ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪನ್ಮೂಲ ಕೊಡುವುದಾಗಿ ನಂಬಿಸಿ ದ್ರೋಹ: ಎಂ. ನಾರಾಯಣಸ್ವಾಮಿ ಬೇಸರ

ಆಮಿಷಕ್ಕೆ ಮಾರಾಟವಾಗಿಲ್ಲ: ದೂರ ಉಳಿದಿದ್ದಕ್ಕೆ ಕಾರಣ ನೀಡಿದ ಬಿಜೆಪಿ ಅಭ್ಯರ್ಥಿ
Published 13 ಮೇ 2023, 4:00 IST
Last Updated 13 ಮೇ 2023, 4:00 IST
ಅಕ್ಷರ ಗಾತ್ರ

ಕೋಲಾರ: ‘ಚುನಾವಣೆಯ ಹಿಂದಿನ ದಿನ ನಾನು ನಂಬಿದ್ದ ಕೆಲ ವ್ಯಕ್ತಿಗಳು ನನಗೆ ದ್ರೋಹ ಬಗೆದಿದ್ದಾರೆ. ಚುನಾವಣೆಯ ಖರ್ಚಿಗಾಗಿ ಅಗತ್ಯವಿದ್ದ ಸಂಪನ್ಮೂಲ ಕೊಡುವುದಾಗಿ ನಂಬಿಸಿ ಕೊನೆ ಕ್ಷಣದಲ್ಲಿ ಕೈಕೊಟ್ಟರು’ ಎಂದು ಮಾಜಿ ಶಾಸಕ ಹಾಗೂ ಬಂಗಾರಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಮತದಾನದ ಹಿಂದಿನ ದಿನ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಂದ ಅವರು ದೂರ ಉಳಿದಿದ್ದಕ್ಕೆ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಈ ಪ್ರಕಟಣೆ ಹೊರಡಿಸಿದ್ದಾರೆ. 

‘ನಾನು ಯಾವುದೇ ಪಕ್ಷದ ಜೊತೆಗೆ ಒಳ ಒಪ್ಪಂದವಾಗಲಿ ಅಥವಾ ಆಮಿಷಕ್ಕಾಗಲೀ ಒಳಗಾಗಿಲ್ಲ. ನನ್ನ ನಂಬಿದ ಪಕ್ಷಕ್ಕೆ ಯಾವುದೇ ರೀತಿಯ ದ್ರೋಹ ಮಾಡಿಲ್ಲ’ ಎಂದಿದ್ದಾರೆ.

‘ನನ್ನ ಮೇಲೆ ಭರವಸೆ ಇಟ್ಟು ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿದ ಪಕ್ಷದ ನಂಬಿಕೆಯನ್ನು ಸ್ವಯಂಕೃತ ಅಪರಾಧಗಳಿಂದಾಗಿ ಉಳಿಸಿಕೊಳ್ಳಲಾಗದ ಹಿನ್ನೆಲೆಯಲ್ಲಿ ಪಕ್ಷ, ಪಕ್ಷದ ಮುಖಂಡರು ಹಾಗೂ ಬಂಗಾರಪೇಟೆ ಮತದಾರರಲ್ಲಿ ಕ್ಷಮೆಯಾಚಿಸುತ್ತಿದ್ದಾನೆ‌’ ಎಂದು ಹೇಳಿದ್ದಾರೆ.

‘ಈ ಬಾರಿಯ ಚುನಾವಣೆ ಸಂದರ್ಭದಲ್ಲಿ ನನ್ನ ಮೇಲೆ ಬಂದಿರುವ ಕೆಲವೊಂದು ಆರೋಪಗಳಿಗೆ ಹಾಗೂ ನಾನು ಮಾಡಿದ ತಪ್ಪಿಗೆ ನಿಜವಾದ ಕಾರಣವನ್ನು ತಿಳಿಸಬೇಕಾದದ್ದು ನನ್ನ ಕರ್ತವ್ಯ ಹಾಗೂ ಅನಿವಾರ್ಯ‌ ಕೂಡ. ನಡೆದ ಘಟನೆಯನ್ನು ಹಲವರು ಹಲವು ರೀತಿ ತಮ್ಮದೇ ರೀತಿಯಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ, ನನ್ನ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ನನ್ನ ಮತದಾರ ಬಂಧುಗಳಿಗೆ ಸತ್ಯಾಂಶ ತಿಳಿಸಲು ಇಚ್ಛಿಸುತ್ತಿದ್ದೇನೆ’ ಎಂದಿದ್ದಾರೆ.

‘ಸಂಸದ ಎಸ್.ಮುನಿಸ್ವಾಮಿ ಹಾಗೂ ಸ್ಥಳೀಯ ಮುಖಂಡರು ನನಗೆ ಸಂಪನ್ಮೂಲ ಸಂಗ್ರಹಿಸಲು ಹೆಗಲು ಕೊಡಲು ಸಿದ್ಧರಿದ್ದರು. ಮುನಿಸ್ವಾಮಿ ಸೇರಿದಂತೆ ನನ್ನ ಪರವಾಗಿ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಪುರಸಭಾ ಮಾಜಿ ಸದಸ್ಯ ಕೆ.ಚಂದ್ರಾರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ವಿ.ಮಹೇಶ್, ಮುಖಂಡರಾದ ವಿ.ಶೇಷು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹಗಲಿರುಳು ದುಡಿದು ಸಹಕಾರ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ನಾನು ನಂಬಿದ್ದ ಮೂಲಗಳಿಂದ ಅಗತ್ಯವಿದ್ದ ಸಂಪನ್ಮೂಲ ಬರುವ ಭರವಸೆ ಇದ್ದ ಕಾರಣ ನಾನು ಈ ಎಲ್ಲಾ ಮುಖಂಡರು ಕೊಡಲು ಸಿದ್ಧವಿದ್ದ ಸಂಪನ್ಮೂಲ ಹಾಗೂ ಸಹಾಯವನ್ನು ನಿರಾಕರಿಸಿದೆ. ನೈತಿಕವಾಗಿ ಬೆಂಬಲ ನೀಡಿ ಪಕ್ಷದ ಗೆಲುವಿಗಾಗಿ ನನಗೆ ಹೆಗಲು ಕೊಡಿ ಎಂದು ಕೇಳಿಕೊಂಡಿದ್ದೆ’ ಎಂದು ನುಡಿದಿದ್ದಾರೆ.

‘ಕೆಲವರು ನಂಬಿಸಿ ಮೋಸ ಮಾಡಿದ ಕಾರಣ ಕೊನೆ ಕ್ಷಣದಲ್ಲಿ ಅಗತ್ಯವಿದ್ದ ಸಂಪನ್ಮೂಲ ಕ್ರೋಡೀಕರಿಸಲು ಸಾಧ್ಯವಾಗಲಿಲ್ಲ. ಇದರಿಂದ ಗೊಂದಲಕ್ಕೆ ಸಿಲುಕಿದೆ. ಮತದಾನಕ್ಕೆ ಇನ್ನೇನು ಕೆಲವೇ ಗಂಟೆ ಬಾಕಿ ಇರುವಾಗ ಅಂದು ಕೊಂಡಂತೆ ಕೆಲಸ ನಡೆಯದೆ ಹೋದಾಗ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಬೇರೆ ರೀತಿಯ ಸಂದೇಶ ರವಾನೆಯಾಯಿತು. ನಾನು ಏನು ಮಾಡಲಾಗದ ಸ್ಥಿತಿಗೆ ತಲುಪಿದೆ. ಪರಿಣಾಮ ನಾನು ಮಾಡಿದ ತಪ್ಪಿನಿಂದ ಮತದಾರರು ಹಾಗೂ ನನ್ನ ಪಕ್ಷದ ಮುಖಂಡರ ಎದುರು ಚುನಾವಣೆಯ ದಿನ ಮುಖ ತೋರಿಸಲಾಗದ ಸ್ಥಿತಿಗೆ ಬಂದು ತಲುಪಿದ್ದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT