ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಮಾರಿ ತಡೆಗೆ ಬೀಜೋಪಚಾರ ಮದ್ದು

‘ಪ್ರಜಾವಾಣಿ’ ಫೋನ್‌–ಇನ್‌ನಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಎಂ.ಗಾಯತ್ರಿ ಸಲಹೆ
Last Updated 19 ಡಿಸೆಂಬರ್ 2019, 13:42 IST
ಅಕ್ಷರ ಗಾತ್ರ

ಕೋಲಾರ: ‘ಆಲೂಗಡ್ಡೆ ಬೆಳೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಅಂಗಮಾರಿ ರೋಗ ಹತೋಟಿಗೆ ಬೀಜೋಪಚಾರವೇ ಮದ್ದು’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಎಂ.ಗಾಯತ್ರಿ ಸಲಹೆ ನೀಡಿದರು.

‘ಪ್ರಜಾವಾಣಿ’ಯ ಕೋಲಾರ ಜಿಲ್ಲಾ ಕೇಂದ್ರದ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಫೋನ್‌–ಇನ್‌ ಕಾರ್ಯಕ್ರಮಕ್ಕೆ ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ರೈತರು ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಳ್ಳಲು ಬೆಳಿಗ್ಗೆ 10 ಗಂಟೆಯಿಂದ 11ರವರೆಗೆ ಸಮಯ ನಿಗದಿಪಡಿಸಲಾಗಿತ್ತು.

ಆದರೆ, ನಿಗದಿತ ಅವಧಿಗೂ ಮುನ್ನವೇ ಕಚೇರಿಗೆ ರೈತರ ಕರೆಗಳು ಬರಲಾರಂಭಿಸಿದವು. ಸತತ ಒಂದು ತಾಸು ಕರೆಗಳು ರಿಂಗಣಿಸಿದವು. ಅವಧಿ ಮುಗಿದ ನಂತರವೂ ರೈತರು ಕರೆ ಮಾಡುತ್ತಿದ್ದರಿಂದ ಕಾರ್ಯಕ್ರಮವನ್ನು ಅರ್ಧ ತಾಸು ವಿಸ್ತರಿಸಲಾಯಿತು.

ಉಪ ನಿರ್ದೇಶಕಿ ಎಂ.ಗಾಯತ್ರಿ, ಶ್ರೀನಿವಾಸಪುರ ತಾಲ್ಲೂಕು ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದ ಉಪ ನಿರ್ದೇಶಕ ಎಚ್‌.ಟಿ.ಬಾಲಕೃಷ್ಣ, ಕೃಷಿ ವಿಜ್ಞಾನ ಕೇಂದ್ರದ ಸಸ್ಯ ರೋಗ ತಜ್ಞೆ ಡಿ.ಎಸ್‌.ಅಂಬಿಕಾ ಹಾಗೂ ತೋಟಗಾರಿಕೆ ವಿಜ್ಞಾನಿ ಕೆ.ಎಸ್.ನಾಗರಾಜ್‌ ಅವರು ರೈತರ ಅಹವಾಲು ಆಲಿಸಿದರು. ಬಿಡುವಿಲ್ಲದೆ ಕರೆ ಸ್ವೀಕರಿಸಿ ಸಮಸ್ಯೆಗೆ ಪರಿಹಾರ ಸೂಚಿಸಿದರು.

ಮಾವು, ಟೊಮೆಟೊ ಹಾಗೂ ಆಲೂಗಡ್ಡೆ ಬೆಳೆ ಸಂಬಂಧ ರೈತರು ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳು ನೀಡಿದ ಉತ್ತರ ಕೆಳಗಿನಂತಿದೆ.

* ಹನುಮಯ್ಯ, ವಕ್ಕಲೇರಿ, ಕೋಲಾರ ತಾಲ್ಲೂಕು: ನರೇಗಾ ಯೋಜನೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಸೌಲಭ್ಯವಿದೆಯೇ? ಪಾಲಿಹೌಸ್ ನಿರ್ಮಾಣಕ್ಕೆ ಅವಕಾಶ ಇದೆಯಾ?

–ನರೇಗಾ ಅಡಿ ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದಂತೆ 1.50 ಲಕ್ಷ ಮಾನವ ದಿನ ಸೃಜಿಸಲಾಗಿದೆ. ರೈತರು 700 ಎಕರೆಗೆ ನರೇಗಾ ಯೋಜನೆಯ ಅನುಕೂಲ ಪಡೆದಿದ್ದಾರೆ. ಮಾವು, ಸೀಬೆ, ಸಪೋಟ, ದಾಳಿಂಬೆ ಬೆಳೆಗೆ ಸಹಾಯಧನ ಕೊಡಲಾಗುತ್ತಿದೆ. ನರೇಗಾ ಸೌಲಭ್ಯಗಳ ಬಗ್ಗೆ ವ್ಯಾಪಕ ಪ್ರಚಾರ ನಡೆಸುತ್ತೇವೆ. ಗ್ರಾಮ ಸಭೆಗಳಲ್ಲಿ ಮಾಹಿತಿ ಕೊಡುತ್ತೇವೆ. ಪಾಲಿಹೌಸ್ ನಿರ್ಮಾಣಕ್ಕೆ ಅರ್ಜಿ ಕೊಟ್ಟರೆ ಆದ್ಯತೆ ಮೇರೆಗೆ ಸಹಾಯಧನ ಮಂಜೂರು ಮಾಡುತ್ತೇವೆ.

* ಕೆ.ಶ್ರೀನಿವಾಸಗೌಡ, ಹೊಸಮಟ್ನಹಳ್ಳಿ, ಕೋಲಾರ ತಾಲ್ಲೂಕು: ಅಧಿಕಾರಿಗಳು ಆಲೂಗಡ್ಡೆ ಬಿತ್ತನೆ ಬೀಜ ಖರೀದಿಗೆ ಸಹಾಯಧನ ಕೊಡಲು ಎಪಿಎಂಸಿಯ ಅಧಿಕೃತ ಬಿಲ್‌ ಕೇಳುತ್ತಾರೆ. ಎಪಿಎಂಸಿಯಲ್ಲಿ ಆಲೂಗಡ್ಡೆ ಬಿತ್ತನೆ ಬೀಜ ಮಾರಾಟಕ್ಕೆ ದಲ್ಲಾಳಿಗಳಿಗೆ ಅವಕಾಶ ನೀಡಲಾಗಿದೆ. ದಲ್ಲಾಳಿಗಳು ಕೊಡುವ ಬಿಲ್‌ನ ಪ್ರತಿಯನ್ನು ಅಧಿಕಾರಿಗಳು ಸ್ವೀಕರಿಸುತ್ತಿಲ್ಲ.

–ಎಪಿಎಂಸಿಯ ಅಧಿಕೃತ ಬಿಲ್‌ ಕೊಟ್ಟ ರೈತರಿಗೆ ಮಾತ್ರ ಸಹಾಯಧನ ಕೊಡಬೇಕೆಂದು ಅಧಿಕಾರಿಗಳು ತಪ್ಪಾಗಿ ಭಾವಿಸಿದ್ದರು. ವರ್ತಕರು ನೀಡಿದ ಬಿಲ್‌ ಸಹ ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ.

* ಜನಾರ್ದನ್‌, ತಿರುಮಲಹಳ್ಳಿ, ಕೆಜಿಎಫ್‌ ತಾಲ್ಲೂಕು: ಅಧಿಕಾರಿಗಳು ರಾಗಿ ಬೆಳೆ ನಷ್ಟದ ಸಮೀಕ್ಷೆ ಮಾಡಿ ದಾಖಲೆಪತ್ರ ಪಡೆದುಕೊಂಡು ಹೋಗಿದ್ದಾರೆ. ಆದರೆ, ಬೆಳೆ ಪರಿಹಾರ ಬಂದಿಲ್ಲ. ಹನಿ ನೀರಾವರಿ ಉಪಕರಣಗಳ ದರಪಟ್ಟಿ ನೀಡಲು ಅಂಗಡಿಯವರು ಕಮಿಷನ್‌ ಕೇಳುತ್ತಿದ್ದಾರೆ.

ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಬೆಳೆ ನಷ್ಟದ ಜಂಟಿ ಸಮೀಕ್ಷೆ ನಡೆಸಿ ತಹಶೀಲ್ದಾರ್‌ಗೆ ವರದಿ ಕೊಟ್ಟಿದ್ದಾರೆ. ಸದ್ಯದಲ್ಲೇ ಬೆಳೆ ಪರಿಹಾರ ಬಿಡುಗಡೆಯಾಗಲಿದೆ. ಬೆಳೆ ವಿವರ, ಪಹಣಿ ಪ್ರತಿ, ಮೂರ್ನಾಲ್ಕು ಏಜೆನ್ಸಿಗಳಿಂದ ಹನಿ ನೀರಾವರಿ ಉಪಕರಣಗಳ ದರಪಟ್ಟಿ ಪಡೆದು ಅರ್ಜಿ ಸಲ್ಲಿಸಬೇಕು. ನಂತರ ಆದ್ಯತೆ ಅನುಸಾರ ಸಹಾಯಧನ ಕೊಡುತ್ತೇವೆ.

* ರಮೇಶ್, ಡಿ.ಎನ್.ದೊಡ್ಡಿ, ಮಾಲೂರು ತಾಲ್ಲೂಕು: ಕಿಸಾನ್‌ ಸಮ್ಮಾನ್‌ ಯೋಜನೆಗೆ ಅರ್ಜಿ ಸಲ್ಲಿಸಿದ್ದೇನೆ. ಆದರೆ, ಸಹಾಯಧನ ಬಂದಿಲ್ಲ. ಯೋಜನೆ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಕೈಬಿಟ್ಟು ಹೋಗಿದೆ. ಪುನಃ ಹೆಸರು ಸೇರ್ಪಡೆಗೆ ಅವಕಾಶವಿದೆಯೇ?

ಎಲ್ಲಾ ಸಣ್ಣ ರೈತರ ವಿವರವನ್ನು ಕಿಸಾನ್ ಸಮ್ಮಾನ್‌ ಯೋಜನೆಗೆ ಸೇರ್ಪಡೆ ಮಾಡಲಾಗಿದೆ. ಮೊದಲ ಹಂತದಲ್ಲಿ ಶೇ 50ರಷ್ಟು ಮಂದಿಗೆ ಮಾತ್ರ ಸಹಾಯಧನ ಬಂದಿದೆ. ಉಳಿದ ರೈತರಿಗೆ ಹಂತ ಹಂತವಾಗಿ ಹಣ ಬರಲಿದೆ. ಪುನಃ ಹೆಸರು ಸೇರ್ಪಡೆಗೆ ಅವಕಾಶವಿಲ್ಲ.

* ಕೆ.ನಾರಾಯಣಗೌಡ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಉಪಾಧ್ಯಕ್ಷ: ಊಜಿ ನೊಣದ ಹಾವಳಿ ರೈತರ ನಿದ್ದೆಗೆಡ್ಡಿಸಿದೆ. ಊಜಿ ನೊಣದಿಂದ ಶೇ 90ರಷ್ಟು ಬೆಳೆ ನಾಶವಾಗಿವೆ. ಮೋಹಕ ಬಲೆ ಬಳಸಿದರೂ ಊಜಿ ನೊಣ ನಿಯಂತ್ರಣಕ್ಕೆ ಬರುತ್ತಿಲ್ಲ.

10 ದಿನಗಳಿಂದ ಮೋಡ ಮುಸುಕಿದ ವಾತಾವರಣ ಮತ್ತು ತುಂತುರು ಮಳೆ ಇರುವುದರಿಂದ ಊಜಿ ನೊಣದ ಹಾವಳಿ ಹೆಚ್ಚಿದೆ. ಊಜಿ ನೊಣ ಹತೋಟಿಗೆ ಫೆರೋಮೊನ್ ಲ್ಯೂರ್‌ ಮೋಹಕ ಬಲೆ ಬಳಸಬೇಕು. ಹಳದಿ ಅಂಟು ಹಾಳೆ ಅಥವಾ ಬಲೆಗಳನ್ನು ಒಂದು ಎಕರೆಗೆ 6ರಂತೆ ಬಳಸಬೇಕು. ಒಂದು ಬಲೆಗೆ ₹ 80 ಇದೆ.

* ಆರ್‌.ಚೌಡರೆಡ್ಡಿ, ಪಣಸಮಾಕನಹಳ್ಳಿ, ಶ್ರೀನಿವಾಸಪುರ ತಾಲ್ಲೂಕು: ಬಾದಾಮಿ ಮಾವಿನ ಮರದ ಕೊಂಬೆ ತೆಗೆದು ತೋತಾಪುರಿ ತಳಿ ಕಸಿ ಮಾಡಿದ್ದೇವೆ. ಆದರೆ, ಕಸಿ (ಬುಡದ ಬಳಿ) ಜಾಗದಲ್ಲೇ ಹುಳು ಕಾಣಿಸಿಕೊಂಡಿದೆ. ಕಾಂಡ ಕೊರಕ ಕೀಟನಾಶಕ ಸಿಂಪಡಿಸಿದರೂ ಹುಳು ಹತೋಟಿಗೆ ಬಂದಿಲ್ಲ.

–ಹೊಸ ಚಿಗುರಿನ ಕಾರಣಕ್ಕೆ ಹುಳುಬಾಧೆ ಕಾಣಿಸಿಕೊಂಡಿದೆ. ಲ್ಯಾಮ್ಡಾ ಸೈಹ್ಯಾಲೋತ್ರಿನ್‌ ಕೀಟನಾಶಕ ಸಿಂಪಡಿಸಬೇಕು. ಸಿಬ್ಬಂದಿಯೊಂದಿಗೆ ತೋಪಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಿ ಮಾರ್ಗದರ್ಶನ ನೀಡುತ್ತೇವೆ.

* ಪದ್ಮನಾಭ್‌, ಬಂಗಾರಪೇಟೆ ತಾಲ್ಲೂಕು: ಟ್ರ್ಯಾಕ್ಟರ್‌ ಖರೀದಿಸುವಂತೆ ಅಧಿಕಾರಿಗಳು ಉತ್ತೇಜಿಸಿದ್ದರು. ಸಹಾಯಧನ ಕೊಡುವುದಾಗಿ ಭರವಸೆ ಕೊಟ್ಟಿದ್ದರು. ಬಡ್ಡಿ ಸಾಲ ಮಾಡಿ ಟ್ರ್ಯಾಕ್ಟರ್‌ ಖರೀದಿಸಿದ್ದೇನೆ. ಬೆಳೆ ದೃಢೀಕರಣ ಪತ್ರ ಮತ್ತು ಪಹಣಿ ಕೊಟ್ಟು ವರ್ಷವಾದರೂ ಸಹಾಯಧನ ಬಂದಿಲ್ಲ.

–ಪಹಣಿಯಲ್ಲಿ ತೋಟಗಾರಿಕೆ ಬೆಳೆ ವಿವರ ನಮೂದಾಗಿದ್ದರೆ ದೃಢೀಕರಣ ಪತ್ರ ಸಲ್ಲಿಸುವ ಅಗತ್ಯವಿಲ್ಲ. ಈ ಬಗ್ಗೆ ಸಿಬ್ಬಂದಿಗೆ ಮಾಹಿತಿ ಕೊಡುತ್ತೇವೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆ ಅನುದಾನ ಬಿಡುಗಡೆಯಾಗದ ಕಾರಣ ಸಹಾಯಧನ ವಿಳಂಬವಾಗಿದೆ. ಒಂದು ವಾರದಲ್ಲಿ ಅನುದಾನ ಬಿಡುಗಡೆಯಾಗಲಿದ್ದು, ಶೀಘ್ರವೇ ಸಹಾಯಧನ ಕೊಡುತ್ತೇವೆ.

* ಅನುಶ್ರೀ, ಮಾಲೂರು: ಬರಪೀಡಿತ ಕೋಲಾರ ಜಿಲ್ಲೆಗೆ ಕೃಷಿ ಹೊಂಡಗಳ ಅಗತ್ಯವಿದೆ. ಆದರೆ, ಸರ್ಕಾರ ಕೃಷಿ ಹೊಂಡ ಹಂಚಿಕೆ ನಿಲ್ಲಿಸಿದೆ. ಕೃಷಿ ಹೊಂಡ ಯೋಜನೆ ಪುನರಾರಂಭಿಸಬೇಕು.

ಕೃಷಿ ಹೊಂಡಗಳು ಜಿಲ್ಲೆಯ ರೈತರಿಗೆ ವರದಾನವಾಗಿವೆ. ಆದರೆ, ಕಾರಣಾಂತರದಿಂದ ಸರ್ಕಾರ ಕೃಷಿ ಹೊಂಡ ಯೋಜನೆ ಸ್ಥಗಿತಗೊಳಿಸಿದೆ. ಜಿಲ್ಲೆಯಲ್ಲಿ ಕೃಷಿ ಹೊಂಡಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಈ ಸಂಗತಿಯನ್ನು ಸರ್ಕಾರದ ಗಮನಕ್ಕೆ ತರುತ್ತೇವೆ.

* ಮಲ್ಲಪ್ಪ, ತಳ್ಳೂರು ಗ್ರಾಮ, ಬಂಗಾರಪೇಟೆ ತಾಲ್ಲೂಕು: ಮನೆ ಕಟ್ಟಲು ಮತ್ತು ಟೊಮೆಟೊ ಬೆಳೆಗೆ ನೀಲಗಿರಿ ಮರದ ಕಡ್ಡಿಗಳು ಅಗತ್ಯ. ಆದರೆ, ನೀಲಗಿರಿ ತೆಗೆಯುವಂತೆ ಸರ್ಕಾರ ಆದೇಶ ಮಾಡಿರುವುದರಿಂದ ಸಮಸ್ಯೆಯಾಗಿದೆ.

ಟೊಮೆಟೊ ಬೆಳೆಗೆ ಅಗತ್ಯವಿರುವ ಕಡ್ಡಿಗಾಗಿಯೇ ಜಿಲ್ಲೆಯಲ್ಲಿ ಹೆಚ್ಚಾಗಿ ನೀಲಗಿರಿ ಬೆಳೆಯಲಾಗಿದೆ. ಆದರೆ, ನೀಲಗಿರಿಯು ಅಂತರ್ಜಲಕ್ಕೆ ಮಾರಕ. ಆದ ಕಾರಣ ಬೇರೆಡೆ ಕಡ್ಡಿ ಖರೀದಿಸಬೇಕು ಅಥವಾ ಬಿದಿರು ಕಡ್ಡಿ ಬಳಸಬಹುದು. ನೀಲಗಿರಿ ಬದಲು ಹಣ್ಣಿನ ಬೆಳೆ ಬೆಳೆಯಬಹುದು.

* ಚಿನ್ನಪ್ಪ, ಸೊಣ್ಣವಾಡಿ, ಮುಳಬಾಗಿಲು ತಾಲ್ಲೂಕು: 3 ಎಕರೆಯಲ್ಲಿ ಮಾವು ಹಾಕಿದ್ದೇನೆ. ಇಳುವರಿ ಕಡಿಮೆಯಾಗಿದೆ ಹಾಗೂ ಹಿಂದಿನ ವರ್ಷ ಉತ್ತಮ ಬೆಲೆ ಸಿಗಲಿಲ್ಲ.

–ಮಾವು ಅಭಿವೃದ್ಧಿ ಕೇಂದ್ರದಲ್ಲಿ ರೈತರಿಗೆ ಪ್ರತಿ ತಿಂಗಳು 2 ಬಾರಿ ತರಬೇತಿ ನೀಡಲಾಗುತ್ತದೆ. ಆರಂಭಿಕ ಹಂತದಿಂದ ಕೊಯ್ಲಿನವರೆಗೆ ಸಂಪೂಣ ಮಾಹಿತಿ ಕೊಡುತ್ತೇವೆ. ಮಾರುಕಟ್ಟೆ ವ್ಯವಸ್ಥೆ ಬಗ್ಗೆಯೂ ಅರಿವು ಮೂಡಿಸುತ್ತೇವೆ.

* ಹರಿಕುಮಾರ್‌, ಕೆಜಿಎಫ್‌: ಆಲೂಗಡ್ಡೆ ಬೆಳೆಯಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡಿದೆ. ರಾತ್ರೋರಾತ್ರಿ ಬೆಳೆ ನಾಶವಾಗುತ್ತಿದೆ. ಅಂಗಮಾರಿ ನಿಯಂತ್ರಣಕ್ಕೆ ಏನು ಮಾಡಬೇಕು?

ಮಳೆ ಹಾಗೂ ತಂಪು ವಾತಾವರಣದ ಕಾರಣಕ್ಕೆ ಶಿಲೀಂಧ್ರ ಬೆಳವಣಿಗೆ ಹೆಚ್ಚಿದೆ. ಒಂದೇ ಜಮೀನಿನಲ್ಲಿ ಟೊಮೆಟೊ, ಆಲೂಗಡ್ಡೆ, ಬದನೆಕಾಯಿ, ಕ್ಯಾಪ್ಸಿಕಂ ಬೆಳೆಯನ್ನು ಪದೇಪದೇ ಬೆಳೆಯಬಾರದು. ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಕೀಟನಾಶಕ ಸಿಂಪಡಿಸಿ. ರೋಗ ಬಂದ ನಂತರ ಹತೋಟಿಗೆ ಮುಂದಾಗುವ ಬದಲು ಮೊದಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಬೆಳೆ ಪರಿವರ್ತನೆ ಮಾಡಿ ಆಲೂಗಡ್ಡೆ ಬೆಳೆಯಬೇಕು.

* ರಾಜರೆಡ್ಡಿ, ದಿಗುವಪಲ್ಲಿ, ಶ್ರೀನಿವಾಸಪುರ ತಾಲ್ಲೂಕು: ರಾಗಿಗೆ ಬೆಳೆ ವಿಮೆ ಮಾಡಿಸಿದ್ದೆ. ಬೆಳೆ ನಷ್ಟವಾಗಿ ಒಂದು ವರ್ಷ ಕಳೆದರೂ ಬೆಳೆ ಪರಿಹಾರ ಬಂದಿಲ್ಲ.

–ಬೆಳೆ ವಿಮೆ ಪರಿಹಾರ ಹಂತ ಹಂತವಾಗಿ ಬಿಡುಗಡೆಯಾಗುತ್ತಿದೆ. ಗ್ರಾಮ ಪಂಚಾಯಿತಿವಾರು ಸಲ್ಲಿಕೆಯಾಗಿರುವ ಬೆಳೆ ನಷ್ಟದ ವರದಿ ಆಧರಿಸಿ ಪರಿಹಾರಧನ ಬಿಡುಗಡೆ ಮಾಡಲಾಗುತ್ತದೆ.

* ಕೆ.ವೈ.ಗಣೇಶ್‌ಗೌಡ, ಕೋಟಿಗಾನಹಳ್ಳಿ, ಕೋಲಾರ ತಾಲ್ಲೂಕು: ನೀಲಗಿರಿ ತೆಗೆದು ಪರ್ಯಾಯವಾಗಿ ೧೧೦ ಸೀಬೆ ಗಿಡ ನಾಟಿ ಮಾಡಿದ್ದೇನೆ. ನರೇಗಾ ಸೌಲಭ್ಯ ಕಲ್ಪಿಸಬೇಕು.

ಸೀಬೆ ಬೆಳೆಗೆ ನರೇಗಾ ಸೌಕರ್ಯ ಪಡೆಯಲು ಹುತ್ತೂರು ಹೋಬಳಿ ರೈತ ಸಂಪರ್ಕ ಅಧಿಕಾರಿಯನ್ನು ಸಂಪರ್ಕಿಸಿ. ಸೌಕರ್ಯದ ಜತೆಗೆ ಮಾಹಿತಿ ಕೊಡುವಂತೆ ಸೂಚಿಸುತ್ತೇನೆ. ಇಳುವರಿ ಉತ್ತಮವಾಗಿ ಬಂದರೆ ನಿಮ್ಮ ತೋಟದಲ್ಲೇ ಕ್ಷೇತ್ರೋತ್ಸವ ನಡೆಸುತ್ತೇವೆ.

* ಎ.ನಳಿನಿ, ಕೋಲಾರ: ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟ ದಂಧೆ ವ್ಯಾಪಕವಾಗಿದೆ. ಇದರಿಂದ ರೈತರಿಗೆ ವಂಚನೆಯಾಗುತ್ತಿದ್ದು, ಅಕ್ರಮಕ್ಕೆ ಕಡಿವಾಣ ಹಾಕಬೇಕು.

ಕಳಪೆ ಬಿತ್ತನೆ ಬೀಜ ಮತ್ತು ಕೀಟನಾಶಕ ಮಾರಾಟದ ಬಗ್ಗೆ ತೀವ್ರ ನಿಗಾ ವಹಿಸಿದ್ದೇವೆ. ಅಂತಹ ಅಂಗಡಿಗಳ ಬಗ್ಗೆ ರೈತರು ಮಾಹಿತಿ ಕೊಟ್ಟರೆ ತಪ್ಪಿತಸ್ಥರ ವಿರುದ್ಧ ಖಂಡಿತ ಶಿಸ್ತುಕ್ರಮ ಜರುಗಿಸುತ್ತೇವೆ. ಅಂಗಡಿ ಹಾಗೂ ನರ್ಸರಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ವಾಣಿಜ್ಯ ಪರವಾನಗಿ ರದ್ದುಪಡಿಸುತ್ತೇವೆ.

* ಚಿನ್ನಪ್ಪರೆಡ್ಡಿ, ಶ್ರೀನಿವಾಸಪುರ ಮಾವು ಬೆಳೆಗಾರರ ಸಂಘದ ಅಧ್ಯಕ್ಷ: ಹವಾಮಾನ ವೈಪರಿತ್ಯದಿಂದ ಮಾವಿನ ಗಿಡ ಹೂವು ಬಿಡುತ್ತಿಲ್ಲ. ಇದಕ್ಕೆ ಪರಿಹಾರವೇನು. ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕ ಆರಂಭಿಸಬೇಕು. ಮಾವು ಬೆಲೆ ಕುಸಿದಾಗ ಬೆಂಬಲ ಬೆಲೆ ಘೋಷಿಸಬೇಕು.

ಸದ್ಯ ವಾತಾವರಣ ತಂಪಾಗಿರುವುದರಿಂದ ಈ ಹಂತದಲ್ಲಿ ಮಾವಿಗೆ ಯಾವುದೇ ಔಷಧ ಶಿಫಾರಸ್ಸು ಮಾಡುವುದಿಲ್ಲ. ಜನವರಿ ತಿಂಗಳಲ್ಲಿ ಔಷಧ ಸಿಂಪಡಿಸುವುದು ಸೂಕ್ತ. ಸಫಲ್ ಸೇರಿದಂತೆ ಹಲವು ಕಂಪನಿಯವರು ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪಿಸಲು ಆಸಕ್ತಿ ತೋರಿದ್ದಾರೆ. ಮುಳಬಾಗಿಲು ಮತ್ತು ಶ್ರೀನಿವಾಸಪುರದಲ್ಲಿ ಘಟಕ ಆರಂಭಕ್ಕೆ ಪ್ರಯತ್ನ ನಡೆದಿದೆ. ಈ ಬಾರಿ ಮಾವು ಫಸಲು ಹೆಚ್ಚುವ ನಿರೀಕ್ಷೆಯಿದ್ದು, ಮಾರುಕಟ್ಟೆದಾರರನ್ನು ಸಂಪರ್ಕಿಸಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT