ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತ ದಾನಿಗಳು ಜೀವ ರಕ್ಷಕರು: ಸಂಜೀವಪ್ಪ ಅಭಿಪ್ರಾಯ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ
Last Updated 10 ಮೇ 2021, 15:55 IST
ಅಕ್ಷರ ಗಾತ್ರ

ಕೋಲಾರ: ‘ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಆಗುವುದಿಲ್ಲ. ರಕ್ತ ದಾನಿಗಳು ಜೀವ ರಕ್ಷಕರು’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಜೀವಪ್ಪ ಅಭಿಪ್ರಾಯಪಟ್ಟರು.

ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ಶಾಖೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಕೇಶವ ಕೃಪಾ ಸಂವರ್ಧನಾ ಸಮಿತಿ ಸಹಯೋಗದಲ್ಲಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ‘ಕೋವಿಡ್‌ ಭೀತಿಯಿಂದಾಗಿ ಎಲ್ಲೆಡೆ ರಕ್ತ ಸಂಗ್ರಹಣೆ ಪ್ರಮಾಣ ಗಣನೀಯವಾಗಿ ಕುಸಿದಿದೆ’ ಎಂದು ಹೇಳಿದರು.

‘ರಕ್ತವು ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ರಕ್ತವು ಜೀವ ಉಳಿಸಲು ನೀಡುವ ಉಡುಗೊರೆಯಾಗಿದೆ. ರಕ್ತದ ಕೊರತೆಯಿಂದಾಗಿ ಗರ್ಭಿಣಿಯರು, ಅಪಘಾತದ ಗಾಯಾಳುಗಳ ಚಿಕಿತ್ಸೆಗೆ ದೊಡ್ಡ ಸಮಸ್ಯೆಯಾಗಿದೆ. ರಕ್ತದ ಕೊರತೆಯಿಂದ ಆಪತ್ತಿನಲ್ಲಿರುವ ಜೀವಕ್ಕೆ ಮತ್ತೊಬ್ಬ ವ್ಯಕ್ತಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸಬಲ್ಲ’ ಎಂದು ತಿಳಿಸಿದರು.

‘ಮನುಷ್ಯ ರಕ್ತ ನೀಡುವುದರಿಂದ ಸಣ್ಣಗಾಗುತ್ತಾನೆ ಎಂಬ ತಪ್ಪು ಭಾವನೆ ಬಿಡಬೇಕು. ಯುವಕ ಯುವತಿಯರು ರಕ್ತದಾನದ ಮಹತ್ವ ಅರಿಯಬೇಕು. ವರ್ಷಕ್ಕೆ 2 ಬಾರಿ ರಕ್ತದಾನ ಮಾಡಿ ಆರೋಗ್ಯವಂತರಾಗಿರಬೇಕು. ರಕ್ತದಾನದ ಸಂಬಂಧ ಜಾಗೃತಿ ಮೂಡಿಸಬೇಕು. ಎಲ್ಲರೂ ರಕ್ತದಾನ ಮಾಡಲು ಪಣ ತೊಡಬೇಕು’ ಎಂದು ಕಿವಿಮಾತು ಹೇಳಿದರು.

ಶೇಷ್ಠ ದಾನ: ‘ದೇಶದಲ್ಲಿ ಸ್ವಯಂ ಪ್ರೇರಿತ ರಕ್ತದಾನವು 1975ರಿಂದ ಆರಂಭವಾಗಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 1ರಷ್ಟು ಮಂದಿಗೆ ರಕ್ತದ ಅವಶ್ಯಕತೆಯಿದೆ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ 4 ಜನರ ಪ್ರಾಣ ಉಳಿಸಬಹುದು. ರಕ್ತದಾನದಿಂದ ವ್ಯಕ್ತಿ ಚುರುಕುಗೊಳ್ಳುವುದರ ಜತೆಗೆ ಹೃದಯಾಘಾತ ಕಡಿಮೆಯಾಗುತ್ತವೆ’ ಎಂದು ವಿವರಿಸಿದರು.

‘ಮನುಷ್ಯನಿಗೆ ರಕ್ತವು ಪ್ರಕೃತಿ ದತ್ತವಾಗಿ ಬಂದಿದೆ. ರಕ್ತಕ್ಕೆ ಬದಲಾಗಿ ಬೇರೊಂದು ವಸ್ತುವಿಲ್ಲ. ರಕ್ತದಾನದ ಮೂಲಕ ಪ್ರಕೃತಿಯ ಋಣ ತೀರಿಸಬೇಕು. ನಾವು ಬದುಕಬೇಕು, ನಮ್ಮ ಜತೆಯಲ್ಲಿ ಮತ್ತೊಬ್ಬರನ್ನು ಬದುಕಿಸಬೇಕು. ರಕ್ತದಾನಕ್ಕಿಂತ ಶೇಷ್ಠ ದಾನ ಮತ್ತೊಂದಿಲ್ಲ’ ಎಂದರು.

‘ಮನುಷ್ಯನ ಬೆಳವಣಿಗೆಗೆ ರಕ್ತ ಬಹಳ ಮುಖ್ಯ. ದಿನದಿಂದ ದಿನಕ್ಕೆ ರಕ್ತದ ಬೇಡಿಕೆ ಹೆಚ್ಚುತ್ತಿದೆ. ರಕ್ತದ ಅಗತ್ಯತೆ ಯಾರಿಗಾದರೂ ಬರಬಹುದು. ರಕ್ತದ ಕೊರತೆಯಿಂದಾಗಿ ಗರ್ಭಿಣಿಯರು, ಅಪಘಾತದ ಗಾಯಾಳುಗಳ ಚಿಕಿತ್ಸೆಗೆ ದೊಡ್ಡ ಸಮಸ್ಯೆಯಾಗಿದೆ. ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ತಕ್ಷಣಕ್ಕೆ ರಕ್ತ ಸಿಗುವಂತೆ ಮಾಡಬೇಕು. ಕೊರೊನಾ ಸಮಯದಲ್ಲಿ ರಕ್ತ ನೀಡುವವರ ಅವಶ್ಯಕತೆ ಹೆಚ್ಚಿದೆ. ಆರೋಗ್ಯವಂತರು ರಕ್ತದಾನ ಮಾಡುವ ಜೀವ ರಕ್ಷಣೆಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಪರ್ಯಾಯವಿಲ್ಲ: ‘ರಕ್ತಕ್ಕೆ ಪರ್ಯಾಯ ಇಲ್ಲ. ಸಾವಿನ ಅಂಚಿನಲ್ಲಿರುವವರ ಜೀವ ಉಳಿಸಲು ರಕ್ತವನ್ನೇ ನೀಡಬೇಕು. ಆದ್ದರಿಂದ ಪ್ರತಿಯೊಬ್ಬರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಬೇಕು. 18 ವರ್ಷದಿಂದ 60 ವರ್ಷದೊಳಗಿನ ಆರೋಗ್ಯವಂತ ಪುರುಷರು ಮತ್ತು ಮಹಿಳೆಯರು 3 ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕು’ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಅಧ್ಯಕ್ಷ ಎನ್.ಗೋಪಾಲಕೃಷ್ಣಗೌಡ ಹೇಳಿದರು.

‘ರಕ್ತದ ಅವಶ್ಯಕತೆ ಉಂಟಾದಾಗ ಮಾತ್ರ ರಕ್ತದ ಮಹತ್ವ ಪ್ರತಿಯೊಬ್ಬರಿಗೂ ಅರಿವಾಗುತ್ತದೆ. ಒಂದು ಯೂನಿಟ್ ರಕ್ತದಿಂದ 4 ಜನರ ಪ್ರಾಣ ಉಳಿಸಬಹುದು. ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು. ರಕ್ತದಾನವು ಇತರರಿಗೆ ಮರುಜನ್ಮ ನೀಡುವ ಶ್ರೇಷ್ಠ ಮತ್ತು ಸಾರ್ಥಕ ಸೇವೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.

ಶಿಬಿರದಲ್ಲಿ 32 ಯೂನಿಟ್ ರಕ್ತ ಸಂಗ್ರಹವಾಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ತುಮಕೂರು ವಿಭಾಗದ ಸಂಘ ಚಾಲಕ ಶಂಕರ್‌ನಾಯ್ಕ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕೇಂದ್ರ ಸಮಿತಿ ಸದಸ್ಯ ಎಸ್.ಸಿವೆಂಕಟಕೃಷ್ಣಪ್ಪ, ಜಿಲ್ಲಾ ಉಪಾಧ್ಯಕ್ಷ ಆರ್‌.ಶ್ರೀನಿವಾಸನ್, ಪ್ರಧಾನ ಕಾರ್ಯದರ್ಶಿ ಎಸ್.ನಂದೀಶ್‌ಕುಮಾರ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT