ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗತಿಪರ ರೈತರ ಜಮೀನಿಗೆ ಸಿಇಒ ಭೇಟಿ

Last Updated 6 ಜೂನ್ 2020, 15:43 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಪಾರ್ಶ್ವಗಾನಹಳ್ಳಿಯಲ್ಲಿ ಗ್ರಾಮದ ಚರಂಡಿ ನೀರು ಬಳಸಿಕೊಂಡು ರೇಷ್ಮೆ ಕೃಷಿ ಮಾಡುತ್ತಿರುವ ಪ್ರಗತಿಪರ ರೈತ ನಾರಾಯಣಪ್ಪ ಅವರ ಜಮೀನಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್‌.ವಿ.ದರ್ಶನ್‌ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಗ್ರಾಮದ ಕೊಳಚೆ ನೀರು ಚರಂಡಿಯಲ್ಲಿ ಹರಿದು ಹೋಗುತ್ತಿದೆ. ಈ ಕೊಳಚೆ ನೀರು ಮನೆಯ ಸಮೀಪ ನಿಂತು ದುರ್ವಾಸನೆ ಬೀರುತ್ತಿತ್ತು. ಜತೆಗೆ ಸೊಳ್ಳೆ ಕಾಟ ಹೆಚ್ಚಿತ್ತು. ಈ ಸಮಸ್ಯೆ ಪರಿಹಾರಕ್ಕಾಗಿ ನೀರನ್ನು ನನ್ನ ಜಮೀನಿಗೆ ಪಂಪ್‌ ಮಾಡಿ ಹನಿ ನೀರಾವರಿ ಮೂಲಕ ಹಿಪ್ಪುನೇರಳೆ ಗಿಡಗಳಿಗೆ ಹಾಯಿಸುತ್ತಿದ್ದೇನೆ’ ಎಂದು ರೈತ ನಾರಾಯಣಪ್ಪ ಸಿಇಒಗೆ ಮಾಹಿತಿ ನೀಡಿದರು.

‘5 ಎಕರೆಯಲ್ಲಿನ ಹಿಪ್ಪುನೇರಳೆ ಗಿಡಗಳು ಸೊಂಪಾಗಿ ಬೆಳೆದಿವೆ. 250 ಮೊಟ್ಟೆ ಹುಳು ಮೇಯಿಸುವ ಮೂಲಕ ಆರ್ಥಿಕ ಸದೃಢತೆ ಸಾಧಿಸಿದ್ದೇನೆ. ಗ್ರಾಮದ ಚರಂಡಿ ನೀರು ನನಗೆ ವರದಾನವಾಗಿದೆ’ ಎಂದು ತಿಳಿಸಿದರು.

ರೈತ ನಾರಾಯಣಪ್ಪ ಅವರನ್ನು ಅಭಿನಂದಿಸಿದ ಸಿಇಒ, ‘ಚರಂಡಿಯ ತ್ಯಾಜ್ಯ ನೀರಿನ ಸಮರ್ಪಕ ಬಳಕೆ ಮುಂದುವರಿಸುವ ಜತೆಗೆ ಇತರೆ ರೈತರಿಗೂ ಮಾರ್ಗದರ್ಶನ ಮಾಡಿ’ ಎಂದು ಸಲಹೆ ನೀಡಿದರು.

ಪ್ರಶಸ್ತಿ ಗೌರವ: ‘ನಾರಾಯಣಪ್ಪ ತಮ್ಮ ಜಮೀನಿನಲ್ಲಿ ಕೊರೆಸಿದ್ದ 9 ಕೊಳವೆ ಬಾವಿಗಳಲ್ಲಿ ನೀರು ಬತ್ತಿತ್ತು. ಇದರಿಂದ ಸಾಲದ ಹೊರೆ ಹೆಚ್ಚಿ ಗ್ರಾಮದ ಬಸ್ ನಿಲ್ದಾಣದ ಬಳಿ ಟೀ ಹೋಟೆಲ್ ಆರಂಭಿಸಿದರು. ಆದರೂ ಛಲ ಬಿಡದೆ ಕೃಷಿ ಮುಂದುವರಿಸಿ ಬದುಕು ಕಟ್ಟಿಕೊಂಡಿದ್ದಾರೆ’ ಎಂದು ಮುದುವತ್ತಿ ಗ್ರಾ.ಪಂ ಪಿಡಿಒ ಮಹೇಶ್‌ಕುಮಾರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

‘ಮರ ಕಡ್ಡಿ ಮಾದರಿಯಲ್ಲಿ ಹಿಪ್ಪುನೇರಳೆ ಬೆಳೆಯುತ್ತಿರುವ ನಾರಾಯಣಪ್ಪ ಅವರಿಗೆ ರಾಜ್ಯ ಸರ್ಕಾರವು ₹ 20 ಸಾವಿರ ಮೊತ್ತದ ಪ್ರಶಸ್ತಿ ನೀಡಿ ಪ್ರಗತಿಪರ ರೇಷ್ಮೆ ಕೃಷಿಕರೆಂದು ಗೌರವಿಸಿದೆ. ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಾಗಾರದಲ್ಲೂ ನಾರಾಯಣಪ್ಪರ ಸಾಹಸಗಾಥೆ ಬಗ್ಗೆ ಚರ್ಚೆಯಾಗಿದೆ’ ಎಂದು ಮಾಹಿತಿ ನೀಡಿದರು.

ರೇಷ್ಮೆ ಇಲಾಖೆ ಉಪ ನಿರ್ದೇಶಕ ಪ್ರಭಾಕರ್‌, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಬಾಬು, ಗ್ರಾಪಂ ಅಧ್ಯಕ್ಷೆ ನೀಲಮ್ಮ, ಸದಸ್ಯೆ ಸವಿತಾ, ಕಾರ್ಯದರ್ಶಿ ಕರಿಬಸಪ್ಪ, ಎಸ್‌ಡಿಎ ಚಿಕ್ಕಮುನಿಯಮ್ಮ, ಕರ ಸಂಗ್ರಹಗಾರ ರಾಜೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT