ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಟೆ–ಗೋವು ಹತ್ಯೆ: ಕಟ್ಟೆಚ್ಚರ ವಹಿಸಿ

ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೆಲ್ವಮಣಿ ಸೂಚನೆ
Last Updated 13 ಜುಲೈ 2021, 16:24 IST
ಅಕ್ಷರ ಗಾತ್ರ

ಕೋಲಾರ: ‘ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಒಂಟೆ ಮತ್ತು ಗೋವುಗಳನ್ನು ಹತ್ಯೆ ಮಾಡದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ನಡೆಸಬೇಕು’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಮಂಗಳವಾರ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘ, ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಸಭೆಯಲ್ಲಿ ಮಾತನಾಡಿ, ‘ಮುಸ್ಲಿಂ ಸಮುದಾಯದ ಮುಖಂಡರ ಸಭೆ ನಡೆಸಿ ಗೋಹತ್ಯೆ ನಿಷೇಧ ಕಾನೂನಿನ ಬಗ್ಗೆ ಸಮುದಾಯದ ಜನರಿಗೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ಬಕ್ರೀದ್ ಹಬ್ಬದ ವೇಳೆ ಒಂಟೆ ಮತ್ತು ಗೋವುಗಳನ್ನು ಮಾಂಸಕ್ಕೆ ಬಳಸಲಾಗುತ್ತದೆ. ಇದು ಅಪರಾಧ. ಸಾಕು ಪ್ರಾಣಿಗಳ ಹತ್ಯೆ ನಿರ್ಬಂಧ ಸಂಬಂಧ ಸರ್ಕಾರ ಕಾನೂನು ರೂಪಿಸಿದ್ದು, ಇದನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು. ಕಾನೂನು ಉಲ್ಲಂಘಿಸಿದರೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಹಬ್ಬದ ಹಿನ್ನೆಲೆಯಲ್ಲಿ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಪ್ರಾಣಿಗಳ ಕಳ್ಳ ಸಾಗಾಣಿಕೆ ನಡೆಯುತ್ತದೆ. ಆದ್ದರಿಂದ ಜಿಲ್ಲೆಯ ಗಡಿ ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಿ. ಚೆಕ್‌ಪೋಸ್ಟ್‌ಗಳಲ್ಲಿ ಕಡ್ಡಾಯವಾಗಿ ಸರಕು ಸಾಗಣೆ ವಾಹನಗಳನ್ನು ಪರಿಶೀಲಿಸಬೇಕು. ರಕ್ಷಿಸಿದ ಗೋವುಗಳನ್ನು ಪಶುಪಾಲನಾ ಇಲಾಖೆ ನೆರವಿನಲ್ಲಿ ಗೋಶಾಲೆಗೆ ಕಳುಹಿಸಿ’ ಎಂದು ಪೊಲೀಸ್ ಹಾಗೂ ಆರ್‌ಟಿಒ ಅಧಿಕಾರಿಗಳಿಗೆ ತಿಳಿಸಿದರು.

‘ಮಾಂಸದ ಅಂಗಡಿ ಮಾಲೀಕರು ಸರ್ಕಾರ ಸೂಚಿಸುವ ಸ್ವಚ್ಛತಾ ಕ್ರಮಗಳನ್ನು ಅನುಸರಿಸಬೇಕು. ಅಂಗಡಿಗಳ ತ್ಯಾಜ್ಯವನ್ನು ಮನಬಂದಂತೆ ಎಲ್ಲೆಂದರಲ್ಲಿ ವಿಲೇವಾರಿ ಮಾಡುವವರ ವಿರುದ್ಧ ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪ್ರಕರಣ ದಾಖಲಿಸಿ’ ಎಂದು ಆದೇಶಿಸಿದರು.

ಮಾಹಿತಿ ಕೊಡಿ: ‘ಕಾನೂನುಬಾಹಿರವಾಗಿ ಒಂಟೆ ಅಥವಾ ಗೋಹತ್ಯೆ ಮಾಡುತ್ತಿರುವುದು ಕಂಡುಬಂದರೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ, ಪಶುಪಾಲನಾ ಇಲಾಖೆಗೆ, ಪೊಲೀಸ್ ಠಾಣೆಗೆ ಅಥವಾ ನಗರಸಭೆಗೆ ಮಾಹಿತಿ ನೀಡಬೇಕು. ಪ್ರಾಣಿಗಳ ಕಳ್ಳ ಸಾಗಾಣಿಕೆ ಬಗ್ಗೆಯೂ ಮಾಹಿತಿ ಕೊಡಬಹುದು. ಪ್ರಾಣಿಗಳ ಕಳ್ಳ ಸಾಗಾಣಿಕೆ ತಡೆಗೆ ಜನರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಎನ್‌.ಜಗದೀಶ್‌ಕುಮಾರ್‌, ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ.ಅಫ್ಜಲ್‌ಪಾಷಾ, ಡಾ.ಎಸ್‌.ವಿಶ್ವನಾಥ್‌, ನಗರಸಭೆ ಆಯುಕ್ತ ಪ್ರಸಾದ್‌, ಜಿಲ್ಲಾ ಪ್ರಾಣಿದಯಾ ಸಂಘದ ಸದಸ್ಯ ಕೆ.ಎಸ್‌.ತ್ಯಾಗರಾಜು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT