ಭಾನುವಾರ, ಸೆಪ್ಟೆಂಬರ್ 19, 2021
27 °C
ದೆಹಲಿಗೆ ನಿಯೋಗ ಹೋಗಲಿ: ಒತ್ತಾಯ

ಪರಿಹಾರ ಬಿಡುಗಡೆಗೆ ಕೇಂದ್ರದ ನಿರ್ಲಕ್ಷ್ಯ: ಮಾಜಿ ಸಂಸದ ಮುನಿಯಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರಾಜ್ಯದಲ್ಲಿ ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದ ಆಗಿರುವ ಹಾನಿಗೆ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿದೆ’ ಎಂದು ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ದೂರಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೇಂದ್ರಕ್ಕೆ ಅತಿವೃಷ್ಠಿ ಹಾಗೂ ಅನಾವೃಷ್ಟಿಯ ನಷ್ಟದ ವಸ್ತುಸ್ಥಿತಿ ತಿಳಿಸಿ ಪರಿಹಾರಧನ ಬಿಡುಗಡೆಗೆ ಒತ್ತಡ ಹೇರಲು ಪ್ರಧಾನಿ ನರೇಂದ್ರ ಮೋದಿ ಬಳಿಗೆ ರಾಜ್ಯದ ಎಲ್ಲಾ ಸಂಸದರು ಮತ್ತು ರಾಜ್ಯಸಭಾ ಸದಸ್ಯರ ಕರೆದೊಯ್ಯಬೇಕು’ ಎಂದು ಒತ್ತಾಯಿಸಿದರು.

‘ನೈಸರ್ಗಿಕ ವಿಕೋಪದಿಂದ ರಾಜ್ಯದಲ್ಲಿ ಹಿಂದೆಂದೂ ಕಾಣದಷ್ಟು ಪ್ರಾಣ, ಆಸ್ತಿ ಹಾಗೂ ಬೆಳೆ ಹಾನಿಯಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಮನಮೋಹನ್‌ಸಿಂಗ್‌ ವೈಮಾನಿಕ ಸಮೀಕ್ಷೆ ನಡೆಸಿ ಸ್ಥಳದಲ್ಲೇ ಪರಿಹಾರ ಬಿಡುಗಡೆ ಮಾಡಿದ್ದರು. ಆದರೆ, ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿದ್ದರೂ ಹಾನಿ ಕುರಿತು ತುಟಿ ಬಿಚ್ಚದಿರುವುದು ದುರಂತ’ ಎಂದು ಟೀಕಿಸಿದರು.

‘ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮೋದಿಯವರು ಸಭೆ ನಡೆಸುವ ಕನಿಷ್ಠ ಸೌಜನ್ಯ ಸಹ ತೋರಿಲ್ಲ. ಪ್ರವಾಹಪೀಡಿತ ಪ್ರದೇಶದಲ್ಲಿನ ಪರಿಹಾರ ಕಾರ್ಯ ಚಟುವಟಿಕೆಗಳಿಗೆ ಕೇಂದ್ರವು ಈವರೆಗೆ ಬಿಡಿಗಾಸು ಬಿಡುಗಡೆ ಮಾಡಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ರಾಜ್ಯದ 10 ಜಿಲ್ಲೆಗಳಲ್ಲಿ ಅತಿವೃಷ್ಠಿಯಿಂದ ಮತ್ತು 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅನಾವೃಷ್ಠಿಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೆರೆ ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಸಂಗತಿಯನ್ನು ಪ್ರಧಾನ ಮಂತ್ರಿಯವರಿಗೆ ಮನವರಿಕೆ ಮಾಡಿಕೊಡಲು ದೆಹಲಿಗೆ ಸಂಸದರ ಮತ್ತು ರಾಜ್ಯಸಭಾ ಸದಸ್ಯರ ನಿಯೋಗ ಹೋಗಬೇಕು. ಈ ಸಂಬಂಧ ಕಾಂಗ್ರೆಸ್ ಸಂಸದರೊಂದಿಗೆ ಮಾತನಾಡುತ್ತೇನೆ’ ಎಂದು ವಿವರಿಸಿದರು.

ಖಂಡಿಸುತ್ತೇನೆ: ‘ವಿದ್ಯುತ್‌ ಕಳವು ಪ್ರಕರಣದಲ್ಲಿ ಕೆಲ ಸುದ್ದಿವಾಹಿನಿಗಳು ನನ್ನ ಪತ್ನಿಯ ಹೆಸರು ಪ್ರಸ್ತಾಪಿಸಿ ಅಪಪ್ರಚಾರ ಮಾಡಿವೆ. ಇದನ್ನು ಖಂಡಿಸುತ್ತೇನೆ. ಬೆಂಗಳೂರಿನ ಸಂಜಯನಗರದಲ್ಲಿನ ನಮ್ಮ ಕಟ್ಟಡವನ್ನು ಬಾಡಿಗೆಗೆ ಕೊಟ್ಟಿದ್ದು, ವಿದ್ಯುತ್ ಶುಲ್ಕ ಪಾವತಿಸುವುದು ಬಾಡಿಗೆದಾರರ ಜವಾಬ್ದಾರಿ. ಬಾಡಿಗೆದಾರರು ವಿದ್ಯುತ್‌ ಶುಲ್ಕ ಬಾಕಿ ಉಳಿಸಿಕೊಂಡಿರುವುದಕ್ಕೆ ಮಾಲೀಕರು ಹೇಗೆ ಜವಾಬ್ದಾರ ಆಗುತ್ತಾರೆಂಬ ಕನಿಷ್ಠ ಪರಿಜ್ಞಾನವಿಲ್ಲದೆ ಸುದ್ದಿವಾಹಿನಿಗಳು ನನ್ನ ಪತ್ನಿ ಹೆಸರನ್ನು ಪ್ರಕರಣದಲ್ಲಿ ಎಳೆದು ತಂದಿರುವುದು ಸರಿಯಲ್ಲ’ ಎಂದು ಕಿಡಿಕಾರಿದರು.

ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಬಿಸೇಗೌಡ, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅತಾವುಲ್ಲಾ ಖಾನ್‌, ಜಿಲ್ಲಾ ಕಾಂಗ್ರೆಸ್‌ ಘಟಕದ ಉಪಾಧ್ಯಕ್ಷ ಮುರಳಿಗೌಡ, ಮಹಿಳಾ ಘಟಕದ ಅಧ್ಯಕ್ಷೆ ವಸಂತಕವಿತಾ, ನಗರಸಭೆ ಮಾಜಿ ಸದಸ್ಯರಾದ ಪ್ರಸಾದ್‌ ಬಾಬು, ಶ್ರೀನಿವಾಸ್, ವೇಮಗಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಉದಯ್‌ಶಂಕರ್‌, ಆವಣಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆನಂದರೆಡ್ಡಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು