ಶುಕ್ರವಾರ, ಸೆಪ್ಟೆಂಬರ್ 17, 2021
29 °C
ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಮೂಲಸೌಕರ್ಯ: ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಭರವಸೆ

ಜನರಿಗೆ ಉತ್ತಮ ಚಿಕಿತ್ಸೆ: ಪ್ರಥಮ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಸಾಮಾನ್ಯರಿಗೆ ಉತ್ತಮ ಚಿಕಿತ್ಸೆ ಸಿಗುವಂತೆ ಮಾಡುವುದು ನನ್ನ ಪ್ರಥಮ ಆದ್ಯತೆ. ಈ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಮೂಲಸೌಕರ್ಯ ಹಾಗೂ ಕೋವಿಡ್ 3ನೇ ಅಲೆ ಎದುರಿಸಲು ವೈದ್ಯಕೀಯ ಪರಿಕರಗಳನ್ನು ಒದಗಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ಭರವಸೆ ನೀಡಿದರು.

ಇಲ್ಲಿನ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ‘ಈಗಾಗಲೇ ಜಿಲ್ಲೆಯ 6 ತಾಲ್ಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಕುಂದು ಕೊರತೆ ಪಟ್ಟಿ ಮಾಡಿಕೊಂಡಿದ್ದೇನೆ. ಆಸ್ಪತ್ರೆಗಳಿಗೆ ಅವಶ್ಯವಿರುವ ಎಲ್ಲಾ ಸೌಲಭ್ಯಗಳನ್ನು ಶೀಘ್ರವೇ ಕಲ್ಪಿಸಲಾಗುವುದು’ ಎಂದರು.

‘ಎಸ್ಎನ್‌ಆರ್ ಜಿಲ್ಲಾ ಆಸ್ಪತ್ರೆಯು ಮೈಸೂರು ಮಹಾರಾಜರ ಕಾಲದಲ್ಲಿ ಕಟ್ಟಿದ್ದು, ಇದಕ್ಕೆ ಹೊಸ ರೂಪ ನೀಡಲಾಗುವುದು. ಮಾಲೂರು ಆಸ್ಪತ್ರೆಗೆ ಕಟ್ಟಡದ ಅವಶ್ಯಕತೆಯಿದ್ದು, ವಿದ್ಯುತ್‍ಚ್ಛಕ್ತಿ ಮಂಡಳಿಗೆ ಸೇರಿದ 10 ಗುಂಟೆ ಜಾಗವನ್ನು ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು. ಎಲ್ಲಾ ತಾಲ್ಲೂಕು ಆಸ್ಪತ್ರೆಗಳ ತೀವ್ರ ನಿಗಾ ಘಟಕದಲ್ಲಿನ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಕೋವಿಡ್‌ 3ನೇ ಅಲೆ ಹಿನ್ನೆಲೆಯಲ್ಲಿ ಸೋಂಕಿತ ಮಕ್ಕಳ ಚಿಕಿತ್ಸೆಗೆ ವೆಂಟಿಲೇಟರ್‌ ಒದಗಿಸಲಾಗುವುದು. ಜಿಲ್ಲೆಯ ಜನರು ಕೊರೊನಾ ಸೋಂಕಿನಿಂದ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾದರೆ ಅವರಿಗೆ ಸಕಾಲಕ್ಕೆ ಎಲ್ಲಾ ಚಿಕಿತ್ಸೆ ಸಿಗುವಂತೆ ಮಾಡುತ್ತೇವೆ’ ಎಂದು ತಿಳಿಸಿದರು.

‘ಜಿಲ್ಲೆಯ ರೈತರು ಬೆಳೆದ ಕೃಷಿ ಉತ್ಪನ್ನಗಳು ಹಾಗೂ ತರಕಾರಿಗಳಿಗೆ ಉತ್ತಮ ಬೆಲೆ ದೊರೆಯುವಂತೆ ಕ್ರಮ ಕೈಗೊಳ್ಳುತ್ತೇವೆ. ರಾಜ್ಯದಲ್ಲಿ ಕಬ್ಬನ್ ಉದ್ಯಾನ ಮತ್ತು ಲಾಲ್‌ಬಾಗ್ ಹೊರತುಪಡಿಸಿದರೆ ಬೇರೆ ದೊಡ್ಡ ಉದ್ಯಾನಗಳಿಲ್ಲ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 3ನೇ ದೊಡ್ಡ ಉದ್ಯಾನ ನಿರ್ಮಿಸಲು ಯೋಜನೆ ರೂಪಿಸಲಾಗಿದೆ’ ಎಂದು ವಿವರಿಸಿದರು.

ಪವಿತ್ರ ನೆಲ: ‘ದೇಶದ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿರುವ ಕೋಲಾರ ಜಿಲ್ಲೆಯು ವೈಶಿಷ್ಟ್ಯತೆ ಹೊಂದಿದೆ. ಜಿಲ್ಲೆಯು ಹಲವು ಧೀಮಂತ ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ರಾಜಕೀಯ ಮುತ್ಸದಿಗಳಿಗೆ ಜನ್ಮ ನೀಡಿರುವ ಪವಿತ್ರ ನೆಲವಾಗಿದೆ. ರಾಜ್ಯದ ಪ್ರಥಮ ಮುಖ್ಯಮಂತ್ರಿಯಾದ ಕೆ.ಸಿ.ರೆಡ್ಡಿಯವರು ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡ ಜಿಲ್ಲೆಯ ಹೆಮ್ಮೆಯ ಪುತ್ರರಾಗಿದ್ದಾರೆ’ ಎಂದು ಸ್ಮರಿಸಿದರು.

‘ಕೋವಿಡ್‌ನ ಸೂಕ್ಷ್ಮ ಪರಿಸ್ಥಿತಿಯಲ್ಲಿ ನಾವೆಲ್ಲಾ ಒಗ್ಗೂಡಿ ನೊಂದವರ ಜೀವನ ಮತ್ತೆ ಕಟ್ಟಬೇಕು. ಸ್ವಾತಂತ್ರ್ಯ ಹೋರಾಟದ ಧ್ಯೇಯ ದೇಶದ ಜನರನ್ನು ಒಗ್ಗೂಡಿಸಿದ ಮಾದರಿಯಲ್ಲಿ ಪ್ರಾಕೃತಿಕ ವಿಕೋಪ ಹಾಗೂ ಕೊರೊನಾ ತುರ್ತು ಪರಿಸ್ಥಿತಿಯು ಜನರೊಳಗಿನ ಭ್ರಾತೃತ್ವ ಗಟ್ಟಿಗೊಳಿಸಬೇಕು’ ಎಂದು ಆಶಿಸಿದರು.

‘ಜನರು ದ್ವೇಷ ಹಿಮ್ಮೆಟ್ಟಿಸಿ ಸೌಹಾರ್ದಯುತ ಜೀವನ ನಡೆಸಬೇಕು. ಬರ, ಪ್ರವಾಹ ಪರಿಸ್ಥಿತಿ ನಿಭಾಯಿಸಲು ಜನರು ಸಂಘಟಿತರಾಗಬೇಕು. ಪ್ರಾಕೃತಿಕ ಸಮತೋಲನ ಕಾಪಾಡುವ ದೃಢ ಸಂಕಲ್ಪ ಮಾಡಬೇಕು. ನೀರನ್ನು ಪೋಲು ಮಾಡದೆ ಸಂರಕ್ಷಿಸಬೇಕು’ ಎಂದು ಕಿವಿಮಾತು ಹೇಳಿದರು.

ಶಾಸಕ ಕೆ.ಶ್ರೀನಿವಾಸಗೌಡ, ಸಂಸದ ಎಸ್.ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಗೋವಿಂದರಾಜು, ನಗರಸಭೆ ಅಧ್ಯಕ್ಷೆ ಶ್ವೇತಾ, ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು, ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.