ಮಂಗಳವಾರ, ಫೆಬ್ರವರಿ 25, 2020
19 °C

ಜಿಲ್ಲೆಯಲ್ಲಿ ಸಹಕಾರ ಭವನ ನಿರ್ಮಿಸಿ: ಸಭಾಪತಿ ಸುದರ್ಶನ್ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರೈತರು, ಮಹಿಳೆಯರ ಆರ್ಥಿಕ ಸದೃಢತೆಗೆ ಕಾರಣವಾಗಿರುವ ಸಹಕಾರ ರಂಗವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನಗರದಲ್ಲಿ ಬೃಹತ್ ಸಹಕಾರ ಭವನ ನಿರ್ಮಾಣ ಮಾಡಬೇಕು’ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸಲಹೆ ನೀಡಿದರು.

ಇಲ್ಲಿ ಶುಕ್ರವಾರ ನಡೆದ ಗೋಲ್ಡ್‌ಫೀಲ್ಡ್‌ ಸೌಹಾರ್ದ ಕ್ರೆಡಿಟ್ ಕೋಆಪರೇಟೀವ್ ಲಿಮಿಟೆಡ್‌ನ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ‘ಜಿಲ್ಲೆಯ ನಿರುದ್ಯೋಗಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಉಚಿತ ತರಬೇತಿ ನೀಡುವ ಉದ್ದೇಶ ಜನಪರ ಕಾಳಜಿಗೆ ಸಾಕ್ಷಿ’ ಎಂದರು.

‘ಗ್ರಾಮೀಣ ಸೊಸೈಟಿಯಿಂದ ರಾಜಕೀಯ ಜೀವನ ಆರಂಭಿಸಿದ ಶಾಸಕ ಶ್ರೀನಿವಾಸಗೌಡರು ವಿಶ್ವ ಮಟ್ಟದ ಸಹಕಾರ ಸಂಸ್ಥೆಯಲ್ಲಿ ನಾಯಕತ್ವ ಹೊಂದಿದ್ದಾರೆ. ಜಿಲ್ಲೆಯ ಆರ್ಥಿಕಾಭಿವೃದ್ಧಿಗೆ ಸಹಕಾರ ರಂಗ ಅತ್ಯಂತ ಮುಖ್ಯವಾಗಿದ್ದು, ಇದನ್ನು ಮತ್ತಷ್ಟು ಗಟ್ಟಿಗೊಳಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಸಹಕಾರ ಭವನ ಸ್ಥಾಪಿಸುವ ಮೂಲಕ ಸಹಕಾರ ಸಂಸ್ಥೆಗಳಿಗೆ ಆರ್ಥಿಕ ಸದೃಢತೆಯ ಅರಿವು, ಮಾರ್ಗದರ್ಶನ ನೀಡಬಹುದು. ಇದು ರಾಜ್ಯಕ್ಕೆ ಮಾದರಿಯಾಗಲಿದೆ. ಗೋಲ್ಡ್‌ಫೀಲ್ಡ್‌ ಸೌಹಾರ್ದ ಕ್ರೆಡಿಟ್ ಕೋಆಪರೇಟೀವ್ ಲಿಮಿಟೆಡ್‌ ಜಿಲ್ಲೆಯ ಬಹುದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದು ಶತಮಾನೋತ್ಸವ ಆಚರಿಸಿಕೊಳ್ಳಲಿ’ ಎಂದು ಆಶಿಸಿದರು.

ಪಾರದರ್ಶಕ ನಡೆ: ‘ಸಹಕಾರಿ ವ್ಯವಸ್ಥೆಯಿಂದಲೇ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಶಾಸಕ ಸ್ಥಾನಕ್ಕಿಂತ ಸಹಕಾರಿ ರಂಗಕ್ಕೆ ಹೆಚ್ಚಿನ ಮಹತ್ವ ನೀಡುತ್ತೇನೆ. ಸಹಕಾರ ರಂಗದಲ್ಲಿ ಕೆಲಸ ಮಾಡುವವರ ಚಿಂತನೆ ಸರಿಯಿದ್ದರೆ ಮಾತ್ರ ಸಂಸ್ಥೆ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಿವಿಮಾತು ಹೇಳಿದರು.

‘ಸಹಕಾರ ಕ್ಷೇತ್ರದವರಲ್ಲಿ ಪಾರದರ್ಶಕ ನಡೆಯಿರಬೇಕು. ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು. ಜನರಿಗೆ ಉಪಕಾರ ಮಾಡುವ ನಿಟ್ಟಿನಲ್ಲಿ ಕೇವಲ ಹಣಕಾಸು ಸಂಸ್ಥೆಯಾಗಿ ಮಾತ್ರವಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಕೇಂದ್ರವಾಗಿಯೂ ಬೆಳೆಯುವ ಉದ್ದೇಶ ಸ್ವಾಗತಾರ್ಹ’ ಎಂದರು.

ಹಣದ ಉದ್ದೇಶವಿಲ್ಲ: ‘ಸಂಸ್ಥೆಯಿಂದ ಹಣ ಮಾಡುವ ಉದ್ದೇಶವಿಲ್ಲ. ಗ್ರಾಮೀಣ ಸದಸ್ಯತ್ವ ಹೆಚ್ಚಿಸಿ ರೈತರಿಗೆ ಆರ್ಥಿಕ ಸಹಾಯ ಹಾಗೂ ಜಿಲ್ಲೆಯ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಉಚಿತ ತರಬೇತಿ, ಶಿಕ್ಷಣಕ್ಕೆ ಸಾಲ ನೀಡುವ ಜನಪರ ಕಾಳಜಿಯಿಂದ ಸಂಸ್ಥೆ ಸ್ಥಾಪಿಸಲಾಗಿದೆ’ ಎಂದು ಗೋಲ್ಡ್‌ಫೀಲ್ಡ್‌ ಸೌಹಾರ್ದ ಕ್ರೆಡಿಟ್ ಕೋಆಪರೇಟೀವ್ ಲಿಮಿಟೆಡ್‌ ಅಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ ವಿವರಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ, ಸಂಸ್ಥೆಯ ಕಾನೂನು ಸಲಹೆಗಾರ ಟಿ.ಜಿ.ಮನ್ಮಥರೆಡ್ಡಿ, ನಿರ್ದೇಶಕರಾದ ಎ.ಎಸ್.ನಂಜುಂಡಗೌಡ, ನಾಗರಾಜ್, ಶ್ರೀರಾಮ್, ಪಿ.ಸುವರ್ಣ ಮನ್ಮಥರೆಡ್ಡಿ, ಡಿ.ನಾಗರಾಜಪ್ಪ, ರಾಮಾನಾಯ್ಕ್, ಬಿ.ಜಿ.ಶ್ರೀದೇವಿ, ಕೆ.ಬಾಬು, ಕೆ.ವಿ.ಮುನಿರಾಜು, ಫ್ರಾನ್ಸಿಸ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು