ಬೇತಮಂಗಲ: ಕಂಗಾಡ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಗಲಕುಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ದೇವಸ್ಥಾನದಲ್ಲಿ ಮೂರು ದಿನಗಳಿಂದ ಶ್ರದ್ಧಾ, ಭಕ್ತಿಯಿಂದ ನಡೆದ ಚೌಡೇಶ್ವರಿ ದೇವಿಯ ಹಾಗೂ ಚಂಡಿಕಾದೇವಿಯ ಪ್ರತಿಷ್ಠಾಪನೆ ಪೂಜಾ ಕೈಂಕರ್ಯಗಳು ಸೋಮವಾರ ಸಮಾಪ್ತಿಗೊಂಡವು.
ಚೌಡೇಶ್ವರಿ ದೇವಿಯ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಭಾನುವಾರ ಸಂಜೆ ಆಲಯ ಪ್ರವೇಶ, ಗಣಪತಿ ಪೂಜೆ, ಕಳಶ ಸ್ಥಾಪನೆ, ವಾಸ್ತು ಹೋಮ ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ನಡೆದವು.
ಸೋಮವಾರ ಬೆಳಗ್ಗೆ ಗಣಪತಿ ಪೂಜೆ, ಕಲಾಹೋಮ, ಚೌಡೇಶ್ವರಿ ದೇವಿಯ ವಿಗ್ರಹ ಪ್ರತಿಷ್ಠಾಪನೆ, ಕುಂಬಾಭಿಷೇಕ, ಶಿಖರ ಪ್ರತಿಷ್ಠಾಪನೆ, ದೇವಿಯ ಅಲಂಕಾರ, ಮಹಾಮಂಗಳಾರತಿ ನಡೆಯಿತು.
ಚೌಡೇಶ್ವರಿ ದೇವಿಯ ವಿಗ್ರಹ ಪ್ರತಿಷ್ಠಾಪನೆ ಅಂಗವಾಗಿ ದೇವಸ್ಥಾನವನ್ನು ಹಸಿರು ತೋರಣಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ತೊಂಗಲಕುಪ್ಪ ಗ್ರಾಮದ ಹಿರಿಯರು, ಮುಖಂಡರು, ಮಹಿಳೆಯರು ಹಾಗೂ ಯುವಕರು ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು.