ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಅಭಿವೃದ್ಧಿಗೆ ನೆರವು

ಸ್ಯಾಮಸಂಗ್ ಇಂಡಿಯಾ ಕಂಪನಿ ಹಿರಿಯ ವ್ಯವಸ್ಥಾಪಕ ಸಂತೋಷ್ ಭರವಸೆ
Last Updated 15 ಮೇ 2019, 13:51 IST
ಅಕ್ಷರ ಗಾತ್ರ

ಕೋಲಾರ: ‘ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‍ಆರ್) ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಣಕಾಸು ನೆರವು ನೀಡುತ್ತೇವೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದು ಸ್ಯಾಮಸಂಗ್ ಇಂಡಿಯಾ ಕಂಪನಿ ಹಿರಿಯ ವ್ಯವಸ್ಥಾಪಕ ಸಂತೋಷ್ ಮನವಿ ಮಾಡಿದರು.

ಇಲ್ಲಿ ಬುಧವಾರ ಸ್ಯಾಮಸಂಗ್ ಇಂಡಿಯಾ ಕಂಪನಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ‘ಸರ್ಕಾರಿ ಶಾಲಾ ಮಕ್ಕಳಿಗೆ ಅಗತ್ಯ ನೆರವು ನೀಡಲು ಸಂಸ್ಥೆ ಸಿದ್ಧವಿದೆ. ಈ ನೆರವು ನೇರವಾಗಿ ಮಕ್ಕಳಿಗೆ ತಲುಪಬೇಕು’ ಎಂದರು.

‘ಕಂಪನಿಯು ಬರಪೀಡಿತ ಕೋಲಾರ ಜಿಲ್ಲೆಯ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಲು ಸಕಲ ಸೌಕರ್ಯ ನೀಡಲಿದೆ. ಶಾಲೆ ಹಾಗೂ ಮಕ್ಕಳಿಗೆ ಅಗತ್ಯವಿರುವ ಸೌಲಭ್ಯದ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರೆ ಕೈಲಾದಷ್ಟು ಸಹಾಯ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

‘ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ 3 ಹಂತದಲ್ಲಿ ಪಠ್ಯಪುಸ್ತಕ ವಿತರಣೆ ಮಾಡಲಾಗುವುದು. ಜೂನ್ 3ನೇ ವಾರದೊಳಗೆ ಪುಸ್ತಕಗಳು ಮಕ್ಕಳ ಕೈಸೇರಲಿವೆ. ಕ್ಯಾಸಂಬಳ್ಳಿಯಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಕ್ರಿಯಾಯೋಜನೆ, ಮಕ್ಕಳ ಹಾಜರಾತಿ, ಕ್ಲಸ್ಟರ್ ಹಂತದಲ್ಲಿ ಬಿಆರ್‌ಸಿಗಳ ಸಭೆ ನಡೆಸಿ ಮಕ್ಕಳ ಸಂಖ್ಯೆಯ ಮಾಹಿತಿ ಒದಗಿಸಬೇಕು’ ಎಂದು ಹೇಳಿದರು.

ಶ್ಲಾಘನೀಯ: ‘ಸ್ಯಾಮಸಂಗ್ ಇಂಡಿಯಾ ಕಂಪನಿಯು ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

‘ಕಂಪನಿಯು 1ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ನೀಡುವುದರ ಜತೆಗೆ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಿಸಿಕೊಡಲು ಮುಂದೆ ಬಂದಿದೆ. ಕಂಪನಿಯು ಈಗಾಗಲೇ ಕೋಲಾರ ತಾಲ್ಲೂಕಿನ ಕೆಂಬೋಡಿ ಗ್ರಾಮದಲ್ಲಿ ಈ ಕೆಲಸ ಮಾಡಿ ಮಾದರಿಯಾಗಿದೆ’ ಎಂದು ತಿಳಿಸಿದರು.

ಸರ್ಕಾರಿ ಶಾಲೆ ಉಳಿಸುತ್ತೇವೆ: ‘ಸರ್ಕಾರ ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ ನೀಡುತ್ತಿದೆ. ಉಳಿದ ನೆರವನ್ನು ಖಾಸಗಿ ಕಂಪನಿಗಳಿಂದ ಪಡೆದು ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುತ್ತೇವೆ. ಜತೆಗೆ ಮಕ್ಕಳ ದಾಖಲಾತಿ ಹೆಚ್ಚಿಸಿ ಸರ್ಕಾರಿ ಶಾಲೆಗಳನ್ನು ಉಳಿಸುತ್ತೇವೆ’ ಎಂದರು.

‘ಸರ್ಕಾರಿ ಶಾಲೆಗಳನ್ನು ಉಳಿಸುವುದು ಶಿಕ್ಷಕರ ಜವಾಬ್ದಾರಿ. ದಾಖಲಾತಿ ಆಂದೋಲನದ ಮೂಲಕ ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಬೇಕು. ಸರ್ಕಾರದ ಸೌಲಭ್ಯಗಳ ಜತೆಗೆ ಸಿಎಸ್‌ಆರ್‌ ಅಡಿ ಖಾಸಗಿ ಕಂಪನಿಗಳಿಂದ ಸಿಗುವ ನೆರವಿನ ಬಗ್ಗೆ ಪೋಷಕರಿಗೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್, ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ವೀರಣ್ಣಗೌಡ, ಶಿಕ್ಷಕ ಸಂಘದ ಪದಾಧಿಕಾರಿಗಳಾದ ಶಿವಮೂರ್ತಿ, ವೆಂಕಟಸ್ವಾಮಿ, ದೇವದತ್ತನಾಯಕ್, ಪಿ.ವಿ.ಶ್ರೀನಿವಾಸ್, ತಿಮ್ಮರಾಯಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT