ಕೋಲಾರ: ‘ಕಾಳ್ಗಿಚ್ಚು ನಿಯಂತ್ರಣಕ್ಕೆ ವಿಶೇಷ ತಂಡ ರಚಿಸಿ ಕರಪತ್ರದ ಮೂಲಕ ಜನ ಜಾಗೃತಿ ಮೂಡಿಸಬೇಕು. ಕಾಳ್ಗಿಚ್ಚಿಗೆ ಕಾರಣವಾಗುವ ಕಿಡಿಗೇಡಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿ ರೈತ ಸಂಘದ ಪ್ರತಿನಿಧಿಗಳು ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕೊಂಡಲು ಅವರಿಗೆ ಮನವಿ ನೀಡಿದರು.
‘ಪ್ರತಿ ಬೇಸಿಗೆಯಲ್ಲಿ ಅರಣ್ಯಕ್ಕೆ ಬೆಂಕಿ ಬೀಳುವ ಅಪಾಯವಿರುತ್ತದೆ ಎಂಬುದು ಗೊತ್ತಿದ್ದರೂ ಅರಣ್ಯ ಇಲಾಖೆ ಮುಂಜಾಗ್ರತೆ ಕ್ರಮ ಕೈಗೊಳ್ಳುತ್ತಿಲ್ಲ. ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಜೊತೆಗೆ ಗುಣಮಟ್ಟದ ಉಪಕರಣಗಳಿಲ್ಲ’ ಎಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಆರೋಪಿಸಿದರು.
‘ಅರಣ್ಯ ಅತಿಕ್ರಮಣ, ಅಕ್ರಮ ಕೃಷಿ, ಬೇಟೆಗಾರರ ಹಾವಳಿ, ಕೃಷಿ ತ್ಯಾಜ್ಯಗಳ ನಿರ್ಲಕ್ಷದ ವಿಲೇವಾರಿ ಹಾಗೂ ಮೋಜಿಗೆಂದೆ ಕಡ್ಡಿ ಗೀರುವವರ ಕೃತ್ಯದಿಂದಾಗಿ ಬೆಂಕಿ ಹಬ್ಬುತ್ತದೆ. ಇದರಿಂದ ವನ್ಯಪ್ರಾಣಿಗಳು, ಜೀವಜಂತುಗಳಿಗೆ ಹಾನಿ ಉಂಟಾಗುತ್ತದೆ’ ಎಂದರು.
ಜಿಲ್ಲಾ ಕಾರ್ಯದ್ಯಕ್ಷ ವಕ್ಕಲೇರಿ ಹನುಮಯ್ಯ, ‘ಕಾಳ್ಗಿಚ್ಚು ಬಗ್ಗೆ ಅರಣ್ಯ ಇಲಾಖೆ ಕರಪತ್ರದ ಮೂಲಕ ಜಾಗೃತಿ ಮೂಡಿಸಬೇಕು. ಅರಣ್ಯ ಪಕ್ಕದಲ್ಲಿರುವ ಹಳ್ಳಿಗಳ ಜನರಲ್ಲಿ ಜಾಗೃತಿ ಮೂಡಿಸಬೇಕು. ಜಿಲ್ಲೆಯಾದ್ಯಂತ ಅರಣ್ಯ ಗಸ್ತು ಸಮಿತಿ ರಚಿಸಬೇಕು’ ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಡಿಸಿಎಫ್ ಏಡುಕೊಂಡಲು, ‘ಬೆಂಕಿ ನಿಯಂತ್ರಣಕ್ಕೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಕರಪತ್ರದ ಮೂಲಕವೂ ಜಾಗೃತಿ ಮೂಡಿಸಲಾಗುವುದು’ ಎಂದರು.
ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮುಖಂಡರಾದ ಯಲುವಳ್ಳಿ ಪ್ರಭಾಕರ್, ಮಂಗಸಂದ್ರ ತಿಮ್ಮಣ್ಣ, ಮಾಸ್ತಿ ಹರೀಶ್, ಪೆಮ್ಮದೊಡ್ಡಿ ಯಲ್ಲಪ್ಪ, ಪಾರುಕ್‍ಪಾಷ, ಬಂಗಾರಿ ಮಂಜು, ವಿಜಯಪಾಲ್, ವೆಂಕಟೇಶ್, ಸಂದೀಪ್‍ರೆಡ್ಡಿ, ರಾಮಸಾಗರ ವೇಣು, ವೆಂಕಟೇಶಪ್ಪ,ಭಾಸ್ಕರ್, ಚಲ, ಸುನಿಲ್‍ಕುಮಾರ್, ಶೈಲ, ನಾಗರತ್ನ, ಚೌಡಮ್ಮ, ಗೀರಿಶ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.