ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ಮರೀಚಿಕೆ

ಸರ್ಕಾರದಿಂದ ಬೇಕಾಬಿಟ್ಟಿಯಾಗಿ ಕಾರ್ಮಿಕರ ನಿಧಿ ಬಳಕೆ: ವಿಧಾನ ಪರಿಷತ್‌ ಸದಸ್ಯ ಸಿ.ಆರ್. ಮನೋಹರ್‌ ಆರೋಪ
Last Updated 26 ಜುಲೈ 2021, 4:20 IST
ಅಕ್ಷರ ಗಾತ್ರ

ಕೋಲಾರ: ‘ಕಾರ್ಮಿಕರಿಗೆ ನೀಡುವ ಸೌಲಭ್ಯಗಳು ದುರುಪಯೋಗವಾಗುತ್ತಿದ್ದು, ನಿಜವಾದ ಫಲಾನುಭವಿಗಳಿಗೆ ಕೋವಿಡ್ ಸೌಲಭ್ಯ ಸಿಗುತ್ತಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಆರ್. ಮನೋಹರ್‌ ಆರೋಪಿಸಿದರು.

ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ದಿನಸಿ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಇರುವ ತೆರಿಗೆ ಹಣವನ್ನು ಸರ್ಕಾರ ಸ್ವಂತ ಆಸ್ತಿಯ ರೀತಿಯಲ್ಲಿ ಬೇಕಾಬಿಟ್ಟಿ ಖರ್ಚು ಮಾಡುತ್ತಿದೆ ಎಂದು ಟೀಕಿಸಿದರು.

ದಿನನಿತ್ಯ ಕಷ್ಟಪಡುವ ಕಾರ್ಮಿಕರು ಇಲ್ಲವಾದರೇ ಈ ಸಮಾಜವೇ ಇಲ್ಲ. ಇಂತಹ ಸಂದರ್ಭದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣದ ಮನೆ ಕೆಲಸದ ವಸ್ತುಗಳ ಮೇಲೆ ಸರ್ಕಾರ ವಿಧಿಸಿರುವ ತೆರಿಗೆ ಹಣದಲ್ಲಿ ಕೋವಿಡ್‌ ಮೊದಲ ಅಲೆಯಲ್ಲಿ ಕಟ್ಟಡ ಕಾರ್ಮಿಕರಿಗೆ ₹ 5000 ಪರಿಹಾರ ಘೋಷಿಸಲಾಗಿತ್ತು ಎಂದು ಹೇಳಿದರು.

ಎರಡನೇ ಅಲೆಯಲ್ಲಿ ₹ 3,000 ಜೊತೆಗೆ 50 ಲಕ್ಷ ಕಾರ್ಮಿಕರಿಗೆ ಆಹಾರ ಕಿಟ್ ನೀಡಲು ಘೋಷಿಸಿದೆ. ಕಾರ್ಮಿಕರ ಹಣದಲ್ಲಿ ಕಾರ್ಮಿಕರಿಗೆ ನೀಡುವ ಆಹಾರದ ಕಿಟ್‌ಗಳು ಗುಣಮಟ್ಟದಿಂದ ಕೂಡಿರಬೇಕು ಎಂಬುದನ್ನು ಇಲಾಖೆ ತಿಳಿದುಕೊಳ್ಳಬೇಕು ಎಂದರು.

ಕೋವಿಡ್‌ನಿಂದಾಗಿ ಕಾರ್ಮಿಕರು ಉದ್ಯೋಗವಿಲ್ಲದೇ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ನನ್ನ ವೈಯಕ್ತಿಕ ನಿಧಿಯಲ್ಲಿ 2000 ಮಂದಿಗೆ ಕಿಟ್‌ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಹಾರ ನೀಡಲು ಯೋಚಿಸಲಾಗುವುದು ಎಂದು ಹೇಳಿದರು.

ನಗರಸಭೆ ಮಾಜಿ ಅಧ್ಯಕ್ಷ ಬಿ.ಎಂ. ಮುಬಾರಕ್ ಮಾತನಾಡಿ, ಕೊರೊನಾ ಪ್ರಾರಂಭದಿಂದ ಸರ್ಕಾರ ಸಾಕಷ್ಟು ಹಂತದಲ್ಲಿ ಬಡವರಿಗೆ ಸೌಲಭ್ಯ ನೀಡುತ್ತಿರುವ ರೀತಿಯಲ್ಲಿಯೇ ಮನೋಹರ್ ಕೂಡ ತಮ್ಮ ವೈಯಕ್ತಿಕ ನಿಧಿಯಿಂದ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಭೀಮರಾಜ್ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ಕಟ್ಟಡ ಕಾರ್ಮಿಕರ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ದೂರಿದರು.

ಕಟ್ಟಡ ಕಾರ್ಮಿಕರ ಹಣವನ್ನು ಕಾರ್ಮಿಕರಿಗೆ ವಸ್ತುಗಳ ಮೂಲಕ ನೀಡಬಾರದೆಂದು ಸುಪ್ರೀಂ ಕೋರ್ಟ್ ಆದೇಶವಿದ್ದರೂ ಸರ್ಕಾರ ಕಮಿಷನ್ ಪಡೆಯಲು ₹ 50 ಲಕ್ಷ ಆಹಾರ ಕಿಟ್ ಹಂಚಲು ಹೊರಟಿದೆ. ಈ ಮೂಲಕ ಸರ್ಕಾರವೇ ಕಾರ್ಮಿಕ ಇಲಾಖೆಯ ಜೊತೆಯಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಕಟ್ಟಡ ಕಾರ್ಮಿಕರ ನೈಜ ಫಲಾನುಭವಿಗೆ ಸೌಲಭ್ಯ ಸಿಗಬೇಕೆಂದು ಒತ್ತಾಯಿಸಿದರು.

ಕಾರ್ಮಿಕ ವೃತ್ತ ನಿರೀಕ್ಷಕಿ ರಾಜೇಶ್ವರಿ, ಕಾರ್ಮಿಕ ನಿರೀಕ್ಷಕ ಪ್ರಕಾಶ್, ನಗರಸಭೆ ಮಾಜಿ ಸದಸ್ಯ ರೌತ್ ಶಂಕರಪ್ಪ, ಕಾರ್ಮಿಕ ಮುಖಂಡರಾದ ಎಚ್.ಎಂ. ಯಲ್ಲಪ್ಪ, ನಾರಾಯಣಸ್ವಾಮಿ, ಶಿವಾರೆಡ್ಡಿ, ವೇಣುಗೋಪಾಲ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT