ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆಗೆ ಖಂಡನೆ

Last Updated 7 ಜನವರಿ 2020, 9:49 IST
ಅಕ್ಷರ ಗಾತ್ರ

ಕೋಲಾರ: ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಮೇಲೆ ನಡೆದ ಹಲ್ಲೆ ಖಂಡಿಸಿ ಭಾರತ ವಿದ್ಯಾರ್ಥಿ ಒಕ್ಕೂಟದ (ಎಸ್‌ಎಫ್‌ಐ) ಸದಸ್ಯರು ಇಲ್ಲಿ ಸೋಮವಾರ ಧರಣಿ ನಡೆಸಿದರು.

‘ಎಬಿವಿಪಿ ಕಾರ್ಯಕರ್ತರು ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದಲೇ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಕೇಂದ್ರದ ಜನವಿರೋಧಿ ನೀತಿ ಸಿಡಿದೆದ್ದ ವಿದ್ಯಾರ್ಥಿಗಳ ಹೋರಾಟ ಹತ್ತಿಕ್ಕಲು ಬಿಜೆಪಿ ಈ ದುಷ್ಕೃತ್ಯ ನಡೆಸಿದೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಜನರ ಮೇಲೆ ಬಲವಂತವಾಗಿ ತನ್ನ ನೀತಿಗಳನ್ನು ಹೇರುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದ ವಿದ್ಯಾರ್ಥಿಗಳ ಮೇಲೆ ಗೂಂಡಾಗಳ ಮೂಲಕ ದೌರ್ಜನ್ಯ ನಡೆಸಿದೆ. ವಿದ್ಯಾರ್ಥಿಗಳ ಮೇಲಿನ ಹಲ್ಲೆಯ ಪೂರ್ವಯೋಜತ ಕೃತ್ಯ’ ಎಂದು ಎಸ್‌ಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಅಂಬರೀಶ್‌ ದೂರಿದರು.

‘ಜೆಎನ್‌ಯುನಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗುತ್ತದೆ. ಇದನ್ನು ಸಹಿಸದ ಬಿಜೆಪಿಯು ಹೇಯ ಕೃತ್ಯ ನಡೆಸಿದೆ. ಗೂಂಡಾಗಳನ್ನು ವಿ.ವಿ ಆವರಣಕ್ಕೆ ನುಗ್ಗಿಸಿ ದಾಂದಲೆ ಮಾಡಿಸಿದೆ. ಹಾಸ್ಟೆಲ್‌ ಶುಲ್ಕ ಹೆಚ್ಚಳ, ಸಿಎಎ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರುದ್ಧ ಧ್ವನಿ ಎತ್ತಿದ ವಿದ್ಯಾರ್ಥಿ ಮುಖಂಡರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ’ ಎಂದು ಕಿಡಿಕಾರಿದರು.

ರಕ್ಷಣೆ ಇಲ್ಲ: ‘ದೇಶದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಜೆಎನ್‌ಯು ಆವರಣದಲ್ಲಿ ಪದೇಪದೇ ಇಂತಹ ಘಟನೆಗಳು ಮರುಕಳಿಸುತ್ತಿವೆ. ವಿದ್ಯಾರ್ಥಿಗಳಿಗೆ ರಕ್ಷಣೆಯೇ ಇಲ್ಲವಾಗಿದೆ. ವಿದ್ಯಾರ್ಥಿಗಳ ಜೀವ ಭಯದಲ್ಲಿ ಇರುವಂತಾಗಿದೆ. ಪಟ್ಟಭದ್ರ ಹಿತಾಸಕ್ತಿಗಳು ವಿ.ವಿಯ ವಿದ್ಯಾರ್ಥಿ ಸಂಘಟನೆಗಳನ್ನು ಬಗ್ಗು ಬಡಿದು ತಮ್ಮ ಅಧಿಪತ್ಯ ಸ್ಥಾಪಿಸಲು ಸಂಚು ರೂಪಿಸಿವೆ’ ಎಂದು ಧರಣಿನಿರತರು ಆರೋಪಿಸಿದರು.

‘ವಿದ್ಯಾರ್ಥಿಗಳ ಮೇಲಿನ ಹಲ್ಲೆ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ಪ್ರಕರಣ ಸಂಬಂಧ ಉನ್ನತ ತನಿಖೆ ನಡೆಸಬೇಕು. ಹಲ್ಲೆ ನಡೆಸಿದ ಎಬಿವಿಪಿ ಕಾರ್ಯಕರ್ತರನ್ನು ಶೀಘ್ರವೇ ಬಂಧಿಸಬೇಕು. ಜೆಎನ್‌ಯು ಸುತ್ತಮುತ್ತ ಪೊಲೀಸ್‌ ಭದ್ರತೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು,

ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ವಿ.ಗೀತಾ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಗಾಂಧಿನಗರ ನಾರಾಯಣಸ್ವಾಮಿ, ಎಸ್‌ಎಫ್‌ಐ ಪದಾಧಿಕಾರಿಗಳಾದ ಶ್ರೀಕಾಂತ್, ಮಣಿ, ರಾಮಚಂದ್ರ, ರೈತ ಸಂಘದ ಸದಸ್ಯ ವೆಂಕಟೇಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT