ಬುಧವಾರ, ಆಗಸ್ಟ್ 4, 2021
21 °C
ಐನೋರ ಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ

ಪಿಡಿಒ ವಿರುದ್ಧ ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಐನೋರ ಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಪಿಡಿಒ ಎಂ.ರಾಮಕೃಷ್ಣ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಗ್ರಾ.ಪಂ ವ್ಯಾಪ್ತಿಯಲ್ಲಿ 2016–17 ನೇ ಸಾಲಿನಲ್ಲಿ ₹ 3.96 ಲಕ್ಷ ದುರುಪಯೋಗವಾಗಿದೆ. ₹ 1.82 ಲಕ್ಷ ಮೊತ್ತಕ್ಕೆ ಆಕ್ಷೇಪಣೆ ಇದೆ. ಬಜೆಟ್ ರೂಪಿಸದೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಗ್ರಾ.ಪಂನ ಹಣ ಖರ್ಚು ಮಾಡಲಾಗಿದೆ ಎಂದು ನಾರಾಯಣಸ್ವಾಮಿ ಎಂಬುವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ (ಆರ್‌ಡಿಪಿಆರ್‌) ಕಾರ್ಯದರ್ಶಿಗೆ ದಾಖಲೆಪತ್ರ ಸಮೇತ ಇತ್ತೀಚೆಗೆ ದೂರು ಕೊಟ್ಟಿದ್ದರು.

ಸರ್ಕಾರಕ್ಕೆ ಸೆಸ್‌ ಕಟ್ಟದೆ ತೆರಿಗೆ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸಾಮಗ್ರಿಗಳ ಖರೀದಿಗೆ ಕೊಟೇಷನ್‌ ಪಡೆಯದೆ ಅಕ್ರಮ ನಡೆಸಲಾಗಿದೆ. ಈ ಸಂಬಂಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ನಾರಾಯಣಸ್ವಾಮಿ ಅವರು ದೂರಿನಲ್ಲಿ ಮನವಿ ಮಾಡಿದ್ದರು.

ದೂರಿನ ಸಂಬಂಧ ಆರ್‌ಡಿಪಿಆರ್‌ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ನಾರಾಯಣಸ್ವಾಮಿ ಎಸಿಬಿಗೆ ದೂರು ಕೊಟ್ಟಿದ್ದರು. ಆದರೆ, ಎಸಿಬಿ ಹಂತದಲ್ಲೂ ತನಿಖೆ ವಿಳಂಬವಾಯಿತು. ಹೀಗಾಗಿ ಅವರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ತ್ವರಿತ ತನಿಖೆಗೆ ಕೋರಿಕೆ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣ ಸಂಬಂಧ ಶೀಘ್ರವೇ ತನಿಖೆ ನಡೆಸಿ 2 ತಿಂಗಳೊಳಗೆ ವರದಿ ನೀಡುವಂತೆ ಎಸಿಬಿ ಅಧಿಕಾರಿಗಳಿಗೆ ಆದೇಶಿಸಿತ್ತು.

ಈ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಪಿಡಿಒ ರಾಮಕೃಷ್ಣ ವಿರುದ್ಧ ಭ್ರಷ್ಟಾಚಾರ ಕಾಯ್ದೆ, ಐಪಿಸಿ ಸೆಕ್ಷನ್‌ 465, 466, 467, 468 ಮತ್ತು 471 ಅನ್ವಯ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮತ್ತೊಂದು ಪ್ರಕರಣ: ರಾಮಕೃಷ್ಣ ಅವರು ಈ ಹಿಂದೆ ಬಂಗಾರಪೇಟೆ ತಾಲ್ಲೂಕಿನ ಟಿ.ಗೊಲ್ಲಹಳ್ಳಿ ಗ್ರಾ.ಪಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ನಡೆದಿರುವ ₹ 1 ಕೋಟಿ ಅಕ್ರಮದ ಸಂಬಂಧ ನಾರಾಯಣಸ್ವಾಮಿ ಅವರು ಹೈಕೋರ್ಟ್‌ನಲ್ಲಿ ಹಿಂದೆಯೇ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ವಿಚಾರಣಾ ಹಂತದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.