ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಜಿಲ್ಲೆಯಲ್ಲಿ ಜನಜೀವನಕ್ಕೆ ತಟ್ಟದ ಬಂದ್‌ ಬಿಸಿ, ವಹಿವಾಟು ಸಹಜ

ಬಸ್‌– ಆಟೊ ಸೇವೆ ಅಬಾಧಿತ
Last Updated 13 ಫೆಬ್ರುವರಿ 2020, 13:16 IST
ಅಕ್ಷರ ಗಾತ್ರ

ಕೋಲಾರ: ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟವು ನೀಡಿದ್ದ ‘ಕರ್ನಾಟಕ ಬಂದ್‌’ ಕರೆಗೆ ಜಿಲ್ಲೆಯಲ್ಲಿ ಗುರುವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಜನಜೀವನಕ್ಕೆ ಬಂದ್‌ನ ಬಿಸಿ ತಟ್ಟಲಿಲ್ಲ.

ಕರ್ನಾಟಕ ಸಂಘಟನೆಗಳ ಒಕ್ಕೂಟ ಹೊರತುಪಡಿಸಿ ಬೇರೆ ಸಂಘಟನೆಗಳ ಸದಸ್ಯರು ಹಾಗೂ ಜನರು ಬಂದ್‌ಗೆ ಬೆಂಬಲ ಸೂಚಿಸಲಿಲ್ಲ. ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಸದಸ್ಯರು ಧರಣಿ ಮಾಡಿದ್ದನ್ನು ಹೊರತುಪಡಿಸಿದರೆ ಎಲ್ಲಿಯೂ ಬಂದ್‌ನ ಛಾಯೆ ಇರಲಿಲ್ಲ.

ವಾಣಿಜ್ಯ ವಹಿವಾಟು ಹಾಗೂ ವಾಹನ ಸಂಚಾರ ಎಂದಿನಂತೆಯೇ ಇತ್ತು. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು, ಆಟೊಗಳು ಪ್ರತಿನಿತ್ಯದಂತೆ ರಸ್ತೆಗಿಳಿದವು. ಹೀಗಾಗಿ ಜನಜೀವನಕ್ಕೆ ತೊಂದರೆಯಾಗಲಿಲ್ಲ. ಕೆಎಸ್‌ಆರ್‌ಟಿಸಿ ಮತ್ತು ಹಳೆ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ದೊಡ್ಡ ದಂಡೇ ಕಂಡುಬಂತು.

ಎಪಿಎಂಸಿ, ರೇಷ್ಮೆಗೂಡು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ದಿನನಿತ್ಯದಂತೆ ವಹಿವಾಟು ನಡೆಯಿತು. ಪ್ರಮುಖ ವಾಣಿಜ್ಯ ಸ್ಥಳಗಳಾದ ಎಂ.ಜಿ.ರಸ್ತೆ, ಎಂ.ಬಿ.ರಸ್ತೆ, ಅಮ್ಮವಾರಿಪೇಟೆ, ದೊಡ್ಡಪೇಟೆ, ಹಳೆ ಬಸ್‌ ನಿಲ್ದಾಣ, ಕ್ಲಾಕ್‌ ಟವರ್‌, ಗೌರಿಪೇಟೆಯಲ್ಲಿನ ಅಂಗಡಿಗಳು ತೆರೆದಿದ್ದವು. ತರಕಾರಿ, ಹಾಲು, ದಿನಸಿ ಪದಾರ್ಥ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಲಿಲ್ಲ.

ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಬಿಎಸ್‌ಎನ್‌ಎಲ್‌ ಮತ್ತು ಅಂಚೆ ಕಚೇರಿಗಳು ಇಡೀ ದಿನ ಕಾರ್ಯ ನಿರ್ವಹಿಸಿದವು. ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್‌ಗಳಲ್ಲಿ ಹೆಚ್ಚಿನ ಜನಸಂದಣಿ ಇತ್ತು. ಹೋಟೆಲ್‌ಗಳು, ಆಸ್ಪತ್ರೆಗಳು ಮತ್ತು ಔಷಧ ಮಾರಾಟ ಮಳಿಗೆಗಳು ಸೇವೆ ಒದಗಿಸಿದವು. ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ನಡೆಯಿತು. ಪೆಟ್ರೋಲ್‌ ಬಂಕ್‌ಗಳಲ್ಲೂ ವಹಿವಾಟು ಸಹಜವಾಗಿತ್ತು. ವಾಹನ ಸವಾರರು ಸಾಲಿನಲ್ಲಿ ನಿಂತು ಪೆಟ್ರೋಲ್‌ ಮತ್ತು ಡೀಸೆಲ್‌ ಹಾಕಿಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

ಹಾಜರಾತಿ ಕಡಿಮೆ: ಜಿಲ್ಲೆಯಾದ್ಯಂತ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ತರಗತಿಗಳು ನಡೆದವು. ಜಿಲ್ಲಾಡಳಿತವು ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ಮುಂಚಿತವಾಗಿ ತಿಳಿಸಿತ್ತು. ಆದರೂ ಬಂದ್‌ನ ಗೊಂದಲದಿಂದಾಗಿ ಸಾಕಷ್ಟು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಗೈರಾಗಿದ್ದರಿಂದ ಹಾಜರಾತಿ ಕಡಿಮೆಯಿತ್ತು.

ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಸದಸ್ಯರು ಗಾಂಧಿ ವನದಿಂದ ಮೆಕ್ಕೆ ವೃತ್ತದವರೆಗೆ ಮೆರವಣಿಗೆ ಮಾಡಿ ಬೇಡಿಕೆ ಸಂಬಂಧ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಪೊಲೀಸ್ ಭದ್ರತೆ: ಬಂದ್‌ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಸರ್ಕಾರಿ ಕಚೇರಿಗಳು, ಪ್ರಮುಖ ವೃತ್ತ, ಜಂಕ್ಷನ್‌ಗಳು ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳು ಸೂಕ್ಷ್ಮ ಪ್ರದೇಶಗಳಲ್ಲಿ ನಿಯಮಿತವಾಗಿ ಗಸ್ತು ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT