ಸೋಮವಾರ, ಆಗಸ್ಟ್ 2, 2021
27 °C

ಕೋಲಾರ: ನಗರಸಭೆ ಆಯುಕ್ತರ ಬಿಡುಗಡೆಗೆ ಮೀನಮೇಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಗೌರಿಬಿದನೂರು ನಗರಸಭೆಗೆ ಸಮುದಾಯ ಸಂಘಟನಾಧಿಕಾರಿಯಾಗಿ ವರ್ಗಾವಣೆ ಆಗಿರುವ ಕೋಲಾರ ನಗರಸಭೆ ಆಯುಕ್ತ ಶ್ರೀಕಾಂತ್‌ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಲು ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ ಎಂದು ನಗರಸಭೆ ಮಾಜಿ ಉಪಾಧ್ಯಕ್ಷ ವಿ.ಕೆ.ರಾಜೇಶ್ ದೂರಿದ್ದಾರೆ.

ಸಮುದಾಯ ಸಂಘಟನಾ ಅಧಿಕಾರಿಗಳನ್ನು ಸ್ಥಳೀಯ ಸಂಸ್ಥೆಗಳಿಂದ ಬಿಡುಗಡೆಗೊಳಿಸಿ ಅವರ ಮೂಲ ಹುದ್ದೆಗೆ ನೇಮಿಸುವಂತೆ ಸರ್ಕಾರ ಜೂನ್‌ 29ರಂದು ಆದೇಶ ಹೊರಡಿಸಿ ಜಿಲ್ಲಾಧಿಕಾರಿಗೆ ರವಾನಿಸಿದೆ. ಈ ಆದೇಶದಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಸ್ಥಳೀಯ ಸಂಸ್ಥೆಗಳಲ್ಲಿನ ಸಮುದಾಯ ಸಂಘಟನಾ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೌರಾಡಳಿತ ನಿರ್ದೇಶನಾಲಯ ಸಹ ಆದಷ್ಟು ಬೇಗನೆ ಎಲ್ಲಾ ಆಯುಕ್ತರನ್ನು ನಗರಸಭೆ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಆದೇಶಿಸಿದೆ. ಆದರೆ, ಕೋಲಾರ ನಗರಸಭೆಯ ಆಯುಕ್ತ ಶ್ರೀಕಾಂತ್ ಅವರು ಈವರೆಗೂ ಗೌರಿಬಿದನೂರು ನಗರಸಭೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿಲ್ಲ. ಅವರು ಕೋಲಾರ ನಗರಸಭೆಯಲ್ಲೇ ಮುಂದುವರಿಯಲು ಜನಪ್ರತಿನಿಧಿಗಳ ಮೂಲಕ ಲಾಬಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಕರ್ನಾಟಕ ಪೌರಾಡಳಿತ ಸೇವೆ (ಕೆಎಂಎಸ್) ಅಧಿಕಾರಿಗಳು ಹುದ್ದೆಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲಾ ಕೇಂದ್ರದ ನಗರಸಭೆಯಲ್ಲಿ ಕೆಎಂಎಸ್ ಮಟ್ಟದ ಅಧಿಕಾರಿಗಳು ಮಾತ್ರ ಕರ್ತವ್ಯ ನಿರ್ವಹಿಸಲು ಅವಕಾಶವಿದ್ದು, ಅಂತಹ ಸಮರ್ಥ ಅಧಿಕಾರಿಗಳನ್ನು ಕೋಲಾರ ನಗರಸಭೆಗೆ ನೇಮಿಸಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು