ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸಂಪುಟ ವಿಸ್ತರಣೆ: ಲಂಚದ ಆರೋಪಕ್ಕೆ ನಾಗೇಶ್‌ ತಲೆದಂಡ?

ಪ್ರಧಾನಮಂತ್ರಿ ಕಚೇರಿಗೆ ಸಲ್ಲಿಕೆಯಾಗಿದ್ದ ದೂರು
Last Updated 14 ಜನವರಿ 2021, 19:30 IST
ಅಕ್ಷರ ಗಾತ್ರ

ಕೋಲಾರ: ಅಬಕಾರಿ ಸಚಿವರಾಗಿದ್ದ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಶಾಸಕ ಎಚ್‌.ನಾಗೇಶ್‌ ವಿರುದ್ಧ ಕೇಳಿಬಂದಿದ್ದ ಲಂಚದ ಆರೋಪವು ಅವರ ಸಚಿವಗಾದಿಗೆ ಮುಳವಾಯಿತೇ ಎಂಬ ಬಗ್ಗೆ ಕಮಲ ಪಾಳಯದಲ್ಲಿ ಬಿಸಿ ಬಿಸಿ ಚರ್ಚೆ ನಡೆದಿದೆ.

ಬಳ್ಳಾರಿ ಜಿಲ್ಲೆ ಹೊಸಪೇಟೆ ವಿಭಾಗದ ಅಬಕಾರಿ ಜಂಟಿ ಆಯುಕ್ತ ಮೋಹನ್‌ರಾಜ್‌ರ ವರ್ಗಾವಣೆಗೆ ನಾಗೇಶ್‌ ₹ 1 ಕೋಟಿ ಲಂಚ ಕೇಳಿದ್ದರು ಎಂದು ಆರೋಪಿಸಿ ಮೋಹನ್‌ರಾಜ್‌ರ ಪುತ್ರಿ ಎಂ.ಸ್ನೇಹಾ ಅವರು 2020ರ ಜುಲೈನಲ್ಲಿ ಪ್ರಧಾನಿಮಂತ್ರಿಗಳ ಕಚೇರಿಗೆ ಆನ್‌ಲೈನ್‌ ಮೂಲಕ ದೂರು ಸಲ್ಲಿಸಿದ್ದರು.

‘ತಂದೆಯು ಅನಾರೋಗ್ಯ ಮತ್ತು ಕೌಟುಂಬಿಕ ಕಾರಣಕ್ಕೆ ಬೆಂಗಳೂರಿಗೆ ವರ್ಗಾವಣೆ ಕೋರಿದ್ದರು. ಬೆಂಗಳೂರು ವಿಭಾಗದಲ್ಲಿ ಖಾಲಿಯಿರುವ ಜಂಟಿ ಆಯುಕ್ತರ 5 ಹುದ್ದೆಗೆ ಅರ್ಹ ಅಧಿಕಾರಿಗಳಿಲ್ಲ. ನಿಯಮಬಾಹಿರವಾಗಿ ಕೆಳ ಹಂತದ ಉಪ ಆಯುಕ್ತರ ದರ್ಜೆಯ ಅಧಿಕಾರಿಗಳಿಂದ ಲಂಚ ಪಡೆದು ಅವರಿಗೆ ಹೆಚ್ಚುವರಿಯಾಗಿ ಆ ಹುದ್ದೆಗಳ ಜವಾಬ್ದಾರಿ ನೀಡಲಾಗಿದೆ’ ಎಂದು ಸ್ನೇಹಾ ಆರೋಪಿಸಿದ್ದರು.

‘ನಾಗೇಶ್‌ ಅವರು ಎಲ್‌.ಎ.ಮಂಜುನಾಥ್ ಮತ್ತು ಹರ್ಷ ಎಂಬ ಮದ್ಯವರ್ತಿಗಳ ಮೂಲಕ ಕೋಟ್ಯಂತರ ರೂಪಾಯಿ ಲಂಚ ಪಡೆದು ಇಲಾಖೆಯ 600 ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ’ ಎಂದು ಸ್ನೇಹಾ ಗಂಭೀರ ಆರೋಪ ಮಾಡಿದ್ದರು.

ಇದರ ಬೆನ್ನಲ್ಲೇ ನಾಗೇಶ್‌ ಅವರು ಹಾಲು ಸರಬರಾಜು ಮಾಡುವ ಮಾದರಿಯಲ್ಲಿ ಜನರ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡುವುದಾಗಿ ಹೇಳಿಕೆ ನೀಡಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದರು. ಲಂಚದ ಆರೋಪ ಮತ್ತು ನಾಗೇಶ್‌ರ ಬಾಲಿಷ ಹೇಳಿಕೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ವರಿಷ್ಠರು ಅವರನ್ನು ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂದೇಶ ರವಾನಿಸಿದ್ದರು.

ಇಚ್ಛೆಯಿರಲಿಲ್ಲ: ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ನಾಗೇಶ್‌ರನ್ನು ಸಂಪುಟದಿಂದ ಕೈಬಿಡಲು ಯಡಿಯೂರಪ್ಪ ಅವರಿಗೆ ಇಚ್ಛೆಯಿರಲಿಲ್ಲ. ಮತ್ತೊಂದೆಡೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ತೊರೆದು ಬಂದಿದ್ದ ಮಿತ್ರ ಮಂಡಳಿ ಶಾಸಕರು ನಾಗೇಶ್‌ರನ್ನು ಶತಾಯಗತಾಯ ಸಚಿವ ಸ್ಥಾನದಲ್ಲಿ ಮುಂದುವರಿಸಬೇಕೆಂದು ಯಡಿಯೂರಪ್ಪರ ಮೇಲೆ ಒತ್ತಡ ತಂದಿದ್ದರು.

ಹೈಕಮಾಂಡ್‌ ಆದೇಶ ಪಾಲಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದ ಯಡಿಯೂರಪ್ಪ ಅವರು ನಾಗೇಶ್‌ ಅವರಿಗೆ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧ್ಯಕ್ಷಗಾದಿ ಕೊಡುವ ಭರವಸೆ ನೀಡಿ ರಾಜೀನಾಮೆ ಪಡೆದರು. ಸ್ನೇಹಾ ಅವರ ದೂರಿನಿಂದಲೇ ನಾಗೇಶ್‌ರ ತಲೆದಂಡವಾಯಿತು ಎಂದು ಬಿಜೆಪಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT