ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ್‌ ಅಕ್ರಮ: ಲೋಕಾಯುಕ್ತ ಪರಿಶೀಲನೆ

ಕಳಪೆ ಕಾಮಗಾರಿ ಆರೋಪ: ನಗರಸಭೆಯಲ್ಲಿ ದಾಖಲೆಪತ್ರ ತಪಾಸಣೆ
Last Updated 10 ಮಾರ್ಚ್ 2022, 14:41 IST
ಅಕ್ಷರ ಗಾತ್ರ

ಕೋಲಾರ: ಅಮೃತ್‌ ಯೋಜನೆಯಡಿ ಜಿಲ್ಲಾ ಕೇಂದ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿರುವುದು ಹಾಗೂ ಅಕ್ರಮ ನಡೆದಿರುವ ಸಂಬಂಧ ದೂರು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡವು ಇಲ್ಲಿನ ನಗರಸಭೆಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಲೋಕಾಯುಕ್ತ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಎಂ.ನಾಗರತ್ನ ಅವರ ನೇತೃತ್ವದ ತಂಡವು ನಗರಸಭೆಯ ಎಂಜಿನಿಯರಿಂಗ್ ವಿಭಾಗದಲ್ಲಿ ಅಮೃತ್‌ ಯೋಜನೆ ಕಾಮಗಾರಿಗಳಿಗೆ ಸಂಬಂಧಪಟ್ಟ ದಾಖಲೆಪತ್ರಗಳನ್ನು ಒಂದು ತಾಸಿಗೂ ಹೆಚ್ಚು ಕಾಲ ಪರಿಶೀಲಿಸಿತು. ಅಲ್ಲದೇ, ಕಾಮಗಾರಿಗಳು ನಡೆದಿರುವ ವಿವಿಧ ವಾರ್ಡ್‍ಗಳಿಗೆ ಭೇಟಿ ಕೊಟ್ಟು ಕಾಮಗಾರಿ ಗುಣಮಟ್ಟ ಪರಿಶೀಲಿಸಿತು.

ಈ ಹಿಂದೆ ನಗರಸಭೆಯಲ್ಲಿ ಪೂಜಾರಪ್ಪ ಅವರು ಎಂಜಿನಿಯರ್ ಆಗಿದ್ದ ಅವಧಿಯಲ್ಲಿ ಅಮೃತ್ ಯೋಜನೆಯಡಿ ಪ್ಯಾಕೇಜ್ ಸಂಖ್ಯೆ 1ರಿಂದ 5, 7,8 ಮತ್ತು ಪ್ಯಾಕೇಜ್‌ 10ರಿಂದ 13ರವರೆಗಿನ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಂಡಿಲ್ಲ. ಜತೆಗೆ ಕಾಮಗಾರಿ ಸಂಬಂಧ ಅಕ್ರಮ ಬಿಲ್‌ ಸೃಷ್ಟಿಸಿ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ನಗರಸಭಾ ಸದಸ್ಯ ಎಸ್‌.ಆರ್‌.ಮುರಳಿಗೌಡ ಅವರು 2019ರಲ್ಲಿ ಬೆಂಗಳೂರಿನ ಲೋಕಾಯುಕ್ತ ಪೊಲೀಸರಿಗೆ ದೂರು ಕೊಟ್ಟಿದ್ದರು.

ಅಮೃತ್ ಯೋಜನೆಯಡಿ ₹ 40 ಕೋಟಿ ವೆಚ್ಚದ ಕಾಮಗಾರಿಗಳಿಗೆ ಟೆಂಡರ್ ನಡೆಸಲಾಗಿತ್ತು. ಸಮಗ್ರ ಯೋಜನಾ ವರದಿ (ಡಿಪಿಆರ್‌) ಮತ್ತು ಮೂಲ ಅಂದಾಜು ಪಟ್ಟಿಯಲ್ಲಿ ಇರುವಂತೆ ಕಾಮಗಾರಿ ನಿರ್ವಹಿಸಿಲ್ಲ. ಮುಖ್ಯವಾಗಿ ರಾಜಕಾಲುವೆಗಳ ನಿರ್ಮಾಣದಲ್ಲಿ ನಿಗದಿತ ಪ್ರಮಾಣದಲ್ಲಿ ಸ್ಟೀಲ್‌, ಸಿಮೆಂಟ್‌ ಕಾಂಕ್ರೀಟ್‌ ಬಳಕೆ ಮಾಡಿಲ್ಲ. ರಾಜಕಾಲುವೆ ಅಳತೆಯಲ್ಲೂ ಸಾಕಷ್ಟು ವ್ಯತ್ಯಾಸ ಮಾಡಿ ಅಕ್ರಮ ಎಸಗಲಾಗಿದೆ ಎಂದು ಮುರಳಿಗೌಡ ದೂರಿನಲ್ಲಿ ಆರೋಪಿಸಿದ್ದರು.

ಲೋಕಾಯುಕ್ತ ಅಧಿಕಾರಿಗಳು ಈ ದೂರು ಆಧರಿಸಿ ಆರ್‌ಟಿಒ ಬಡಾವಣೆ, ಕೀಲುಕೋಟೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿನ ರಾಜಕಾಲುವೆ ಹಾಗೂ ಉಪ ಕಾಲುವೆಗಳ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿದರು.

₹ 15 ಕೋಟಿ ಅಕ್ರಮ: ಅಧಿಕಾರಿಗಳ ಪರಿಶೀಲನೆ ವೇಳೆ ಸ್ಥಳದಲ್ಲಿದ್ದ ದೂರುದಾರ ಮುರಳಿಗೌಡ ಅವರು, ‘ಅಮೃತ್‌ ಯೋಜನೆ ಕಾಮಗಾರಿಗಳಲ್ಲಿ ಸುಮಾರು ₹ 15 ಕೋಟಿ ಅಕ್ರಮ ನಡೆದಿದೆ. ಹೆಚ್ಚುವರಿ ಅಳತೆ ನೀಡಿ ಅಕ್ರಮವಾಗಿ ಬಿಲ್ ಸೃಷ್ಟಿಸಲಾಗಿದೆ. ಈ ಅಕ್ರಮದಲ್ಲಿ ಪೂಜಾರಪ್ಪ ಅವರ ಪಾತ್ರವಿದೆ. ಅಕ್ರಮದಲ್ಲಿ ಭಾಗಿಯಾಗಿರುವ ತಪ್ಪಿತಸ್ಥ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಮನವಿ ಮಾಡಿದರು.

ಅಮೃತ್‌ ಕಾಮಗಾರಿಗಳಿಗೆ ಸಂಬಂಧಿಸಿದ ಕತಡಗಳನ್ನು ಹಾಜರುಪಡಿಸುವಂತೆ ಲೋಕಾಯುಕ್ತ ಅಧಿಕಾರಿಗಳು ನಗರಸಭೆ ಕಿರಿಯ ಎಂಜಿನಿಯರ್‌ ಪೂರ್ಣಿಮಾ ಅವರಿಗೆ ಸೂಚಿಸಿದರು. ಆದರೆ, ಪೂರ್ಣಿಮಾ ಅವರು ಕಡತಗಳನ್ನು ಕೊಡಲು ಹಿಂದೇಟು ಹಾಕಿದರು. ಇದರಿಂದ ಕೆಂಡಾಮಂಡಲರಾದ ಅಧಿಕಾರಿಗಳು ಪೂರ್ಣಿಮಾ ಅವರನ್ನು ತರಾಟೆಗೆ ತೆಗೆದುಕೊಂಡರು.

ಲೋಖಾಯುಕ್ತ ಅಧಿಕಾರಿ ಸುಬ್ರಮಣಿ, ಎಂಜಿನಿಯರ್‌ ಪದ್ಮನಾಭರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT