ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುಳ್ಳು ಸುದ್ದಿ ಹರಡಿದ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿ: ಛಲವಾದಿ ನಾರಾಯಣಸ್ವಾಮಿ

Published 23 ಜೂನ್ 2023, 13:09 IST
Last Updated 23 ಜೂನ್ 2023, 13:09 IST
ಅಕ್ಷರ ಗಾತ್ರ

ಕೋಲಾರ: ‘ಸುಳ್ಳು ಸುದ್ದಿ, ಫೇಕ್‌ ನ್ಯೂಸ್‌ ಹರಡುವವರ ಮೇಲೆ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಪೇಸಿಎಂ, ಶೇ 40 ಕಮಿಷನ್‌ ಸರ್ಕಾರ ಎಂದು ಸುಳ್ಳು ಸುದ್ದಿ ಹರಡಿದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ವಿರುದ್ಧವೇ ಮೊದ‌ಲು ಪ್ರಕರಣ ದಾಖಲಿಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸರ್ಕಾರ ಬಂದ 24 ಗಂಟೆಗಳಲ್ಲಿ ಗ್ಯಾರಂಟಿ ಜಾರಿ ಮಾಡುವುದಾಗಿ ಘೋಷಿಸಿದ್ದರು. ಅದೀಗ ಸುಳ್ಳಾಗಿಲ್ಲವೇ? ಪೇಸಿಎಂ, ಶೇ 40 ಕಮಿಷನ್‌ ಆರೋಪವನ್ನು ಸಾಬೀತು ಮಾಡಿದ್ದಾರೆಯೇ? ಸುಳ್ಳು ಹೇಳಿರುವ ಇವರ ಮೇಲೆ ಏಕೆ ಕ್ರಮ ಜರುಗಿಸಬಾರದು’ ಎಂದು ಪ್ರಶ್ನಿಸಿದರು.

‘ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡುವುದಾಗಿ ಚುನಾವಣಾ ಪ್ರಚಾರದಲ್ಲಿ ಹೇಳಿದ್ದ ಸಿದ್ದರಾಮಯ್ಯ ಈಗ ಜಾಣ ಕಿವುಡತನ ಪ್ರದರ್ಶಿಸುತ್ತಿದ್ದಾರೆ. ಇತ್ತ ಮಹಿಳೆಯರು ಬೀದಿಗಿಳಿದಿದ್ದಾರೆ’ ಎಂದರು.

‘ಕಾಂಗ್ರೆಸ್‌ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ. ಈ ವಿಚಾರ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಅವರೇ ಕಲೆಕ್ಷನ್ ಮಾಡಲು ಸೂಚಿಸಿದ್ದಾರೆ. ಹಸಿದಿದ್ದ ಕಾಂಗ್ರೆಸ್‌ನವರು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಬಿಜೆಪಿ ಸರ್ಕಾರದ ಕಾಮಗಾರಿ ನಿಲ್ಲಿಸಿದ್ದಾರೆ. ಸಚಿವರು ಅಂಗಡಿ ತೆಗೆದು ವ್ಯಾಪಾರ ಮಾಡುತ್ತಿದ್ದಾರೆ. ಅವರೆಲ್ಲಾ ಈಗ ಎಷ್ಟು ಪರ್ಸೆಂಟೇಜ್ ಪಡೆಯುತ್ತಿದ್ದಾರೆ ಎಂಬುದನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೇ ಹೇಳಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯವನ್ನು ಎಟಿಎಂ ಮಾಡಿಕೊಂಡಿರುವ ಕಾಂಗ್ರೆಸ್‌ ಹೈಕಮಾಂಡ್‌, ಹಣ ಪಡೆಯಲು ವಾರಕ್ಕೊಮ್ಮೆ ಸುರ್ಜೇವಾಲಾ ಅವರನ್ನು ಕಳುಹಿಸುತ್ತಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್ ಸರ್ಕಾರ ಬಂದಿರುವುದು ಜನರಿಗೆ ಅನುಕೂಲ ಮಾಡಲು ಅಲ್ಲ; ಬದಲಾಗಿ ಅವರಿಂದ ದೋಚಲು. ಕಾಂಗ್ರೆಸ್‌ ಪಕ್ಷವೇ ಸುಳ್ಳಿನ ಹಾಗೂ ವಂಚಕರ ಸಂತೆ. ಹೀಗೆ, ಮುಂದುವರಿದರೆ ಇನ್ನೊಂದು ತಿಂಗಳಲ್ಲಿ ಮಹಿಳೆಯರು ಪೊರಕೆ ಹಿಡಿದು ಬೀದಿಗಿಳಿಯಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT