ಸವರ್ಣೀಯರ ದಬ್ಬಾಳಿಕೆ ಕೊನೆಗೊಳ್ಳಲಿ

7
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವ್‌ಕುಮಾರ್‌ ಹೇಳಿಕೆ

ಸವರ್ಣೀಯರ ದಬ್ಬಾಳಿಕೆ ಕೊನೆಗೊಳ್ಳಲಿ

Published:
Updated:
Prajavani

ಮಾಲೂರು: ‘ದಲಿತರನ್ನು ಬೇರೆಯಾಗಿ ನೋಡುವುದು, ಸವರ್ಣೀಯರೆಂದು ದಬ್ಬಾಳಿಕೆ ನಡೆಸುವುದು ಕೊನೆಗೊಳ್ಳಬೇಕು. ಇದು ಸಾಧ್ಯವಾಗದಿದ್ದರೆ ಕಾನೂನಾತ್ಮಕವಾಗಿ ಅಸ್ಪೃಶ್ಯತೆ ನಿರ್ಮೂಲನೆ ಮಾಡುತ್ತೇವೆ’ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವ್‌ಕುಮಾರ್‌ ತಾಲ್ಲೂಕಿನ ಚನ್ನಕಲ್‌ ಗ್ರಾಮದ ಸವರ್ಣೀಯರಿಗೆ ಎಚ್ಚರಿಕೆ ನೀಡಿದರು.

‘ಪ್ರಜಾವಾಣಿ’ ಪತ್ರಿಕೆಯಲ್ಲಿ ಜ.20ರಂದು ಪ್ರಕಟವಾಗಿದ್ದ ವರದಿ ಆಧರಿಸಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿ, ‘ಗ್ರಾಮದಲ್ಲಿ ಅಸ್ಪೃಶ್ಯತೆಯಂತಹ ಅನಿಷ್ಟ ಪದ್ಧತಿ ಮುಂದುವರಿಯಬಾರದು. ಪರಸ್ಪರ ಮಾತುಕತೆ ಮೂಲಕ ದಲಿತರು ಮತ್ತು ಸವರ್ಣೀಯರ ಮನಸ್ಸುಗಳನ್ನು ಬೆಸೆಯುತ್ತೇವೆ’ ಎಂದರು.

‘ಜಾತಿಯು ಮನೆಗೆ ಸೀಮಿತವಾಗಿರಲಿ, ಅದರ ಬಾಹ್ಯ ಆಚರಣೆ ಬೇಡ. ಜಾತಿ ಪದ್ಧತಿಯ ಬಾಹ್ಯ ಆಚರಣೆಯಿಂದಲೇ ಈ ರೀತಿ ಸಮಸ್ಯೆಯಾಗಿದೆ. ಇದನ್ನು ನಿವಾರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಸಮಸ್ಯೆ ಖಂಡಿತ ಬಗೆಹರಿಯುತ್ತದೆ. ನಮ್ಮ ಪ್ರಯತ್ನಕ್ಕೆ ಗ್ರಾಮದ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಅಸ್ಪೃಶ್ಯತೆ ಆಚರಣೆಯು ಸಂಕೀರ್ಣ ಸಮಸ್ಯೆ. ಈ ರೀತಿಯ ಸಮಸ್ಯೆಗಳು ರಾಜ್ಯದ ವಿವಿಧೆಡೆ ಇವೆ. ‘ಪ್ರಜಾವಾಣಿ’ ಪತ್ರಿಕೆಯು ಇಂತಹ ಸಾಮಾಜಿಕ ಸಮಸ್ಯೆ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ. ವ್ಯಕ್ತಿಗತ ಸಮಸ್ಯೆಗಳು ಜಾತಿ ಜಾತಿ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತವೆ. ಗ್ರಾಮಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ಜಿಲ್ಲಾಡಳಿತವು ಕುಂದು ಕೊರತೆ ಸಭೆ ನಡೆಸಲಿದೆ’ ಎಂದು ಹೇಳಿದರು.

ದೌರ್ಜನ್ಯ ಸಹಿಸಿಕೊಂಡಿದ್ದೇವೆ: ‘ಗ್ರಾಮದಲ್ಲಿ 52 ವರ್ಷಗಳಿಂದ ಸವರ್ಣೀಯರ ದೌರ್ಜನ್ಯ ಸಹಿಸಿಕೊಂಡು ಬಂದಿದ್ದೇವೆ. ಗ್ರಾಮದ ದೇವಾಲಯಗಳಲ್ಲಿ ದಲಿತರಿಗೆ ಪ್ರವೇಶವಿಲ್ಲ. ಕುಡಿಯುವ ನೀರು ಪೂರೈಕೆಯಲ್ಲೂ ತಾರತಮ್ಯ ಮಾಡಲಾಗುತ್ತಿದೆ. ನಮಗೆ ಗ್ರಾಮದ ಹೊರಗೆ ಮನೆ ನಿರ್ಮಿಸಿಕೊಟ್ಟರೆ ಸವರ್ಣೀಯರಿಂದ ದೂರ ಇರುತ್ತೇವೆ’ ಎಂದು ದಲಿತ ಸಮುದಾಯದ ಮುನಿರಾಜು ಅಳಲು ತೋಡಿಕೊಂಡರು.

‘ಗ್ರಾಮದ ಸಿಸ್ಟನ್‌ನಲ್ಲಿ ಸವರ್ಣೀಯರು ನೀರು ಹಿಡಿದುಕೊಳ್ಳುವಾಗ ದಲಿತ ಮಹಿಳೆಯರು ನೀರು ಹಿಡಿಯುವಂತಿಲ್ಲ. ದಲಿತರಿಗೆ ಪ್ರತ್ಯೇಕ ಸಮಯ ನಿಗದಿಪಡಿಸಿ ನೀರು ಕೊಡಲಾಗುತ್ತಿದೆ’ ಎಂದು ನೊಂದು ನುಡಿದರು.

ಇದಕ್ಕೆ ಧ್ವನಿಗೂಡಿಸಿದ ದಲಿತ ಸಮುದಾಯದ ಮಂಜು ಮತ್ತು ಗೋಪಾಲ್, ‘ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅವಕಾಶ ನೀಡಿಲ್ಲ. ಗ್ರಾ.ಪಂ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಭವನಕ್ಕೆ ಜಾಗ ನೀಡಿಲ್ಲ. ನಮ್ಮ ಕಾಲೊನಿಗಳಲ್ಲಿ ಮೂಲಸೌಕರ್ಯಗಳಿಲ್ಲ’ ಎಂದು ದೂರಿದರು.

ಸುಳ್ಳು ಹೇಳುತ್ತಿದ್ದಾರೆ: ಆಗ ಮಧ್ಯಪ್ರವೇಶಿಸಿದ ಸಂತೇಹಳ್ಳಿ ಗ್ರಾ.ಪಂ ಅಧ್ಯಕ್ಷ ಸುರೇಶ್, ‘ಇವರು ಸುಳ್ಳು ಹೇಳುತ್ತಿದ್ದಾರೆ. ದಲಿತರು ದೇವಾಲಯ ಪ್ರವೇಶಿಸಬಾರದೆಂದು ಎಂದು ನಾವು ಹೇಳಿಲ್ಲ. ಮೊದಲಿನಿಂದಲೂ ಬಂದಿರುವ ಪದ್ಧತಿ ಮುಂದುವರಿದಿದೆ. ದಲಿತರು ಗ್ರಾಮದ ದೇವಾಲಯ ಪ್ರವೇಶಿಸುವುದಕ್ಕೆ ನಮ್ಮ ಆಕ್ಷೇಪವಿಲ್ಲ. ನೀರು ಪೂರೈಕೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದಲಿತ ಸಮುದಾಯದ ವೆಂಕಟೇಶ್ ಮತ್ತು ಶ್ರೀನಿವಾಸ್, ‘ತಾಲ್ಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಮೂರು ತಿಂಗಳಿಗೊಮ್ಮೆ ದಲಿತರ ಕುಂದು ಕೊರತೆ ಸಭೆ ನಡೆಸಿದ್ದರೆ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬಹುದಿತ್ತು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆ ನಡೆಸದೆ ನಿರ್ಲಕ್ಷ್ಯ ತೋರಿರುವುದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ’ ಎಂದು ಕಿಡಿಕಾರಿದರು.

ಸೌಕರ್ಯಕ್ಕೆ ಆದೇಶ: ದಲಿತರ ಕೇರಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ರಸ್ತೆ, ನೀರಿನ ಸಮಸ್ಯೆ ಮನಗೊಂಡು ಕಂದಾಯ ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸೌಕರ್ಯ ಕಲ್ಪಿಸುವಂತೆ ಆದೇಶ ನೀಡಿತು. ದಲಿತ ಸಮುದಾಯದಲ್ಲಿನ ಅರ್ಹರಿಗೆ ನೀವಶನ ನೀಡುವಂತೆ ತಾ.ಪಂ ಕಾರ್ಯ ನಿರ್ವಹಣಾಧಿಕಾರಿಗೆ ಅಧಿಕಾರಿಗಳು ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಆನಂದ್, ಎಸ್‌ಐ ಮುರಳಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !