ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳ ಬಾಗಿಲು ತೆರೆಯಲೆ ಇಲ್ಲ

ಕೊರೊನಾ ಮಹಾಮಾರಿಗೆ ನಿವಾರಣೆಗಾಗಿ ಪ್ರಧಾನಿ ಕರೆ ಓಗೊಟ್ಟ ಜನರು
Last Updated 24 ಮಾರ್ಚ್ 2020, 11:15 IST
ಅಕ್ಷರ ಗಾತ್ರ

ಬಂಗಾರಪೇಟೆ: ಪ್ರಧಾನ ಮಂತ್ರಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಪಟ್ಟಣ ಸೇರಿದಂತೆ ಇಡೀ ತಾಲ್ಲೂಕು ಸ್ಥಬ್ಧಗೊಂಡಿತ್ತು. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿವಿಧ ಪಕ್ಷ, ಸಂಘಟನೆ ಕರೆ ನೀಡುವ ಬಂದ್‌ಗಿಂತ ಭಾನುವಾರ ನಡೆದ ಸ್ವಯಂಘೋಷಿತ ಬಂದ್ ಗಂಭೀರ ಸ್ವರೂಪ ತಳೆದಿತ್ತು.

ಕರೆಗೆ ಓಗೊಟ್ಟು ಜನ ಮನೆಯಿಂದ ಹೊರಗೆ ಬರಲಿಲ್ಲವೋ ಅಥವಾ ಕೊರೊನಾ ಮಹಾಮಾರಿಗೆ ಭಯಪಟ್ಟು ಜನ ಹೊರಬರಲಿಲ್ಲವೂ ಎನ್ನವ ಸಂಶಯ ಮೂಡಿತು. 'ಕೊರೊನಾ ಸೋಂಕು ತಡೆಯಲು ಭಾನುವಾರ ಗಾಳಿಯಲ್ಲಿ ಏರೋಪ್ಲೇನ್ ಮೂಲಕ ಸೋಂಕು ನಿವಾರಕ ಸಿಂಪಡಿಸಲಾಗುತ್ತೆ. ಮನೆಯಿಂದ ಯಾರೂ ಹೊರಗೆ ಬರಬಾರದು' ಎನ್ನುವ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ಜನರಲ್ಲಿ ಮತ್ತಷ್ಟು ಭೀತಿ ಉಂಟುಮಾಡಿತು.

ನಿತ್ಯ ಜನರಿಂದ ಗಿಜಿಗುಡುತ್ತಿದ್ದ ಪಟ್ಟಣದ ಬಜಾರು ರಸ್ತೆ ಜನರು ಇಲ್ಲದೆ ಭಣಗುಟ್ಟಿತು. ಜನರು ರಸ್ತೆಗೆ ಬರುವುದು ಇರಲಿ, ಮನೆಯಿಂದ ಹೊರಗೆ ಬರಲಿಲ್ಲ. ಕೆಲ ಮನೆಗಳಲ್ಲಿ ಬೆಳಗ್ಗೆ 9 ಗಂಟೆಯಾದರೂ ರಾತ್ರಿ ಮುಚ್ಚಿದ ಬಾಗಿಲು ತೆರೆದಿರಲಿಲ್ಲ. ಬೆಳಗ್ಗೆ ಮನೆಮನೆಗೆ ಪೂರೈಕೆಯಾಗುತ್ತಿದ್ದ ಹಾಲು ಕೂಡ ವಿತರಣೆಯಾಗಿಲ್ಲ. ನಂದಿನಿ ಪಾರ್ಲರ್ ಸೇರಿದಂತೆ ಹಾಲು ಪೂರೈಕೆ ಮಾಡುತ್ತಿದ್ದ ಅಂಗಡಿಗಳು ಮುಚ್ಚಿದ್ದವು. ಹಾಲಿಗಾಗಿ ಕೆಲವರು ಪಟ್ಟಣದೆಲ್ಲಡೆ ಸುತ್ತಾಡಿ ಬರಿಗೈಯಲ್ಲಿ ಹಿಂತಿರುಗಿದರು.

ರೈಲುಗಳು ಸ್ಥಗಿತ: ಪಟ್ಟಣದ ಮೂಲಕ ಹಾದುಹೋಗುವ ಕಾಕಿನಾಡ ಟೌನ್-ಬೆಂಗಳೂರು ಸಿಟಿ ಶೇಷಾದ್ರಿ ಎಕ್ಸ್‌ಪ್ರೆಸ್‌ ರೈಲು ಬಿಟ್ಟರೆ ಉಳಿದ ರೈಲುಗಳ ಸಂಚಾರ ಸ್ಥಗಿತಗೊಂಡಿತ್ತು. ಭಾನುವಾರ ಆರಂಭವಾಗಬೇಕಿದ್ದ ಎಲ್ಲಾ ರೈಲುಗಳನ್ನು ಸ್ಥಗಿತಗೊಳಿಸಿದ್ದು, ಶೇಷಾದ್ರಿ ಎಕ್ಸ್‌ಪ್ರೆಸ್‌ ಶನಿವಾರ ಆರಂಭಗೊಂಡಿದ್ದು ಭಾನುವಾರ ಬೆಂಗಳೂರು ತಲುಪಿತು. ಭಾನುವಾರ ರೈಲು ನಿಲ್ದಾಣ ಖಾಲಿಯಿದ್ದ ಕಾರಣ ಸಿಬ್ಬಂದಿ ನಿಲ್ದಾಣದೆಲ್ಲೆಡೆ ಸೋಂಕು ನಿವಾರಕ ಸಿಂಪಡಿಸಿ ಶುಚಿಗೊಳಿಸಿದರು.

ಸಂಜೆ 5 ಗಂಟೆಯಾದಂತೆ ಪ್ರಧಾನಿ ಮೋದಿ ಅವರು ನೀಡಿದ್ದ ಕರೆಯಂತೆ ಚಪ್ಪಾಳೆ ತಟ್ಟಿದರು. ಕೆಲವರು ಮನೆಯಿಂದಲೇ ಚಪ್ಪಾಳೆ ತಟ್ಟಿದರೆ, ಇನ್ನೂ ಕೆಲ ಕುಟುಂಬದವರು ಮನೆಯಿಂದ ಹೊರಗೆ ಬಂದು ಚಪ್ಪಾಳೆ ತಟ್ಟುವ ಮೂಲಕ ತಮಗಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ ಗೌರವ ಸೂಚಿಸಿದರು. ಕೆಲವರು ಊಟ ಮಾಡುವ ತಟ್ಟೆಯನ್ನು ಚಮಚ, ಸೌಟಿಂದ ತಟ್ಟಿ ಸದ್ದು ಮಾಡಿ, ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT