟಿ ನಾಟಿ ಆಂದೋಲನದ ಭಾಗವಾಗಿ ಈ ವರ್ಷ ಜಿಲ್ಲೆಯಲ್ಲಿ 22 ಲಕ್ಷ ಸಸಿ ನೆಡುವ ಗುರಿಯಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ದೇವರಾಜ್ ತಿಳಿಸಿದರು.

ಕೋಟಿ ನಾಟಿ ಆಂದೋಲನ ಸಂಬಂಧ ಇಲ್ಲಿ ಶುಕ್ರವಾರ ಅರಣ್ಯ ಇಲಾಖೆ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ‘5 ವರ್ಷದಲ್ಲಿ 1 ಕೋಟಿ ಸಸಿ ನಾಟಿ ಮಾಡುವ ಉದ್ದೇಶದಿಂದ ಈ ಆಂದೋಲನ ರೂಪಿಸಲಾಗಿದೆ. ಸಸಿ ನಾಟಿಗೆ ತ್ವರಿತವಾಗಿ ಸಿದ್ಧವಾಗಬೇಕು. ಇದಕ್ಕೆ ಇಲಾಖೆಯ ಪ್ರತಿಯೊಬ್ಬರು ಸಹಕಾರ ಬೇಕು’ ಎಂದರು.

‘ಆಂದೋಲನವನ್ನು ಸಾಂಪ್ರದಾಯಿಕವಾಗಿ ನಡೆಸದೆ ವೈಜ್ಞಾನಿಕವಾಗಿ ಹಾಗೂ ತಾಂತ್ರಿಕತೆ ಆಧಾರದಲ್ಲಿ ಮಾಡಬೇಕು. ಸಸಿ ನೆಡುವುದರ ಜತೆಗೆ ಅವುಗಳ ಸಂರಕ್ಷಣೆ ಹಾಗೂ ನಿರ್ವಹಣೆಗೆ ಮುತುವರ್ಜಿ ವಹಿಸಬೇಕು’ ಎಂದು ಸಲಹೆ ನೀಡಿದರು.

‘ಸಿಬ್ಬಂದಿಯು ರಸ್ತೆ, ಸ್ಮಶಾನ, ಕಚೇರಿ ಆವರಣ ಸೇರಿದಂತೆ ಸರ್ಕಾರಿ ಜಾಗದ ಬಗ್ಗೆ ವೈಯಕ್ತಿಕ ನಿಗಾ ವಹಿಸುವ ಮೂಲಕ ಬದ್ಧತೆಯಿಂದ ಕೆಲಸ ಮಾಡಿ ಈ ಯೋಜನೆ ಸಾರ್ಥಕಗೊಳಿಸಬೇಕು. ಈ ಆಂದೋಲನದಡಿ ಸಿಬ್ಬಂದಿಯು ತಮಗೆ ಇಷ್ಟವಾದ ಜಾಗವನ್ನು ದತ್ತು ತೆಗೆದುಕೊಂಡು ಶ್ರದ್ಧೆಯಿಂದ ಸಸಿ ಬೆಳೆಸಬೇಕು’ ಎಂದು ಸೂಚಿಸಿದರು.

ಅನುಮೋದನೆ ಕಡ್ಡಾಯ: ‘ದತ್ತು ಪ್ರದೇಶದಲ್ಲಿ ಯಾವುದೇ ಸಸಿ ನಾಶವಾದರೆ ತಕ್ಷಣ ಬೇರೆ ಸಸಿ ನೆಡುವ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳಬೇಕು. ಸಸಿ ನೆಡುವ ಮುನ್ನ ಕಡ್ಡಾಯವಾಗಿ ಗ್ರಾಮ ಪಂಚಾಯಿತಿಯಿಂದ ಅನುಮೋದನೆ ಪಡೆಯಬೇಕು. ಊರಿಗೊಂದು ನೆಡು ತೋಪು ಮಾಡಿ ಸುತ್ತಲೂ ತಂತಿ ಬೇಲಿ ಹಾಕಬೇಕು’ ಎಂದು ಹೇಳಿದರು.

‘ರೈತರು ಮತ್ತು ಗ್ರಾ.ಪಂ ಸಿಬ್ಬಂದಿಯಿಂದ ಸಸಿ ಬೇಡಿಕೆ ಪಡೆದುಕೊಂಡು ಹೆಬ್ಬೇವು, ಶ್ರಿಗಂಧ, ರಕ್ತಚಂದನ, ತೇಗ, ಸಿಲ್ವರ್ ಓಕ್, ನೇರಳೆ, ಮಹಾಗನಿ, ಹೊನ್ನೆ, ಹಲಸು, ಕರಿಬೇವು, ನುಗ್ಗೆ ಸಸಿಗಳನ್ನು ವಿತರಿಸಬೇಕು. ಸಸಿ ಹಂಚಿಕೆಯಲ್ಲಿ ಯಾವುದೇ ಲೋಪ ಆಗಬಾರದು’ ಎಂದರು.

ಚಿಪ್‌ ಅಳವಡಿಕೆ: ‘ಅರಣ್ಯ ಇಲಾಖೆಯ ಕಠಿಣ ಕಾಯ್ದೆ ಮತ್ತು ಜಾಗೃತಿಯಿಂದಾಗಿ ಶ್ರೀಗಂಧ ಮರಗಳ ಕಳ್ಳ ಸಾಗಾಣಿಕೆಗೆ ಕಡಿವಾಣ ಬಿದ್ದಿದೆ. ಮರ ವಿಜ್ಞಾನ ಸಂಸ್ಥೆಯವರು ಸಂಶೋಧಿಸಿರುವ ಚಿಪ್‌ ಅನ್ನು ಶ್ರೀಗಂಧದ ಮರಗಳಿಗೆ ಅಳವಡಿಸಲಾಗುತ್ತಿದ್ದು, ಕಳ್ಳರು ಮರ ಕಳ್ಳತನ ಮಾಡಿಕೊಂಡು ಹೋದರೂ ಕ್ಷಣದಲ್ಲೇ ಮಾಲು ಎಲ್ಲಿದೆ ಎಂಬುದನ್ನು ಚಿಪ್‌ನ ಸಹಾಯದಿಂದ ಪತ್ತೆ ಹಚ್ಚಬಹುದು’ ಎಂದು ವಿವರಿಸಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಬಿ.ಮೋಹನ್‌ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT